ಹೊಸ ಪ್ರಕರಣಗಳು ದಾಖಲಾಗದಿದ್ದಲ್ಲಿ ಎಪ್ರಿಲ್ 7ರೊಳಗೆ ತೆಲಂಗಾಣ ಕೊರೊನ ಮುಕ್ತ: ಕೆ ಸಿ ಆರ್

ಹೊಸ ಸೋಂಕಿನ ಪ್ರಕರಣಗಳು ದಾಖಲಾಗದೆ ಇದ್ದರೆ, ತೆಲಂಗಾಣ ರಾಜ್ಯ ಕೊರೊನ ವೈರಸ್ ನಿಂದ ಎಪ್ರಿಲ್ 7ರೊಳಗೆ ಮುಕ್ತವಾಗಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಭಾನುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮುಖಮಂತ್ರಿ 25,935 ಜನರನ್ನು ಪ್ರತ್ಯೇಕಗೊಳಿಸಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಇವರೆಲ್ಲರ 14 ದಿನಗಳ ಪ್ರತ್ಯೇಕತೆ ಎಪ್ರಿಲ್ 7ಕ್ಕೆ ಪೂರ್ಣಗೊಳ್ಳಲಿದೆ. “ಅಲ್ಲಿಯವರೆಗೂ ಸೋಂಕಿನ ಯಾವುದೇ ಹೊಸ ಪ್ರಕರಣ ದಾಖಲಾಗದಿದ್ದರೆ, ಎಪ್ರಿಲ್ 7ರ ನಂತರ ಯಾವುದೇ ಕೊರೊನ ಸೋಂಕಿತ ರೋಗಿ ರಾಜ್ಯದಲ್ಲಿ ಇರುವುದಿಲ್ಲ. ಲಾಕ್ ಡೌನ್ ವೇಳೆ ವೈಯಕ್ತಿಕ ನಿಯಂತ್ರಣ ಬಹಳ ಮುಖ್ಯ” ಎಂದು ಅವರು ಹೇಳಿರುವುದಾಗಿ ದ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ತೆಲಂಗಾಣದಲ್ಲಿ ಇಲ್ಲಿಯವರೆಗೂ ಒಟ್ಟು 70 ಕೊರೊನ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. 11 ಜನಕ್ಕೆ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಂತಿಮ ಪರೀಕ್ಷೆಯ ನಂತರ ಅವರು ಸೋಂಕು ಮುಕ್ತರಾಗಿದ್ದಾರೆ. ಅವರನ್ನು ಸೋಮವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ವಲಸೆ ಕಾರ್ಮಿಕರ ಪ್ರಶ್ನೆಗೆ ಉತ್ತರಿಸಿರುವ ಅವರು, ರಾಜ್ಯ ಸರ್ಕಾರ ಎಲ್ಲರಿಗೂ 12 ಕೆಜಿ ಅಕ್ಕಿ ಮತ್ತು 500 ರೂ ನಗದು ನೀಡಿ, ಅವರಿಗೆ ವಸತಿಯನ್ನು ಕಲ್ಪಿಸಲಿದೆ ಎಂದಿದ್ದು “ತೆಲಂಗಾಣದಲ್ಲಿ ಯಾರೂ ಉಪವಾಸ ಇರಬಾರದು. ವಲಸೆ ಕಾರ್ಮಿಕರು ತೆಲಂಗಾಣ ಅಭಿವೃದ್ಧಿಗೆ ಬಂದಿದ್ದೀರಿ. ಆದುದರಿಂದ ನೀವು ನಮ್ಮ ಕುಟುಂಬ ಸದಸ್ಯರು. ನಾವು ನಿಮ್ಮ ಹಿತ ಕಾಪಾಡುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ರಾಜ್ಯಗಳಿಗೆ ಹಿಂದಿರುಗಬೇಡಿ” ಎಂದಿರುವ ಕೆಸಿಆರ್ ಅವರ ಊಟ, ವಸತಿ, ಆರೋಗ್ಯ, ಔಷಧಗಳನ್ನು ರಾಜ್ಯ ಸರ್ಕಾರ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರ ಬಗೆಗಿನ ಪ್ರಶ್ನೆಗೆ “ಜನ ಮನೆಯೊಳಗೇ ಇರುವ ನಿಯಮವನ್ನು ಮುರಿದರೆ, 24 ಘಂಟೆಗಳ ಕರ್ಫ್ಯೂ ಹಾಕಬೇಕಾದ ಪರಿಸ್ಥಿತಿ ಬರಬಹುದು. ಅದರ ನಂತರವೂ ಜನ ಬೀದಿಗಳಲ್ಲಿ ಓಡಾಡಿದರೆ ಸೇನೆಯನ್ನು ಕರೆದು, ಕಂಡಲ್ಲಿ ಗುಂಡು ಹಾರಿಸುವ ಆದೇಶ ಹೊರಡಿಸಬೇಕಾಗಬಹುದು” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights