ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಲೀಗಲ್ ನೋಟಿಸ್ ನೀಡಿದ ಟಿಎಂಸಿ ಮಾಜಿ ನಾಯಕ!
ಟಿಎಂಸಿ ಮಾಜಿ ಮುಖಂಡ ವಿನಯ್ ಮಿಶ್ರಾ ಅವರು ಮಂಗಳವಾರ ಪಶ್ಚಿಮ ಬಂಗಾಳ ವಿಧಾನಸಭಾ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಸುವೇಂದು ಅವರು ಜೂನ್ 11 ರ “ಸುಳ್ಳು” ಟ್ವೀಟ್ ಅನ್ನು ಅಳಿಸಲು ಒತ್ತಾಯಿಸಿದ್ದಾರೆ.
ಸುವೇಂದು ಅಧಿಕಾರಿಯವರು ಜೂನ್ 11 ರಂದು ಟ್ವೀಟ್‌ವೊಂದನ್ನು ಮಾಡಿದ್ದು, ಅದರಲ್ಲಿ, ಮಿಶ್ರಾ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಆದರೆ ಟಿಎಂಸಿಯ ಯುವ ವಿಭಾಗ ಪ್ರಧಾನ ಕಾರ್ಯದರ್ಶಿಯಾಗಿ ಅವರನ್ನು 2020ರಲ್ಲಿ ನೇಮಕ ಮಾಡಲಾಗಿದೆ ಎಂದು ಬರೆದಿದ್ದರು.
ಜಾನುವಾರು ಮತ್ತು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಗಳಲ್ಲಿ ಸಿಬಿಐ ತನಿಖೆಯನ್ನು ಎದುರಿಸುತ್ತಿರುವ ಮಾಜಿ ಟಿಎಂಸಿ ನಾಯಕ ಮಿಶ್ರಾ ಅವರು ತಮ್ಮ ವಕೀಲರ ಮೂಲಕ ಅಧಿಕಾರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
“2021 ರ ಜೂನ್ 11 ರಂದು ಟ್ವಿಟರ್ ಹ್ಯಾಂಡಲ್‌ನಿಂದ ಪ್ರಕಟವಾದ ಟ್ವೀಟ್‌ನಲ್ಲಿ ನೀವು ನನ್ನ ಕ್ಲೈಂಟ್ ವಿರುದ್ಧ ವಾಸ್ತವಿಕವಾಗಿ ತಪ್ಪಾದ ಮತ್ತು ದುರುದ್ದೇಶಪೂರಿತ ಹೇಳಿಕೆಯನ್ನು ನೀಡಿದ್ದೀರಿ” ಎಂದು ಮಿಶ್ರಾ ಅವರ ವಕೀಲರು ನೋಟಿಸ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: 2018ರ ಪ್ರತಿಭಟನೆ: ದುಷ್ಕೃತ್ಯ ಎಂದು 3 ವರ್ಷದ ನಂತರ JNU ವಿದ್ಯಾರ್ಥಿ ಸಂಘದ ಅಧ್ಯಕ್ಷೆಗೆ ನೋಟಿಸ್!
ಜೂನ್ 11 ರಂದು ಅಧಿಕಾರಿಯು ಟ್ವೀಟ್ ಮಾಡಿದ್ದು, “2018 ರಲ್ಲಿ ವಿನಯ್ ಮಿಶ್ರಾ ಅವರು ವನವಾಟು ಪೌರತ್ವವನ್ನು ಪಡೆದುಕೊಂಡಿದ್ದಾರೆ ಮತ್ತು ಭಾರತೀಯ ಪೌರತ್ವವನ್ನು ತ್ಯಜಿಸುತ್ತಿದ್ದಾರೆಂದು ತೋರುತ್ತದೆ. 2020 ರಲ್ಲಿ ಅದೇ ವ್ಯಕ್ತಿಯನ್ನು ಟಿಎಂಸಿ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ವಿದೇಶಿಯರಿಗೆ ರಾಜಕೀಯ ಪಕ್ಷದ ಭಾಗವಾಗಲು ಭಾರತೀಯ ಕಾನೂನು ಅನುಮತಿ ನೀಡುತ್ತದೆಯೇ? ಎಂದು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇನೆ” ಎಂದು ಬರೆದಿದ್ದರು.
ಈ ಬಗ್ಗೆ ಲೀಗಲ್ ನೋಟಿಸ್‌ನಲ್ಲಿ ವಿವರಿಸಿರುವ ಮಿಶ್ರಾ, “ತಾವು ಸೆಪ್ಟೆಂಬರ್ 16, 2020 ರಂದು ಭಾರತವನ್ನು ತೊರೆದಿದ್ದಾಗಿ ಹೇಳಿದ್ದಾರೆ. ಸಿಬಿಐ ತನ್ನ ವಿರುದ್ಧ ದನ ಮತ್ತು ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಗಳಲ್ಲಿ ಪ್ರಕರಣವನ್ನು ಪ್ರಾರಂಭಿಸಿತು. ಆ ಸಮಯದಲ್ಲಿ ಅವರು ಭಾರತದ ಪ್ರಜೆಯಾಗಿದ್ದರು. ಆ ವೇಳೆ, ತೃಣಮೂಲ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮನ್ನು ನೇಮಕ ಮಾಡಲಾಗಿತ್ತು” ಎಂದು ವಿವರಿಸಿದ್ದಾರೆ.
2020 ರ ಡಿಸೆಂಬರ್ 19 ರಂದು ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಮಿಶ್ರಾ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ರೆಡ್ ಕಾರ್ನರ್ ನೋಟಿಸ್ ನೀಡಿದೆ.
ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್ 16 ಕೋಟಿ ಹಗರಣ; ಆರೋಪ ಮಾಡಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ವಿಹೆಚ್‌ಪಿ ಸೂಚನೆ!

