ಕೊರೊನಾ 3ನೇ ಅಲೆ; ಹೆಚ್ಚಲಿವೆ ಸಾವು-ನೋವುಗಳ ಸಂಖ್ಯೆ; ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆಗೆ ತಜ್ಞರ ಸಲಹೆ!

ಕೊರೊನಾ 2ನೇ ಅಲೆಯಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೂರನೇ ಅಲೆಯ ಆತಂಕ ರಾಜ್ಯದಲ್ಲಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಸಾವು-ನೋವುಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಹೇಳಿದ್ದು, ಅತಿ ಹೆಚ್ಚು ಐಸಿಯು ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಬಹುಶಃ ಸೆಪ್ಟೆಂಬರ್‌ ಅಂತ್ಯದಲ್ಲಿ ಮೂರನೇ ಅಲೆ ಆರಂಭವಾಗಬಹುದು, ಅಕ್ಟೋಬರ್‌ ಮತ್ತು ನವೆಂಬರ್ ತಿಂಗಳಿನಲ್ಲಿ ರಾಜ್ಯವು ಮೂರನೇ ಅಲೆಯ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಇನ್ನೂ ಮೂರು ತಿಂಗಳುಗಳ ಕಾಲಾವಕಾಶ ಇರುವುದರಿಂದ ಸರ್ಕಾರ 3ನೇ ಅಲೆಯನ್ನು ಎದುರಿಸಲು ಸಾಕಷ್ಟು ಕ್ರಮಗಳನ್ನು ಈಗಿಂದಲೇ ಕೈಗೊಳ್ಳಬೇಕು ಎಂದು ತಜ್ಷರು ತಿಳಿಸಿದ್ದಾರೆ.

3ನೇ ಅಲೆಯಲ್ಲಿ ಮಕ್ಕಳಿಗೆ ಅತಿ ಹೆಚ್ಚು ಸಮಸ್ಯೆಗಳು ಎದುರಾಗಲಿದೆ. ಹೀಗಾಗಿ ರಾಜ್ಯದ ಜಿಲ್ಲಾಸ್ಪತ್ರೆಗಳು ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿಯೂ ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ. ಈಗ ರಾಜ್ಯದಲ್ಲಿ ಕೇವಲ 1,300 ಐಸಿಯು ಬೆಡ್ ಗಳ ವ್ಯವಸ್ಥೆ ರಾಜ್ಯದಲ್ಲಿ ಇದೆ. ಇವುಗಳನ್ನು 4,500ಕ್ಕೆ ಹೆಚ್ಚಿಸುವಂತೆಯೂ ಸೂಚನೆ ನೀಡಿದ್ದಾರೆ.

ಸದ್ಯ, ರಾಜ್ಯದಲ್ಲಿ 2ನೇ ಅಲೆಯ ಅಬ್ಬರ ಇಳಿಮುಖವಾಗಿದೆ. ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸಾವುಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗುತ್ತಿದೆ.

ಆದರೆ, 2ನೇ ಅಲೆಯ ಆರಂಭದ ಒಂದು ತಿಂಗಳು ಇಡೀ ದೇಶ ತತ್ತರಿಸಿ ಹೋಗಿತ್ತು. ಆಕ್ಸಿಜನ್‌ ಕೊರತೆಯಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಉತ್ತರ ಪ್ರದೇಶದಲ್ಲಿ ಶವಗಳ ಅಂತ್ಯ ಸಂಸ್ಕಾರವನ್ನೂ ಮಾಡಲಾಗದೆ ಸರ್ಕಾರ ಶವಗಳನ್ನು ನದಿ ತೀರದ ಮರಳಿನಲ್ಲಿ ಹೂತು ತನ್ನ ನಿರ್ಲಕ್ಷ್ಯವನ್ನೂ, ಅಮಾನವೀಯನ್ನೂ ಪ್ರದರ್ಶಿಸಿತು.

ಇದೀಗ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ಅನ್ನು ಸಡಿಲಗೊಳಿಸಲಾಗಿದೆ. ಜೂನ್‌ 21ರಿಂದ ಅನ್‌ಲಾಕ್‌ 2.0 ಆರಂಭವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜೂನ್‌ 21ರಿಂದ ಅನ್‌ಲಾಕ್‌ 2.0: ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ!?

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights