ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸಂತ್ರಸ್ತ ಯುವತಿ ಪರವಾಗಿ ಪದ್ಮಶ್ರೀ ಪರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ವಕಾಲತ್ತು!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪರವಾಗಿ ಪದ್ಮಶ್ರೀ ಪರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ಅವರ ವಕಾಲತ್ತು ವಹಿಸಲು ಮುಂದೆ ಬಂದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ.

ಲಿಂಗ ಸಮಾನತೆ, ಮಾನವ ಹಕ್ಕುಗಳಿಗಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇಂದಿರಾ ಜೈಸಿಂಗ್‌ ಅವರು ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ್ದಾರೆ. ಈಗ ಅವರು ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಪರವಾಗಿ ಎಂಟ್ರಿ ಕೊಟ್ಟಿದ್ದಾರೆ. ಇದು ಪೊಲೀಸ್ ವಲಯದಲ್ಲಿ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಎಸ್ಐಟಿ ತನಿಖೆ ನಿರ್ಣಾಯಕ ಹಂತ ತಲುಪಿರುವ ಬೆನ್ನಲ್ಲೇ, ಜೂನ್ 23 ರಂದು ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ವಿಶೇಷ ತನಿಖಾ ತಂಡ(SIT) ಸ್ವತಂತ್ರವಾಗಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಸಿಬಿಐ ತನಿಖೆ ನಡೆಸಬೇಕು ಎಂದು ಸಂತ್ರಸ್ತ ಯುವತಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠದ ಮುಂದೆ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಬೇಕು’ ಎಂದು ಅರ್ಜಿದಾರರ ಪರ ವಕೀಲರಾದ ಇಂದಿರಾ ಜೈಸಿಂಗ್‌ ಕೋರಿದ್ದಾರೆ.

ಇದನ್ನೂ ಓದಿ: ಸಿಡಿ ಪ್ರಕರಣ: ಜಾರಕಿಹೊಳಿ ವಿರುದ್ಧ FIR ದಾಖಲಿಸದ ಕಮಲ್ ಪಂತ್‌ ವಿರುದ್ಧ ದಾಖಲಾಯ್ತು ಖಾಸಗೀ ದೂರು!‌

ರಾಜ್ಯ ರಾಜಕಾರಣದಲ್ಲಿ ಸಂಚನಲ ಮೂಡಿಸಿ, ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಕಾರಣವಾಗಿದ್ದ ಸಿಡಿ ಪ್ರಕರಣ ಇಂದಿರಾ ಜೈಸಿಂಗ್ ಆಗಮನದಿಂದ ಮತ್ತೆ ಹೊಸ ಆರಂಭ ಪಡೆಯಲಿದೆ ಎಂದು ಹೇಳಲಾಗುತ್ತಿದೆ.

ಲಿಂಗ ಸಮಾನತೆ ಹಾಗೂ ಮಾನವ ಹಕ್ಕುಗಳ ಹೋರಾಟ ವಿಚಾರವಾಗಿ ಇಂದಿರಾ ಜೈಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2005 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2018 ರಲ್ಲಿ ಫಾರ್ಚ್ಯೂನ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇಂದಿರಾ ಕೂಡ ಒಬ್ಬರು. ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಇಂದಿರಾ ಜೈಸಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅಡಿಷನಲ್ ಸಾಲಿಸಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ವಕೀಲರು ಎಂಬ ಕೀರ್ತಿ ಕೂಡ ಇವರಿಗಿದೆ.

ಇಂದಿರಾ ಜೈಸಿಂಗ್, 1940 ಜೂನ್ 3 ಮುಂಬೈನಲ್ಲಿ ಜನಿಸಿದ್ದರು. ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ 1962 ರಲ್ಲಿ ಪದವಿ ಮುಗಿಸಿದ್ದರು. ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ಇವರ ಎಂಟ್ರಿ ಹಲವು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಅತ್ಯಾಚಾರ ಸಂತ್ರಸ್ಥೆಯ ಪರ ವಕೀಲ ಜಗದೀಶ್‌ ಯಾರು ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights