ಕನ್ನಂಬಾಡಿ ಕಾಳಗ : ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಸುಮಲತಾ ಭೇಟಿ..!
ಕನ್ನಂಬಾಡಿ ಕಾಳಗದಲ್ಲಿ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮರಸ್ವಾಮಿ ವಾಕ್ಸಮರ ಜೋರಾಗಿದೆ. ಕೆಆರ್ಎಸ್ ಕದನದ ಮಧ್ಯೆ ಇಂದು ಮಂಡ್ಯಕ್ಕೆ ಸುಮಲತಾ ಭೇಟಿ ನೀಡಲಿದ್ದಾರೆ.
ಹೌದು… ಇಂದು ಮಂಡ್ಯ ಜಿಲ್ಲೆಗೆ ತೆರಳಲಿರುವ ಸುಮಲತಾ ಮಧ್ಯಾಹ್ನ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಶ್ರೀರಂಗ ಪಟ್ಟಣದ ಚನ್ನನಕೆರೆ, ಪಾಂಡವಪುರ ಗ್ರಾಮದ ಬೇಬಿ ಬೆಟ್ಟಕ್ಕೆ ಸಂಸದೆ ಸುಮಲತಾ ಭೇಟಿ ನೀಡಲಿದ್ದಾರೆ.
ಮಂಡ್ಯ ರಾಜಕೀಯ ಗುದ್ದಾಟದ ಮಧ್ಯೆ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಸುಮಲತಾ ಖುದ್ದು ಭೇಟಿ ನೀಡುತ್ತಿದ್ದು, ಬೆಟ್ಟ ಬಗೆಯುವವರ ಮುಖವಾಡ ಬಯಲು ಮಾಡುವ ಪಣತೊಟ್ಟಂತೆ ಕಾಣುತ್ತಿದೆ.
ಕೆಆರ್ಎಸ್ ಬಿರುಕು ಬಿಟ್ಟಿರುವುದಕ್ಕೆ ಗಣಿಗಾರಿಕೆ ಕಾರಣ ಎಂದಿದ್ದ ಸಂಸದೆ ಸುಮಲತಾ ಅವರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ, “ಕೆಆರ್ಎಸ್ ಬಿರುಕು ಬಿಟ್ಟಿದ್ದರೆ ಅವರನ್ನೇ ಅಲ್ಲಿ ಮಲಗಿಸಿ”ಎಂದು ಹಗುರವಾಗಿ ಮಾತನಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಸುಮಲತಾ ಆಣೆಕಟ್ಟಿನ ವಿಚಾರವನ್ನು ಮತ್ತಷ್ಟು ಚಾಲೆಂಜ್ ಆಗಿ ಸ್ವೀಕರಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿ ಬಗ್ಗೆ ಖುದ್ದು ಪರಿಶೀಲನೆ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳು, ಗಣಿ ಅಧಿಕಾರಿಗಳೊಂದಿಗೆ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಏನಿದು ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.