ICC world cup: ಸೋಲುಂಡ ಭಾರತ ತಂಡವನ್ನು ‘ದಂಡುಪಾಳ್ಯದ ದಂಡಪಿಂಡಗಳು’ ಎಂದ ದಿಗ್ವಿಜಯ ನ್ಯೂಸ್‌? ಭಾರೀ ಆಕ್ರೋಶ

ಬುಧವಾರವಷ್ಟೇ ಅಂತ್ಯಗೊಂಡ 2021ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶ ಪಡೆದಿದ್ದ ಟೀಂ ಇಂಡಿಯಾ, ಪೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ದ ಸೋಲನುಭವಿಸಿ, ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಫೈನಲ್‌ ಮ್ಯಾಚ್‌ನಲ್ಲಿ ಸೋತ ಟೀಂ ಇಂಡಿಯಾವನ್ನು ‘ದಂಡುಪಾಳ್ಯದ ದಂಡಪಿಂಡಗಳು’ ಎಂದು ಕನ್ನಡದ ನ್ಯೂಸ್‌ ಚಾನೆಲ್ ‘ದಿಗ್ವಿಜಯ ನ್ಯೂಸ್‌’ ಕರೆದಿದೆ ಎಂದು ಹೇಳಲಾಗಿದೆ. ಹೀಗಾಗಿ ಚಾನೆಲ್‌ ವಿರುದ್ದ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಭಾರತ ಮೊದಲ ಇನಿಂಗ್ಸ್‌ನಲ್ಲಿ 217 ರನ್ ಗಳಿಸಿತ್ತು. ನಂತರ ಕಿವಿ ತಂಡವು 249 ರನ್ ಗಳಿಸಿ 32 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 170 ರನ್ ಗಳಿಸಲು ಸಾಧ್ಯವಾಯಿತು, ಈ ಕಾರಣದಿಂದಾಗಿ ನ್ಯೂಜಿಲೆಂಡ್‌ಗೆ ಗೆಲ್ಲಲು 138 ರನ್‌ಗಳ ಅಗತ್ಯವಿತ್ತು. ನ್ಯೂಜಿಲೆಂಡ್ ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಗೆಲುವು ಸಾಧಿಸಿತು.

ಪೈನಲ್‌ ಸೋಲುಂಡ ಭಾರತ ತಂಡದ ಅಭಿಮಾನಿಗಳು ನಿರಾಸೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ದಿಗ್ವಿಜಯ ನ್ಯೂಸ್ ತಂಡವನ್ನು ದಂಡುಪಾಳ್ಯದ ದಂಡಪಿಂಡಗಳು ಎಂದು ಕರೆದು ಅವಮಾನಿಸಿದೆ ಎಂದು ಆರೋಪಿಸಲಾಗಿದೆ. ದಿಗ್ವಿಜಯ ನ್ಯೂಸ್ ನಡೆಸಿದೆ ಎನ್ನಲಾಗಿರುವ ಕಾರ್ಯಕ್ರಮದ ಸ್ಕ್ರೀನ್‌ ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಚಾನೆಲ್ ವಿರುದ್ದ ಕಿಡಿಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾದ ನಂತರ ಸದ್ಯಕ್ಕೆ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.

ಭಾರತ ತಂಡದ ಮಾಜಿ ಕ್ರಿಕೆಟಿಗ, ಕನ್ನಡಿಗ ದೊಡ್ಡ ಗಣೇಶ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು ಚಾನೆಲ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತನ್ನ ಟ್ವೀಟ್‌ನಲ್ಲಿ, “ನಮ್ಮ ಈ ಕನ್ನಡ ನ್ಯೂಸ್ ಚ್ಯಾನಲ್‌ಗಳಿಗೆ ವೃತ್ತಿಪರ ನೀತಿ ಎನ್ನವುದೇ ಇಲ್ವಾ? ಒಂದು ಪಂದ್ಯ ಸೋತ ಮಾತ್ರಕ್ಕೆ ನಮ್ಮ ಆಟಗಾರರನ್ನು ಇಂತಹ ಕೀಳು ಮಟ್ಟದ ಶೀರ್ಷಿಕೆಯಿಂದ ಟೀಕೆ ಮಾಡೋದು ಎಷ್ಟರ ಮಟ್ಟಿಗೆ ಸರಿ ?” ಎಂದು ದಿಗ್ವಿಜಯ ನ್ಯೂಸ್‌ಗೆ ಪ್ರಶ್ನೆ ಮಾಡಿದ್ದಾರೆ.

https://twitter.com/KrishKrushik/status/1408081747707719682?s=20

ಫೇಸ್‌ಬುಕ್‌ನಲ್ಲಿ ಕೂಡಾ ದಿಗ್ವಿಜಯ ನ್ಯೂಸ್‌ ಪದ ಬಳಕೆಗೆ ಆಕ್ರೋಶ ವ್ಯಕ್ತವಾಗಿದೆ. ಬೋಪಣ್ಣ ಬೊಳ್ಳಿಯಂಗಡ ಅಪ್ಪು ಎಂಬವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ಈ ಚಾನಲ್ ಗಳು ಅದೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತವೆ ಎನ್ನುವುದು ಈ ಶಿರ್ಷಿಕೆ ನೋಡಿದರೆ ತಿಳಿಯುತ್ತದೆ. ದಿಗ್ವಿಜಯ ನ್ಯೂಸ್‌ ಅವರೆ ಒಂದೇ ಒಂದು ಪಂದ್ಯ, ಅದೂ ಫೈನಲ್‌ನಲ್ಲಿ ಸೋತಿದಕ್ಕೆ ತಂಡವನ್ನು ‘ದಂಡುಪಾಳ್ಯ’ಕ್ಕೆ…’ದಂಡಪಿಂಡ’ಗಳಿಗೆ ಹೋಲಿಸುತ್ತೀರಿ ಎಂದರೆ ನಾಚಿಕೆ ಆಗಬೇಕು ನಿಮಗೆ” ಎಂದು ಹೇಳಿದ್ದಾರೆ.

Read Also: ICC world cup: ನಾಯಕತ್ವ ಮರೆತ ಕೊಹ್ಲಿ; ಭಾರತದ ಸೋಲಿಗೆ 5 ಕಾರಣಗಳು!

ದೊಡ್ಡ ಗಣೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದರು ಕ್ರುಶಿಕ ಎನ್ನುವವರು, “ಪಾಕಿಸ್ತಾನದ ಜೊತೆಗಿನ ಆಟದ ಬಗ್ಗೆ ಹೀಗೆ ವರದಿ ಮಾಡಿ ಮಾಡಿ ಅದನ್ನೇ ನ್ಯೂಜಿಲೆಂಡ್ ಜೊತೆಗಿನ ಆಟಕ್ಕೂ ಹೇಳುತ್ತಾ ಇದ್ದಾರೆ. ಪಾಕಿಸ್ತಾನದ ಜೊತೆಗಿನ ಆಟದ ಸಮಯದಲ್ಲಿ ಕಿತ್ತೊದವರಂತೆ ಬರೆಯುವವರನ್ನು ಜಾಡಿಸಿದ್ದಿದ್ರೆ, ಈಗ ಬುದ್ದಿ ಕಲ್ತಿರೋರು. ಇಂಡಿಯಾದ ಜನಕ್ಕೆ ಭಾವನಾತ್ಮಕತೆಯೇ ಜಾಸ್ತಿ, ಅದೇ ಆಸ್ತಿ. ಆಟವನ್ನು ಆಟ ಅಂತ ನೋಡಲ್ಲ!” ಎಂದು ಹೇಳಿದ್ದಾರೆ.

ದಿಗ್ವಿಜಯ ನ್ಯೂಸ್ ಈ ಹಿಂದೆ ‘ಓಂ ಫಿನಿಶಾಯ ನಮಃ’ ಎಂಬ ಶಿರ್ಷಿಕೆಯನ್ನು ನೀಡಿ ಕಾರ್ಯಕ್ರಮವನ್ನು ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಿರಿಧರ ಕಾರ್ಕಳ ಅವರು, ‘ದಿಗ್ವಿಜಯದ ಶಬ್ಧ ದಾರಿದ್ರ್ಯ’ ಎಂದು ಹೇಳಿದ್ದರು.

ಅವರು, “ಇದು ಧೋನಿ ಎಂಬ ಮಹಾನ್ ಕ್ರಿಕೆಟಿಗನ ನಿವೃತ್ತಿಯ ಕುರಿತ ನುಡಿಚಿತ್ರಕ್ಕೆ ದಿಗ್ವಿಜಯ ಟಿವಿ ನೀಡಿದ ತಲೆಬರಹ.. ಅಲ್ಲಲ್ಲ ತಲೆಕೆಟ್ಟ ಬರಹ..!! ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲೊಂದು ಅದ್ಭುತ ಅಧ್ಯಾಯ ಬರೆದ ಜಂಟಲ್ ಮ್ಯಾನ್ ಯಾರನ್ನು ಫಿನಿಶ್ ಮಾಡಿದರು? ಅಥವಾ ಅವರನ್ನೇ ಅವರು ಫಿನಿಶ್ ಮಾಡಿಕೊಂಡ್ರಾ? ತಲೆಬರಹ ಕೊಡುವವರಿಗೇನಾದರೂ ತಲೆಕೆಟ್ಟಿದೆಯೇ? ನುಡಿಚಿತ್ರ ಕಾರ್ಯಕ್ರಮದಲ್ಲಿ ಸೊಗಸಾದ ‘ಮಾಹಿ’ತಿಯನ್ನೇನೋ ನೀಡಿದರು. ಆದರೆ ನೆಗೆಟಿವ್ ಅರ್ಥ ಕೊಡುವ ತಲೆಬರಹವೇಕೆ?” ಎಂದು ಪ್ರಶ್ನಿಸಿದ್ದರು.

Read Also: 08 ವರ್ಷಗಳ ಹಿಂದಿನ ಟ್ವೀಟ್‌; ಕ್ರಿಕೆಟ್‌ನಿಂದ ರಾಬಿನ್ಸನ್‌ ಅಮಾನತು; ರಾಬಿನ್ಸನ್‌ ಕ್ರಿಕೆಟ್‌ ಬದುಕು ಅಂತ್ಯ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights