ಮೈತ್ರಿ ಸರ್ಕಾರ ಪತನಕ್ಕೆ ಪೆಗಾಸಸ್‌ ಕಾರಣ?; ಸಿದ್ದರಾಮಯ್ಯ, ಕುಮಾರಸ್ವಾಮಿ ಆಪ್ತ ಸಹಾಯಕರ ಫೋನ್‌ ಹ್ಯಾಕ್‌!

ಪೆಗಾಸಸ್‌ ಪ್ರಾಜೆಕ್ಟ್‌ ಬಳಸಿಕೊಂಡು ಕೇಂದ್ರ ಸರ್ಕಾರವು ಹಲವು ವಿರೋಧ ಪಕ್ಷಗಳ ನಾಯಕರ ಫೋನ್‌ಗಳನ್ನು ಹ್ಯಾಕ್‌ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದೇ ವೇಳೆ, 2019ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನವಾಗಲೂ ಈ ಪ್ರಾಜೆಕ್ಟ್‌ ಕಾರಣವಾಗಿದೆ ಎಂದು ಅನುಮಾನಗಳು ಕೇಳಿಬರುತ್ತಿದ್ದು, ಕಾಂಗ್ರೆಸ್‌ ಈ ಬಗ್ಗೆ ಆರೋಪ ಮಾಡಿದೆ.

ಮಂಗಳವಾರ ದಿ ವೈರ್‌ ಬಿಡುಗಡೆ ಮಾಡಿದ ವರದಿಯಲ್ಲಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮೇಲೆ ಮೈತ್ರಿ ಸರ್ಕಾರದ ಪತನದ ಸಮಯದಲ್ಲಿ ಪೆಗಾಸಸ್ ಕಣ್ಗಾವಲು ಇಡಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಕಾರ್ಯದರ್ಶಿಗಳ ಮೊಬೈಲ್ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್‌ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.

ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ. ಪೆಗಾಸಸ್ ಗೂಢಚರ್ಚೆಯಿಂದಾಗಿಯೇ 2019 ರ ಜುಲೈನಲ್ಲಿ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾಯಿತೆ ಎಂಬ ಅನುಮಾನಗಳು ಶುರುವಾಗಿವೆ.

2019 ರಲ್ಲಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಸರ್ವ ಪ್ರಯತ್ನ ನಡೆಸುತ್ತಿತ್ತು. ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದ ಸಮಯದಲ್ಲಿ ಕರ್ನಾಟಕದ ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳನ್ನು ಹ್ಯಾಕ್ ಮಾಡಲು ಆಯ್ಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.

ಇದೇ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ 17 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿದ್ದರು. ನಂತರ ಅವರೆಲ್ಲರೂ ಬಿಜೆಪಿ ಸೇರಿ ಬಹುತೇಕರು ಉಪ ಚುನಾವಣೆಯಲ್ಲಿ ಆಯ್ಕೆಯಾದಾಗ ಈ ಬೆಳವಣಿಗೆಗಳು ನಡೆದಿವೆ ಎಂದು ವರದಿ ಬಹಿರಂಗ ಪಡಿಸಿದೆ.

ಸೋರಿಕೆಯಾಗಿರುವ ದತ್ತಾಂಶದ ಪ್ರಕಾರ, ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿದ್ದ ಸತೀಶ್ ಅವರಿಗೆ ಸಂಬಂಧಿಸಿದ ಎರಡು ಫೋನ್ ಸಂಖ್ಯೆಗಳನ್ನು ಪೆಗಾಸಸ್‌ ಟಾರ್ಗೆಟ್ ಮಾಡಲಾಗಿದೆ. 2019 ರ ಮಧ್ಯದಲ್ಲಿ ಗೂಢಚರ್ಯೆಗೆ ಒಳಪಡಿಸಲಾಗಿದೆ. ಸತೀಶ್ ಅವರು 2019 ರಲ್ಲಿ ಇದೆ ಫೋನ್ ಸಂಖ್ಯೆಯನ್ನು ಬಳಸುತ್ತಿದ್ದರು ಎಂದು ದೃಢಪಡಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ. ಈ ಸಮಯದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸರ್ಕಾರವು ಬಂಡಾಯ ಶಾಸಕರನ್ನು ಮನವೊಲಿಸಲು ಹೆಣಗಾಡುತ್ತಿತ್ತು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಾಗಿದ್ದ ವೆಂಕಟೇಶ್ ಅವರ ದೂರವಾಣಿ ಸಂಖ್ಯೆಯನ್ನು ಸಹ ಇದೇ ಅವಧಿಯಲ್ಲಿ ಸೇರಿಸಲಾಗಿದೆ ಎಂದು ವರದಿ ಬಹಿರಂಗ ಪಡಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ವರ್ಷಗಳಿಂದ ವೈಯಕ್ತಿಕ ಫೋನ್ ಬಳಸುತ್ತಿಲ್ಲ ಮತ್ತು ಫೋನ್ ಸಂಭಾಷಣೆಗಾಗಿ ಅವರು ತಮ್ಮ ಆಪ್ತ ಸಹಾಯಕರನ್ನು ಅವಲಂಬಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ. ಆದ್ದರಿಂದ, ವೆಂಕಟೇಶ್ ಅವರ ಫೋನ್ ಸಂಖ್ಯೆಯನ್ನು ಪೆಗಾಸಸ್‌ ಗೂಢಚರ್ಯೆಗೆ ಆಯ್ಕೆ ಮಾಡಿರುವುದು ಅಪಾರ ಮಹತ್ವವನ್ನು ಪಡೆದುಕೊಂಡಿದೆ ಎಂದು ದಿ ವೈರ್‌ ವರದಿ ಮಾಡಿದೆ.

ಇದನ್ನೂ ಓದಿ:  ಪೆಗಾಸಸ್‌ನಲ್ಲಿ ಮೋದಿ ಸರ್ಕಾರದ ಪಾತ್ರವೇನು? ಆರ್‌ಟಿಐ ಅರ್ಜಿ ಸಲ್ಲಿಕೆ!

ಇವರ ಜೊತೆಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಭದ್ರತಾ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದ ಮಂಜುನಾಥ್ ಮುದ್ದೇಗೌಡ ಎಂಬ ಪೊಲೀಸ್ ಅಧಿಕಾರಿಯ ಪೋನ್ ನಂಬರ್ ಕೂಡ ಹ್ಯಾಕ್ ಮಾಡಲಾಗಿದೆ. ನನ್ನ ಮೊಬೈಲ್ ಸಂಖ್ಯೆ ಎಂದು ಪೊಲೀಸ್ ಅಧಿಕಾರಿ ದೃಢಪಡಿಸಿದ್ದಾರೆ. ಅವರ ಸಂಖ್ಯೆಯನ್ನು 2019 ರ ಮಧ್ಯದಲ್ಲಿ ಹ್ಯಾಕ್ ಮಾಡಲಾಗಿದೆ.

ಇದೇ ರೀತಿಯಾಗಿ, ಕಾಂಗ್ರೆಸ್ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ಅವರ ಮೊಬೈಲ್ ನಂಬರ್ ಕೂಡ ಹ್ಯಾಕ್ ಮಾಡಲಾಗಿದೆ. 2019 ರಲ್ಲಿ ಅದೇ ಫೋನ್ ಸಂಖ್ಯೆಯನ್ನು ಬಳಸುತ್ತಿದ್ದು, ಕೆಲವು ತಿಂಗಳುಗಳ ಹಿಂದೆ ಅದರ ಬಳಕೆ ನಿಲ್ಲಿಸಿದ್ದೇನೆ. ಆ ಸಮಯದಲ್ಲಿ ನಾನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ದಿ ವೈರ್‌ಗೆ ತಿಳಿಸಿದ್ದಾರೆ.

ಇಸ್ರೇಲಿ ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ಪ್ರಸ್ತುತ ಸಂಪುಟದಲ್ಲಿರುವ ಇಬ್ಬರು ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು ಮತ್ತು ಒಬ್ಬ ನ್ಯಾಯಾಧೀಶರು, ಹಲವಾರು ಉದ್ಯಮಿಗಳು ಮತ್ತು ಹೋರಾಟಗಾರರು ಸೇರಿದಂತೆ 300 ಕ್ಕೂ ಹೆಚ್ಚು ಜನರ ಮೊಬೈಲ್ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್‌ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್, “ಇಸ್ರೇಲಿ ಗೂಡಾಚಾರಿಕೆ ಸಾಫ್ಟವೇರ್ ಪೆಗಾಸಸ್ ಮೂಲಕ ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಾ.ಜಿ.ಪರಮೇಶ್ವರ್‌ ಅವರ ಫೋನ್‌ಗಳನ್ನು ಕದ್ದು ನೋಡಲಾಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಬಿಜೆಪಿ ಪಕ್ಷ ಇಂತಹ ನೀಚ ಕೃತ್ಯಕ್ಕೆ ಇಳಿಯುವ ಮೂಲಕ ಅದೊಂದು ರಾಜಕೀಯ ಪಕ್ಷವಾಗಿರದೆ, ವಿಧ್ವಂಸಕ ಕೃತ್ಯವೆಸಗುವ ಸಂಘಟನೆ ಎಂದು ಸಾಬೀತು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪೆಗಾಸಸ್‌ನಲ್ಲಿ ಮೋದಿ ಸರ್ಕಾರದ ಪಾತ್ರವೇನು? ಆರ್‌ಟಿಐ ಅರ್ಜಿ ಸಲ್ಲಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights