ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ; ಯಡಿಯೂರಪ್ಪನವರೇ ಮುಂದಿನ ದಿನಗಳಲ್ಲೂ ಸಿಎಂ: ಅರುಣ್‌ ಸಿಂಗ್‌ ಸ್ಪಷ್ಟನೆ

ಕೊರೊನಾ ನಡುವೆಯೂ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತೆರೆ ಎಳೆದಿದ್ದಾರೆ. ಇಂದು (ಬುಧವಾರ) ರಾಜ್ಯಕ್ಕೆ ಆಗಮಿಸಿರುವ ಅವರು, ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಯಡಿಯೂರಪ್ಪನವರೇ ಮುಂದಿನ ದಿನಗಳಲ್ಲಿಯೂ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹಲವು ದಿನಗಳಿಂದ ನಾಯಕತ್ವ ಬದಲಾವಣೆಯ ಚರ್ಚೆ ಭುಗಿಲೆದ್ದಿತ್ತು. ಬಿಜೆಪಿಯಲ್ಲಿದ್ದ ಬಿಕ್ಕಟ್ಟನ್ನು ಬಗೆಹರಿಸಲು ಮೂರು ದಿನಗಳ ಭೇಟಿಗಾಗಿ ಅರುಣ್‌ ಸಿಂಗ್‌ ರಾಜ್ಯಕ್ಕೆ ಬಂದಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿರುವ ಅವರು,” ಸರ್ಕಾರ, ಶಾಸಕರು, ಸಚಿವರು ಮತ್ತು ಸಿಎಂ ಯಡಿಯೂರಪ್ಪ ಹಗಲು ರಾತ್ರಿ ದುಡಿದಿದ್ದಾರೆ. ನಮಗೆ ಎಲ್ಲಾ ಶಾಸಕರು, ಸಂಸದರು ಒಂದೇ. ನಾಯಕತ್ವ ಬದಲಾವಣೆ ಬಗ್ಗೆ ಅವರು ಮಾತನಾಡುವುದು ಸಹಜ. ಆದರೆ, ಹೈಕಮಾಂಡ್ ಪ್ರತಿ ಬಾರಿಯೂ ಹೇಳಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ವಿರುದ್ಧ ಹೆಚ್ಚುತ್ತಿರುವ ದೂರುಗಳ ಬಗ್ಗೆಯೂ ಅರುಣ್ ಸಿಂಗ್ ಬಿಜೆಪಿ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಅವರು ತಮ್ಮದೇ ಪಕ್ಷದ ಸಹೋದ್ಯೋಗಿಗಳಿಂದ ಟೀಕೆ ಮತ್ತು ದೂರುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ರಾಜ್ಯದಲ್ಲಿಯೂ ಉತ್ತರ ಪ್ರದೇಶದ ಮಾದರಿಯ “ವಿಮರ್ಶೆ ಸಭೆಗಳನ್ನು” ನಡೆಸಲಾಗುತ್ತಿದೆ ಎನ್ನಲಾಗಿದೆ.

“ಅರುಣ್ ಸಿಂಗ್ ಅವರು ಒಬ್ಬ ರಾಷ್ಟ್ರೀಯ ನಾಯಕ. ಅವರು ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ನಾಯರುಕ ಯಾವುದೇ ನಿರ್ಧಾರ ತೆಗೆದುಕೊಂಡರೂ ಪಕ್ಷದ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಕೇಳುತ್ತಾರೆ” ಎಂದು ಈಶ್ವರಪ್ಪ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ರಾಜ್ಯ ಬಿಜೆಪಿಯಲ್ಲಿಯೇ ಅನೇಕರು ಮುಂದಾಗಿದ್ದು, ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೈಕಮಾಂಡ್ ಹೇಳಿದರೇ ರಾಜೀನಾಮೆ ನಿಡುವುದಾಗಿ ತಿಳಿಸಿದ್ದ ಸಿಎಂ, ನಂತರ ಮುಂದಿನ 2 ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದಾರೆ. ಸದ್ಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ರಾಜೀನಾಮೆ, ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.

Read Also:  ಮನಿ ಲಾಂಡರಿಂಗ್ ಪ್ರಕರಣ: ಮಾಜಿ ಶಾಸಕರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights