ಹಾಡು ಹಗಲೇ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಭೀಕರ ಹತ್ಯೆ!
ಮಾಜಿ ಬಿಬಿಎಂಪಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಛಲವಾದಿಪಾಳ್ಯ ವಾರ್ಡ್‌ನ ಫ್ಲವರ್ ಗಾರ್ಡನ್‌ನಲ್ಲಿ ತಮ್ಮ ಕಚೇರಿಯ ಬಳಿ ಬಡ ಜನರಿಗೆ ಫುಡ್ ಕಿಟ್ ಹಂಚುತ್ತಿದ್ದ ವೇಳೆ ರೇಖಾ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ರಕ್ತಸ್ರಾವವಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ಅವರು ಆಸ್ಪತ್ರೆಯ ಬಳಿ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳನ್ನು ಶೋಭನ್ ಅಂಡ್ ಗ್ಯಾಂಗ್‌ನವರು ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಆದ ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರ ಫೆಬ್ರವರಿ 07ರಂದು ಈ ಗುಂಪು ಕೊಚ್ಚಿ ಕೊಲೆ ಮಾಡಿತ್ತು. ಇದೀಗ, ಮೂರು ವರ್ಷಗಳ ನಂತರ, ರೇಖಾ ಅವರನ್ನು ಕೊಲೆ ಮಾಡಲಾಗಿದೆ. ಹಳೆಯ ವೈಷಮ್ಯವೇ ಕೊಲೆ ಕಾರಣವಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಚಿಕ್ಕಪೇಟೆ, ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೆಂಡರ್ ವಿಚಾರದಲ್ಲಿ ಕದಿರೇಶ್ ಮತ್ತು ಶೋಭನ್ ಗ್ಯಾಂಗ್ ನಡುವೆ ವೈಷಮ್ಯ ಬೆಳೆದಿತ್ತು. ಹೀಗಾಗಿ ರೇಖಾ ಅವರ ಪತಿ ಕದಿರೇಶ್ ಅವರನ್ನು ಆ ಗುಂಪು ಹತ್ಯೆ ಮಾಡಿತ್ತು. ಶೋಭನ್ ಜೊತೆಯಲ್ಲಿದ್ದ ಹಳೆಯ ರೌಡಿಶೀಟರ್ ಪೀಟರ್ ನಿಂದ ರೇಖಾ ಕೊಲೆ ನಡೆದಿರಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಜೀವ್ ಪಾಟೀಲ್ ಶಂಕೆ ವ್ಯಕ್ತ ಪಡಿಸಿದ್ದಾರೆ.
ರೇಖಾ ಅವರ ಕೊಲೆ ಪೂರ್ವ ನಿಯೋಜಿತವಾದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಟಿವಿಗಳನ್ನು ಮೇಲೆ ತಿರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ನೋಡಿ: ತಬ್ಲಿಘಿಗಳ ವಿರುದ್ದ ಸುಳ್ಳು ಪ್ರಸಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ನ್ಯೂಸ್ 18 ಕನ್ನಡ!