FACT CHECK | ಅತ್ಯಾಚಾರ ನಡೆದ ಕೋಲ್ಕತ್ತಾದ ಟ್ರೈನಿ ವೈದ್ಯೆಯ ತಂದೆಯ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಮೃತದೇಹವನ್ನು ಸ್ಟ್ರೆಚರ್ ಮೇಲೆ ಹೊರತೆಗೆಯುತ್ತಿರುವ ವಿಡಿಯೋ ಇದೀಗ ವ್ಯಾಪಕವಾಗಿ ಶೇರ್ ಆಗುತ್ತಿದೆ. ಒಬ್ಬ ವ್ಯಕ್ತಿ ಸ್ಟ್ರೆಚರ್‌ನ ಮುಂದೆ ನಡೆದುಕೊಂಡು ಬರುತ್ತಿದ್ದು ಸರತಿ ಸಾಲಿನಲ್ಲಿ ನಿಂತಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೈ ಮುಗಿಯುತ್ತಿರುವುದನ್ನು ಕಾಣಬಹುದು.
ಇವರು ಕೋಲ್ಕತ್ತಾದ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆ, ತಮ್ಮ ಮಗಳ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಇದು ಕೋಲ್ಕತ್ತಾ ವೈದ್ಯೆ ಮೌಮಿತಾ ಅವರ ತಂದೆ. ಸಾವಿನ ದುಃಖದ ನಡುವೆ ಆ ತಂದೆಯ ಧೈರ್ಯ ನೋಡಿ. ನಮ್ಮ ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಆ ದೇವರು ಇನ್ನಷ್ಟು ಶಕ್ತಿ ನೀಡಲಿ.#justiceformumita https://t.co/uBCHV951W7
— ಅರುಣ್ ಕುಮಾರ್ ಹಿಂದೂ (@arukumrhin11669) August 22, 2024
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅರುಣ್ ಕುಮಾರ್ ಎಂಬವರು ಆಗಸ್ಟ್ 22, 2024 ರಂದು ಈ ವಿಡಿಯೋವನ್ನು ರೀಪೋಸ್ಟ್ ಮಾಡಿಕೊಂಡಿದ್ದು, ‘ಇದು ಕೋಲ್ಕತ್ತಾ ವೈದ್ಯೆ ಮೌಮಿತಾ ಅವರ ತಂದೆ. ಸಾವಿನ ದುಃಖದ ನಡುವೆ ಆ ತಂದೆಯ ಧೈರ್ಯ ನೋಡಿ. ನಮ್ಮ ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಆ ದೇವರು ಇನ್ನಷ್ಟು ಶಕ್ತಿ ನೀಡಲಿ.’ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
ಹಾಗೆಯೆ ಇವರು ಕೋಲ್ಕತ್ತಾ ವೈದ್ಯೆಯ ತಂದೆ ಎಂಬ ಅಡಿಬರಹದೊಂದಿಗೆ ಕೆಲವರು ಹಂಚಿಕೊಂಡಿರುವ ವಿಡಿಯೋಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 19, 2024 ರಂದು ಇದೇ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿರುವುದು ಲಭ್ಯವಾಗಿದೆ. ಹೀಗಾಗಿ ಕೋಲ್ಕತ್ತಾ ಘಟನೆ ನಡೆಯುವ ಒಂದೂವರೆ ತಿಂಗಳ ಮೊದಲೇ ಈ ವೈರಲ್ ವಿಡಿಯೋ ಅಂತರ್ಜಾಲದಲ್ಲಿ ಲಭ್ಯವಿತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
View this post on Instagram
Its_mdhaka ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು 19 ಜೂನ್, 2024 ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಮೇಲೆ ಕ್ಯಾಪ್ಷನ್ ಕೂಡ ನೀಡಲಾಗಿದ್ದು, ‘28 ವರ್ಷದ ವಿಪಿನ್ ಮೆಹ್ತಾ, ರಸ್ತೆ ಅಪಘಾತದಲ್ಲಿ ಎರಡು ದಿನ ಆಸ್ಪತ್ರೆಯಲ್ಲಿದ್ದು ಸಾವನ್ನಪ್ಪಿದ್ದಾರೆ. ಬಳಿಕ ಇವರ ದೇಹವನ್ನು ದಾನ ಮಾಡಲಾಗಿದೆ. ಮೆಹ್ತಾ ಅವರು ಮೂಲತಃ ರಾಜಸ್ಥಾನದ ಜಲೋರ್‌ನವರಾಗಿದ್ದರು ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಾಸಿಸುತ್ತಿದ್ದರು’ ಎಂದು ಬರೆಯಲಾಗಿದೆ.
ಈ ಮಾಹಿತಿಯನ್ನು ಆದರಿಸಿ ನಾವು ಗೂಗಲ್ ಸರ್ಚ್ನಲ್ಲಿ ಹುಡುಕಿದಾಗ ಜೂನ್ 2, 2024 ರಂದು ನ್ಯೂಸ್ 18 ನಲ್ಲಿ ಪ್ರಕಟವಾದ ಲೇಖನ ಸಂಪೂರ್ಣ ವಿಷಯವನ್ನು ತಿಳಿಸಿತು. ಸುದ್ದಿಯ ಪ್ರಕಾರ, ವಿಪಿನ್ ಮೆಹ್ತಾ ಅವರಿಗೆ ವಿಶಾಖಪಟ್ಟಣಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿದೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ವಿಪಿನ್ ಸಾವಿನ ನಂತರ ಅವರ ತಂದೆ ಪ್ರವೀಣ್ ಮೆಹ್ತಾ ತನ್ನ ಮಗನ ದೇಹವನ್ನು ಇತರರ ಜೀವ ಉಳಿಸಲು ದಾನ ಮಾಡಿದರು. ಪ್ರವೀಣ್ ಅವರ ಈ ಶ್ಲಾಘನೀಯ ಕೆಲಸಕ್ಕಾಗಿ, ಆಸ್ಪತ್ರೆಯ 300 ಸದಸ್ಯರು ಗೌರವ ರಕ್ಷೆ ನೀಡುವ ಮೂಲಕ ವಿಪಿನ್ ಮೆಹ್ತಾ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಹೊರ ಕಳುಹಿಸಿದರು ಎಂದು ಬರೆಯಲಾಗಿದೆ. ಸದ್ಯ ವೈರಲ್ ವಿಡಿಯೋದಲ್ಲಿ ಗೋಚರಿಸುತ್ತಿರುವಂತೆ ಸ್ಟ್ರೆಚರ್ ಮುಂದೆ ಕೈಮುಗಿದು ಹೋಗುತ್ತಿರುವವರು ವಿಪಿನ್ ತಂದೆ ಪ್ರವೀಣ್ ಮೆಹ್ತಾ ಆಗಿದ್ದಾರೆ.
ದೈನಿಕ್ ಭಾಸ್ಕರ್ ಕೂಡ ಈ ಬಗ್ಗೆ ಸುದ್ದಿ ಪ್ರಕಟಿಸಿದೆ. ಇದು ವಿಶಾಖಪಟ್ಟಣಂನ ಪಿನಾಕಲ್ ಆಸ್ಪತ್ರೆಯ ವೀಡಿಯೊ ಎಂದು ಕ್ಯಾಪ್ಷನ್ ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗುತ್ತಿರುವ ವಿಡಿಯೋ ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆಯದ್ದಲ್ಲ. ಇದು ಜೂನ್ 2024 ರ ವಿಡಿಯೋ ಆಗಿದ್ದು, ಇಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗನ ದೇಹವನ್ನು ದಾನ ಮಾಡಿದ್ದಕ್ಕಾಗಿ ಆಸ್ಪತ್ರೆ ಸಿಬ್ಬಂದಿಗಳು ಶ್ಲಾಘಿಸುತ್ತಿರುವ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆಯೇ?