ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ; 70,000 ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಆಶ್ವಾಸನೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯು ನವೆಂಬರ್ 28 ರಿಂದ ಡಿಸೆಂಬರ್ 19ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಳಿಸಿರುವ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಥಳೀಯರಿಗೆ ಶೇ 100ರಷ್ಟು ಮೀಸಲಾತಿಯೊಂದಿಗೆ 70,000 ಉದ್ಯೋಗಗಳ ಭರವಸೆಯನ್ನು ನೀಡಿದೆ.
ಕೈಗಾರಿಕಾ ಸ್ನೇಹಿ ನೀತಿ ಮತ್ತು ಸ್ವಚ್ಛ, ಪಾರದರ್ಶಕ ಹಾಗೂ ಹೊಣೆಗಾರಿಕೆಯುತ ಆಡಳಿತವನ್ನು ನೀಡುವುದರ ಜೊತೆಗೆ ಖಾಸಗಿ ವಲಯದಲ್ಲಿಯೂ ಉದ್ಯೋಗ ದೊರಕಿಸುವ ಆಶ್ವಾಸನೆಯನ್ನು ನೀಡಿದೆ.
ಒತ್ತುವರಿದಾರರಿಂದ ಭೂಮಿಯನ್ನು ಮರಳಿ ಪಡೆಯುತ್ತೇವೆ. ಭಯೋತ್ಪಾದನೆ ಹಾಗೂ ಹಿಂಸಾಚಾರದೆಡೆಗಿನ ಶೂನ್ಯ ಸಹಿಷ್ಣುತೆಯನ್ನು ಪ್ರತಿಪಾದಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯನ್ನು ಬರೆದುಕೊಂಡಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ದೇವಿಂದರ್ ಸಿಂಗ್ ಮನ್ಯಾಲ್ ಮತ್ತು ಮುಖ್ಯ ವಕ್ತಾರ ಸುನೀಲ್ ಸೇತಿ ಅವರು ಡಿಡಿಸಿ ಚುನಾವಣೆಯ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಬಿಜೆಪಿಯ ಪ್ರಣಾಳಿಕೆ ಪ್ರಕಾರ 70,000 ಉದ್ಯೋಗ ಸೃಷ್ಟಿ ಮತ್ತು ಶೇ 100ರಷ್ಟು ಸರ್ಕಾರಿ ಉದ್ಯೋಗಗಳನ್ನು ಮೀಸಲಿರಿಸುತ್ತೇವೆ ಎಂದು ಹೇಳಿದೆ. ಕೈಗಾರಿಕಾ ನೀತಿಯು ಕೇಂದ್ರಾಡಳಿತ ಪ್ರದೇಶದಲ್ಲಿನ ಕೈಗಾರಿಕಾ ಪರಿಸರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿದೆ ಎಂದು ಹೇಳಿದೆ. ದಿನಗೂಲಿ ಕಾರ್ಮಿಕರು, ಸಾಮಾನ್ಯ ಮತ್ತು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆಯನ್ನು ಕೂಡ ನೀಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ: ಗುಪ್ಕರ್ ಒಕ್ಕೂಟದೊಂದಿಗೆ ಕಾಂಗ್ರೆಸ್ ಸ್ಪರ್ಧೆ ಖಚಿತ!