ಫ್ಯಾಕ್ಟ್‌ಚೆಕ್ : ʻಸ್ವಾವಲಂಬಿ ಸಾರಥಿʼ ಯೋಜನೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರುದ್ದ ಸಂಸದ ತೇಜಸ್ವಿ ಸೂರ್ಯ ಟ್ವೀಟ್

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಲ್ಯಾಣ ಯೋಜನೆಯಾದ ” ಸ್ವಾವಲಂಬಿ ಸಾರಥಿ”ಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಸಂಸದ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಮಧ್ಯಮ ವರ್ಗದ ಜನರು ತಮ್ಮ ಹಣವನ್ನು ಅಲ್ಪಸಂಖ್ಯಾತ (ಮುಸ್ಲಿಮರಿಗೆ) ಸಮುದಾಯಕ್ಕೆ ವಿನಿಯೋಗಿಸುವಂತಾಗಿದೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ.

ಕಷ್ಟಪಟ್ಟು ದುಡಿಯುವ ತೆರಿಗೆ ಪಾವತಿಸುವ ಮಧ್ಯಮ ವರ್ಗದ ಕುಟುಂಬಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ತನ್ನ ಪ್ರಮುಖ ಮತದಾರರ ತಳಹದಿಯನ್ನು ಭದ್ರಪಡಿಸಲು ಯಾವುದೇ ಹಂತಕ್ಕೆ ಹೋಗುತ್ತದೆ, ಎಂಬ ಹೇಳಿಕೆಯೊಂದಿಗೆ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಾಹೀರಾತಿನ ಪೇಪರ್ ಕಟ್ಟಿಂಗ್‌ಅನ್ನು ಹಂಚಿಕೊಂಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕರಿಗೆ ವಾಹನ ಖರೀದಿಗಾಗಿ ರೂ 3 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಈ ಹಣವನ್ನು ಹೊಂದಿಸಲು ಕಾಂಗ್ರೆಸ್ ಮಧ್ಯಮ ವರ್ಗದ ಜನರಿಂದ ಸಂಗ್ರಹಿಸಿದ ತೆರಿಗೆಯ ಪಾಲನ್ನು ಮುಸ್ಲಿಮರ ಓಲೈಕೆಗಾಗಿ ವಿನಿಯೋಗಿಸುತ್ತಿದೆ ಎಂದು ಹಂಚಿಕೊಂಡಿದ್ದಾರೆ.

ಈ ಹಣವನ್ನು ಭರಿಸಲು ಕಾಂಗ್ರೆಸ್ ಯಾವುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳುವ ಸಂಸದರು,
1. ಮಾರ್ಗದರ್ಶನ ಮೌಲ್ಯವನ್ನು 30% ಹೆಚ್ಚಿಸುತ್ತಿದೆ,
2. ವಿದ್ಯುತ್ ಶುಲ್ಕವನ್ನು ದ್ವಿಗುಣಗೊಳಿಸಿದೆ,
3. ಅಬಕಾರಿ ಸುಂಕ, ಹಾಲಿನ ಬೆಲೆಗಳು, ರಸ್ತೆ ತೆರಿಗೆ ಮತ್ತು 5% ಸೆಸ್ ಅನ್ನು ಹೆಚ್ಚಿಸಿದೆ ಎಂದು ಆರೋಪಿಸುತ್ತಾರೆ.ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವೆಬ್‌ಸೈಟ್‌ಅನ್ನು ಪರಿಶೀಲಿಸಿದಾಗ, ಕಂಡುಬಂದ ಅಂಶಗಳೆಂದರೆ

ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು-ನಾಲ್ಕು ಚಕ್ರದ ಗೂಡ್ಸ್​ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೇ ಉಳಿದ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಅರ್ಹತೆಗಳು

– ಯೋಜನೆಯ ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು
– ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
– 18 ರಿಂದ 55 ವರ್ಷದವರಾಗಿರಬೇಕು
– ವಾರ್ಷಿಕ ಆದಾಯವು 4.5 ಲಕ್ಷಕ್ಕಿಂತ ಕಡಿಮೆ ಇರಬೇಕು
– ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು

ವಾಸ್ತವವಾಗಿ ಈ ಯೋಜನೆ ಮುಸ್ಲಿಂ ಸಮುದಾಯವಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೂ ನೀಡಲಾಗುತ್ತಿದೆ. ಹಾಗಾಗಿ ಈ ಯೋಜನೆಯನ್ನು ಬಡ ಮತ್ತು ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡು ಜಾರಿ ಮಾಡಲಾಗಿದೆ.

ಈ ಯೋಜನೆ ಹಿಂದಿನಿಂದಲೂ ಇದೆ

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಡಿರುವ ಆರೋಪ ಕೋಮು ದ್ವೇಷ ಮತ್ತು ದ್ವೇಷ ರಾಜಕಾರಣದಿಂದ ಕೂಡಿದೆ ಎಂದು ಆಲ್ಟ್‌ ನ್ಯೂಸ್ ನ ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ್ದಾರೆ. ವಾಸ್ತವಾಗಿ ಈಗ ಜಾರಿಯಲ್ಲಿರುವ ʻಸ್ವಾವಲಂಬಿ ಸಾರಥಿʼ ಯೋಜನೆ ಬಿಜೆಪಿ ಅವಧಿಯಲ್ಲೂ ಇತ್ತು ಎಂಬುದಾಗಿ ಟ್ವೀಟ್ ಮಾಡಿದ್ದಾರೆ.

 

ಅಕ್ಟೋಬರ್ 2022ರಲ್ಲಿ ಆಕಾಶ್ ಸುನೀಲ್ ಎಂಬುವವರು ಟ್ವೀಟ್ ಮೂಲಕ @DOMGOK ಮಾಡಿದ ಮನವಿಯನ್ನು ಉಲ್ಲೇಖಿಸಿ ಜುಬೇರ್ ಟ್ವೀಟ್ ಮಾಡಿದ್ದಾರೆ.

ಈ ಟ್ವಿಟ್ ಪ್ರಕಾರ ತೇಜಸ್ವಿ ಸೂರ್ಯ ಆರೋಪಿಸಿರುವ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಈ ಯೋಜನೆ ಜಾರಿಯಲ್ಲಿತ್ತು ಆದರೆ ಅನುದಾನ ನೀಡದೆ ಅದನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, “ಚಾಲಕ ಚಾಲಕನಾಗಿ ಉಳಿಯಬಾರದು. ವಾಹನದ ಮಾಲೀಕರೂ ಆಗಬೇಕು. ಅವನು ತನ್ನ ಆಯ್ಕೆಯ 8 ಲಕ್ಷದವರೆಗಿನ ಮೌಲ್ಯದ ನಾಲ್ಕು ಚಕ್ರದ ವಾಹನವನ್ನು ಖರೀದಿಸಬಹುದು. ಸರ್ಕಾರವು 3 ಲಕ್ಷ ಸಹಾಯಧನವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

 

ನಾವು ಸಾಲಕ್ಕೂ ಸಹಾಯ ಮಾಡುತ್ತೇವೆ. ಅವರು ಕಾರಿನ ಮೌಲ್ಯದ 10% ಮುಂಗಡ ಪಾವತಿಯನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಕಾರಿನ ಮೌಲ್ಯವು 8 ಲಕ್ಷ ರೂ ಆಗಿದ್ದರೆ, ಅವರು 80,000 ಆರಂಭಿಕ ಪಾವತಿಯನ್ನು ಮಾಡಬೇಕಾಗುತ್ತದೆ. ನಾವು 3 ಲಕ್ಷ ಸಬ್ಸಿಡಿ ನೀಡುತ್ತೇವೆ. ಉಳಿದ ಮೊತ್ತಕ್ಕೆ ಬ್ಯಾಂಕ್‌ ಸಾಲ ನೀಡಲು ಸಹಾಯ ಮಾಡುತ್ತೇವೆ. ಹಿಂದಿನ ಸಿದ್ದರಾಮಯ್ಯನವರ ಆಡಳಿತದಲ್ಲಿ ಈ ಯೋಜನೆ ಇತ್ತು. ಬಿಜೆಪಿ ಅದನ್ನು ತೆಗೆದುಹಾಕಿದೆ” ಎಂದು ಹೇಳಿದರು.

ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು-ನಾಲ್ಕು ಚಕ್ರದ ಗೂಡ್ಸ್​ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೇ ಉಳಿದ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಹಾಗೆಯೇ ʻಸ್ವಾವಲಂಬಿ ಸಾರಥಿʼ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲದ ಶೇ.75 ರಷ್ಟು, ಗರಿಷ್ಠ ನಾಲ್ಕು ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಯೋಜನೆಯನ್ನು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಕೆ ಮಾಡಲು ಜಾರಿ ಮಾಡಲಾಗುತ್ತಿದೆ ಎಂದು ಕೋಮು ದ್ವೇಷದ ಹಿನ್ನಲೆಯಲ್ಲಿ ಬಿಜೆಪಿ ಸಂಸದ ಸುಳ್ಳು ಟ್ವೀಟ್ ಮಾಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : 5 ಸಾವಿರ ಸಾಧುಗಳನ್ನು ಹತ್ಯೆ ಮಾಡುವಂತೆ ಇಂದಿರಾ ಆದೇಶಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights