ಬಿಎಸ್ವೈಗೆ ಮತ್ತೊಂದು ಸಂಕಷ್ಟ; ಸಿಎಂ ಕುರ್ಚಿ ಅಲುಗಾಡಿಸುತ್ತಿದೆ ಹಳೇ ಕೇಸ್!
ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆಯ ಚರ್ಚೆಯಿಂದಾಗಿ ಸಿಎಂ ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿರುವ ಸಿಎಂ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಳೆಯ ಕೇಸ್ವೊಂದರಿಂದ ಸಿಎಂ ಯಡಿಯೂರಪ್ಪನವರಿಗೆ ಹೊಸ ಸಮಸ್ಯೆ ಶುರುವಾಗಿದೆ. ಇದೂ ಕೂಡ ಅವರ ಸಿಎಂ ಕುರ್ಚಿ ಅಲುಗಾಡಿಸಲು ಕಾರಣವಾಗಬಹುದು ಎಂದೂ ಹೇಳಲಾಗುತ್ತಿದೆ.
ಸಿಎಂ ಕುಟುಂಬದ ವಿರುದ್ಧ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಿದ್ದಾರೆ. ಇಂದು ನವದೆಹಲಿಯ ಇಡಿ ಕಚೇರಿಗೆ ತೆರಳಿರುವ ಟಿ.ಜೆ. ಅಬ್ರಹಾಂ, PMLA (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸದ್ಯ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ದ ದೂರು ನೀಡಿರುವ ಅಬ್ರಹಾಂ ಅವರ ಆರೋಪದ ಪ್ರಕಾರ, ಒಟ್ಟು ಆರು ಮಂದಿ ವಿರುದ್ದ ದೂರು ನೀಡಿದ್ದು, ಈ ಪೈಕಿ ಸಿಎಂ ಯಡಿಯೂರಪ್ಪ ಅವರೇ ನಂಬರ್ 1 ಆರೋಪಿ. ನಂಬರ್ 2ನೇ ಆರೋಪಿಯಾಗಿ ಬಿಎಸ್ವೈ ಪುತ್ರ ವಿಜಯೇಂದ್ರ, ನಂಬರ್ 3ನೇ ಆರೋಪಿಯಾಗಿ ಬಿಎಸ್ವೈ ಮೊಮ್ಮಗ ಶಶಿಧರ ಮರಡಿ, 4ನೇ ಆರೋಪಿಯಾಗಿ ಬಿಎಸ್ವೈ ಮಗಳು ಪದ್ಮಾವತಿಯವರ ಅಳಿಯ ಸಂಜಯ್, ನಂಬರ್ 5ನೇ ಆರೋಪಿಯಾಗಿ ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಹಾಗೂ 6ನೇ ಆರೋಪಿಯಾಗಿ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ ಅವರನ್ನು ದೂರಿನಲ್ಲಿ ನಮೂದಿಸಲಾಗಿದೆ.
ಇದನ್ನೂ ಓದಿ: ಯುಪಿಯಲ್ಲಿ ರಾಜಕೀಯ ಸಂಚಲನ; ಅಖೀಲೇಶ್ರನ್ನು ಭೇಟಿಯಾದ 09 BSP ಶಾಸಕರು!
ಯಡಿಯೂರಪ್ಪ ಅವರೇ A-1 ಆರೋಪಿ ಆಗಿರುವುದರಿಂದ ಅವರ ಸಿಎಂ ಕುರ್ಚಿಗೂ ಕಂಟಕವಾಗಬಹುದು. ಯಡಿಯೂರಪ್ಪ ಮತ್ತು ಇತರೆ ಆರೋಪಿಗಳನ್ನು ವಿಚಾರಣೆಗೆ ಕರೆಯಬಹುದು. ಸಮನ್ಸ್ ನೀಡಿದರೆ ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ ಎನ್ನಲಾಗುತ್ತಿದೆ.
ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂದು ಬಿಜೆಪಿ ಹೈಕಮಾಂಡ್ ಕೇಳಿದೆ. ಅದಕ್ಕಾಗಿ ಕರ್ನಾಟಕದ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ಶಮನಗೊಳಿಸುವ ಉದ್ದೇಶದಿಂದ ಅರುಣ್ ಸಿಂಗ್ ಅವರನ್ನು ರಾಜ್ಯಕ್ಕೆ ಕಳುಹಿಸಲಿದ್ದು, 18 ರಂದು ಅರುಣ್ ರಾಜ್ಯ ಆಗಮಿಸಲಿದ್ದಾರೆ. ಅಂದು ನಡೆಯಲಿರುವ ಬಿಜೆಪಿ ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಆದರೆ, ಇದೆಲ್ಲದರ ನಡುವೆ ಬಿಎಸ್ವೈಗೆ ಹಳೇ ಕೇಸ್ ಕಂಟಕವಾಗಿ ಪರಿಣಮಿಸಿದ್ದು, ಹೈಕಮಾಂಡ್ ಬಿಎಸ್ವೈ ಕೈಹಿಡಿದರೂ, ಕೇಸ್ ಅವರನ್ನು ಕುರ್ಚಿಯಿಂದ ದೂರ ತಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಂಪೂರ್ಣ ಪ್ಯಾಕೇಜ್ಗಾಗಿ ಒತ್ತಾಯ; ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರ ಬಂಧನ!

