ಸಂವಿಧಾನ ರಚನೆಯಲ್ಲಿ ವಿಳಂಬದ ಕುರಿತ 1949ರ ಕಾಟೂರ್ನ್; 2012ರಲ್ಲಿ ಸದ್ದು ಮಾಡಿದ್ದೇಕೆ?

ಒಂದು ದಶಕದ ಕೆಳಗೆ (2012) ಅಂಬೇಡ್ಕರ್, ನೆಹರೂ ಹಾಗು ಸಂವಿಧಾನ ರಚನೆಯಲ್ಲಿ ಆಗುತ್ತಿದ್ದ ವಿಳಂಬದ ಬಗ್ಗೆ ಅಂದಿನ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಪಿಳ್ಳೈ ಅವರ ಬರೆದ ಕಾರ್ಟೂನನ್ನು 11ನೇ ತರಗತಿಯ ಪಠ್ಯ ದಲ್ಲಿ ಸೇರಿಸಿಕೊಳ್ಳಲಾಗಿತ್ತು.

ಆಗ ಆ ಕಾರ್ಟೂನಿನ ಬಗ್ಗೆ ಮತ್ತು ಅದನ್ನು ಪಠ್ಯದಲ್ಲಿ ಸೇರಿಸಿದ್ದರ ಬಗ್ಗೆ ಒಂದು ದೊಡ್ಡ ವಿವಾದ ಸೃಷ್ಟಿಯಾಗಿತ್ತು.

ಅದರ ಬಗ್ಗೆ ಆಗ ಗೌರಿ ಲಂಕೇಶ್ ಪತ್ರಿಕೆಗೆ ಬರೆದ ಒಂದು ಲೇಖನ ಇಂದಿನ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನಿಸಿತು.
ಬಿಡುವಾದಾಗ ಓದಿ…

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ್ಲಿ ಬರೆದ ವ್ಯಂಗ್ಯಚಿತ್ರವೊಂದು ಇದೀಗ ಅತ್ಯಂತ ವಿವಾದಕ್ಕೊಳಗಾಗಿದೆ.

NCERT ಸಿಲಬಸ್ಸಿನಂತೆ 11 ನೇ ತರಗತಿಯ CBSE ಪಠ್ಯಗಳಲ್ಲಿ ಸಂವಿಧಾನ ಮತ್ತು ಅದರ ರಚನೆಗೆ ಸಂಬಂಧಪಟ್ಟಂತೆ ನೀಡಲಾಗಿರುವ ಪರಿಚಯಾತ್ಮಕ ಪಠ್ಯದಲ್ಲಿ ಶಂಕರ್ ಅವರು 1949ರಲ್ಲಿ ಬರೆದ ವ್ಯಂಗ್ಯಚಿತ್ರವೊಂದನ್ನು ಸೇರಿಸಲಾಗಿದೆ. ಈ ಪಠ್ಯ, ಚಿತ್ರ ಹಾಗೂ ಒಟ್ಟಾರೆ ಪಠ್ಯಕ್ರಮ ಇತ್ಯಾದಿಗಳಿಗೆ ಸಲಹೆ ನೀಡಿದವರು ಭಾರತದ ಅತ್ಯಂತ ಪ್ರಸಿದ್ಧ ಜನಪರ ಚಿಂತಕರಾದ ಸುಭಾಷ್ ಪಾಲ್ಷೀಕರ್ ಮತ್ತು ಪ್ರಖ್ಯಾತ ಸಮಾಜವಾದಿ ಮುತ್ಸದ್ಧಿ ಯೋಗೇಂದ್ರ ಯಾದವ್ ಅವರುಗಳು. ವ್ಯಂಗ್ಯಚಿತ್ರವನ್ನು ಬರೆದವರು ಮತ್ತು ಅದನ್ನು ಪಠ್ಯದಲ್ಲಿ ಸೇರಿಸಿದವರು ಎಲ್ಲರೂ ದಲಿತ ಹಿತಾಸಕ್ತಿಯ ಹಿತಚಿಂತಕರೇ…

ಇದನ್ನೂ ಓದಿ: ಬಾಲಕಿಯರ ಮೇಲೆ ಅತ್ಯಾಚಾರ; ರಾತ್ರಿ ವೇಳೆ ಮಕ್ಕಳನ್ನು ಏಕೆ ಕಳಿಸಬೇಕು ಎಂದ ಗೋವಾ ಸಿಎಂ!

ಆದರೂ ಆ ವ್ಯಂಗ್ಯಚಿತ್ರವು ಸಂವಿಧಾನ ಕರ್ತೃ ಅಂಬೇಡ್ಕರ್ ಅವರನ್ನು ಹೀಯಾಳಿಸುವಂತೆ ತೋರಿಸುತ್ತದೆ ಎಂದು ಈಗ ಆ ಚಿತ್ರವನ್ನು ಮಾತ್ರವಲ್ಲದೆ ಈಗ ಇಡೀ ಪುಸ್ತಕವನ್ನೇ ಹಿಂತೆಗೆದುಕೊಳ್ಳಲಾಗಿದೆ. ಪಾರ್ಲಿಮೆಂಟಿನಲ್ಲಿ ದಲಿತರ ಮೇಲೆ ಯಾವ ಘೋರ ಅತ್ಯಾಚಾರ ಅಥವಾ ಅನ್ಯಾಯಗಳು ನಡೆದಾಗಲೂ ನಡೆಯದಷ್ಟು ಚರ್ಚೆ ಮತ್ತು ಪಕ್ಷಾತೀತವಾದ ಒಗ್ಗಟ್ಟು ಈ ವ್ಯಂಗ್ಯಚಿತ್ರ ಪ್ರಕರಣದಲ್ಲಿ ವ್ಯಕ್ತವಾಗಿದೆ. ಇದು ಕೂಡಾ ಸಂದರ್ಭದ ವ್ಯಂಗ್ಯವೋ ಎಂಬ ಗೊಂದಲ ಹುಟ್ಟುಹಾಕುವಷ್ಟು ವಿಷಯ ಮತ್ತು ಸಂದರ್ಭ ಗೋಜಲಾಗಿದೆ.

ಅಸಲು ಆ ವ್ಯಂಗ್ಯಚಿತ್ರದಲ್ಲಿ ಇರುವುದಿಷ್ಟು.

ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನ ರಚನಾ ಸಭೆಯ ವೇಗ ಕುಂಠಿತವಾಗಿದ್ದ ವಿಷಯದ ಬಗ್ಗೆ ಈ ವ್ಯಂಗ್ಯ ಚಿತ್ರವಿದೆ. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು ಅಂಬೇಡ್ಕರ್ ಅವರು. ಆಗ (1949ರಲ್ಲಿ) ಪ್ರಧಾನಿಯಾಗಿದ್ದವರು ನೆಹರೂ ಅವರು. ಸಂವಿಧಾನ ರಚನೆ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಬಸವನ ಹುಳು ತೆವೆಳುತ್ತಿರುವ ರೂಪಕದಲ್ಲಿ ತೋರಿಸುವ ವ್ಯಂಗ್ಯ ಚಿತ್ರ, ಅದರ ಅಧ್ಯಕ್ಷರಾದ ಅಂಬೇಡ್ಕರ್ ಅವರು ಅದರ ಮೇಲೆ ಕೂತು ಅದಕ್ಕೆ ಚಾಟಿ ಹಿಡಿದು ಬೇಗ ತೆವಳುವಂತೆ ಆದೇಶಿಸುತ್ತಿರುವಂತೆಯೂ, ಅವರ ಹಿಂದೆ ನೆಹರೂ ಕೂಡಾ ಚಾಟಿ ಹಿಡಿದು ಬಸವನಹುಳುವಿನ ವೇಗ ಹೆಚ್ಚಿಸಲು ಪ್ರಯತ್ನಿಸುತ್ತಿರುಂತೆಯೂ ತೋರಿಸುತ್ತದೆ.

ಅಂತರಗಂಗೆ: ಡಾ|| ಅಂಬೇಡ್ಕರ್ ಮತ್ತು ವ್ಯಂಗ್ಯಚಿತ್ರ

ಇದರ ಪ್ರಧಾನ ವ್ಯಂಗ್ಯವಿರುವುದು ಸಂವಿಧಾನ ರಚನೆ ಸಭೆಯ ಗತಿಯನ್ನು ಬಸವನಹುಳುವಿಗೆ ಹೋಲಿಸಿದ ರೂಪಕದಲ್ಲಿ. ಮತ್ತು ಅದರ ವೇಗವನ್ನು ಹೆಚ್ಚಿಸಲಾಗದ ನಾಯಕರನ್ನು ವಿಡಂಬನೆ ಮಾಡುವುದರಲ್ಲಿ .

. ಅಂಬೇಡ್ಕರ್ ಮತ್ತು ನೆಹರೂ ಇಬ್ಬರ ಬಗ್ಗೆಯೂ ಅಪಾರ ಗೌರವ ಮತ್ತು ಅಭಿಮಾನ ಹೊಂದಿದ್ದ ವ್ಯಂಗ್ಯಚಿತ್ರಕಾರ ಶಂಕರ್ ಅವರ ಮನೋಧರ್ಮ ಮತ್ತು ರಾಜಕೀಯವನ್ನು ಬಲ್ಲವರಿಗೆ ಮತ್ತು 1949ರ ಹೊತ್ತಿನ ರಾಜಕೀಯ ಪ್ರಜ್ನೆಯ ಐತಿಹಾಸಿಕ ನಿರ್ದಿಷ್ಟತೆಗಳನ್ನು ಬಲ್ಲವರಿಗೆ ಈ ವ್ಯಂಗ್ಯಚಿತ್ರ ಇದಕ್ಕಿಂತ ಹೆಚ್ಚಿನ ಅರ್ಥವನ್ನೇನೂ ಧ್ವನಿಸಬೇಕಿರಲಿಲ್ಲ.

ಆದರೆ ಆ ವ್ಯಂಗ್ಯಚಿತ್ರವನ್ನು ವಿದ್ಯಾರ್ಥಿಗಳಿಗೆ ಸಂವಿಧಾನ ರಚನಾ ಸಭೆಯ ಇತಿಹಾಸವನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಲು ಬಳಸಿದಾಗ ಒಂದಷ್ಟು ಸಕಾರಣವಾದ ಪ್ರಶ್ನೆಗಳನ್ನೂ ಮತ್ತಷ್ಟು ವಿನಾಕಾರಣ ವಿರೋಧಗಳನ್ನೂ ಹುಟ್ಟುಹಾಕಿದೆ.

ಕಾರಣ ವ್ಯಂಗ್ಯ ಚಿತ್ರ ರಚನೆಯಾದ ಸಂದರ್ಭ ಮತ್ತು ಅದನ್ನು ಒಂದು ಪೂರಕ ಪಠ್ಯವಾಗಿ ಓದುತ್ತಿರುವ ಸಂದರ್ಭ ಬೇರೆಯಾಗಿದೆ.

ಈ ವ್ಯಂಗ್ಯಚಿತ್ರವನ್ನು 63 ವರ್ಷಗಳ ನಂತರ, ಅಂದರೆ ಸ್ವಾತಂತ್ರ್ಯದ ಬಗ್ಗೆ ಮತ್ತು ನಮ್ಮ ಸಂವಿಧಾನ ರಚನೆಯ ಬಗ್ಗೆ 1949ರಲ್ಲಿ ಇರದಿದ್ದ ಹಲವು ಪ್ರಶ್ನೆ ಗಳು ಎಚ್ಚೆತ್ತ ಇಂದಿನ ಕಾಲಘಟ್ಟದಲ್ಲಿ…11 ನೇ ತರಗತಿಯ ಮಕ್ಕಳಿಗೆ ಆ ಕಾರ್ಟೂನನ್ನು ಪರಿಚಯಾತ್ಮಕವಾಗಿ ನೀಡಲಾಗಿದೆ.

ಕಳೆದ 63 ವರ್ಷಗಳಲ್ಲಿ ಅಂಬೇಡ್ಕರ್ ಪ್ರತಿನಿಧಿಸುತ್ತಿದ್ದ ಎಚ್ಚೆತ್ತ ದಲಿತ ಪ್ರಜ್ನೆ ವ್ಯಾಪಕವಾಗಿ ಹರಡಿದೆ ಮತ್ತು ಅದು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತನ್ನ ಹಕ್ಕಿನ ಸ್ಥಾನವನ್ನು ಗಟ್ಟಿಸಿಕೇಳಿ ಪಡೆದುಕೊಳ್ಳುತ್ತಿದೆ. ಹಾಗೆಯೇ ಅಂದಿನ ಬ್ರಿಟಿಷ್ ವಿರೋದಿ ಭಾರತ ರಾಷ್ಟ್ರೀಯವಾದದಲ್ಲಿ ಪ್ರಜ್ನಾಪೂರ್ವಕವಾಗಿ ಮತ್ತು ಅಪ್ರಜ್ನಾಪೂರ್ವಕವಾಗಿ ಹೊರಗಿಟ್ಟಿದ್ದ ಹಲವು (ಸ್ತ್ರಿ, ದಲಿತ, ಮಹಿಳೆ, ಪ್ರಾದೇಶಿಕತೆ, ಉಪ ರಾಷ್ಟ್ರೀಯತೆ) ಸಂವೇದನೆಗಳು ಕಳೆದ 63 ವರ್ಷಗಳಲ್ಲಿ ಆಯಾ ಸಮುದಾಯಗಳನ್ನು ಜಾಗೃತಗೊಳಿಸಿ 49ರ ಕಾಲಘಟ್ಟದ ರಾಷ್ಟ್ರೀಯವಾದದ ಇತಿಮಿತಿಗಳನ್ನು ಬಯಲಿಗೆ ತರುತ್ತಿದೆ.

ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಪ್ರಶ್ನಾತೀತ “ಐಕಾನ್”ಗಳಾಗಿದ್ದ ನೆಹರೂ, ಗಾಂಧಿ ಇನ್ನಿತರರ ಪಾತ್ರವನ್ನು ಮರು ವಿಶ್ಲೇಷಣೆಗೆ ಒಳಪಡಿಸುತ್ತಿದೆ. ಹಾಗೆಯೇ ಆ ದಿನಗಳಲ್ಲಿ ಅಧಿಕೃತವಾಗಿ ಪ್ರಚಲಿತಪಡಿಸಿದ ಸ್ವತಂತ್ರ ಭಾರತದ ಹಲವು ಕಥನಗಳ ಮತ್ತು ಹಳೆಯ ಐಕಾನ್‌ಗಳ ಬಿರುಕುಗಳನ್ನು ಬಯಲಿಗೆ ತಂದಿದ್ದೇ ಅಲ್ಲದೇ ಮೂಲೆಗುಂಪಾಗಿದ್ದ ಶೋಷಿತ ಪ್ರಜ್ನೆಯ “ಐಕಾನ್”ಗಳನ್ನು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರತಿಷ್ಟಾಪಿಸುತ್ತಿದೆ. ಇದೊಂದು ಸ್ವಾಗತಾರ್ಹ ಪ್ರಜಾತಾಂತ್ರಿಕ ಪ್ರಕ್ರಿಯೆ ಎಂಬುದನ್ನು ಮೊದಲು ಗುರುತಿಸಬೇಕು.

ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ನಡೆಸಿದ ಜೀವನ್ಮರಣದ ಹೋರಾಟದ ಪ್ರಜ್ನೆ ನಮ್ಮ ರಾಷ್ಟ್ರೀಯ ಸಂವೇದನೆಗಳಿಗೆ ಸೇರಿದ್ದೇ 80ರ ದಶಕದಲ್ಲಿ. ದಲಿತ ಪ್ರಜ್ನೆಯ ಎಚ್ಚೆತ್ತ ಹೋರಾಟದ ಉತ್ತುಂಗದಲ್ಲಿ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕೊಡಲು ಭಾರತದ ಆಳುವ ವರ್ಗ ಮನಸ್ಸು ಮಾಡಿದ್ದೇ ಸ್ವಾತಂತ್ರ್ಯ ಬಂದು 50 ವರ್ಷಗಳ ನಂತರ ಎಂಬುದು ಈ ಪ್ರಕ್ರಿಯೆಗೆ ಒಂದು ನಿದರ್ಶನ.

ಹೀಗಾಗಿ 1949ರ ಸಂದರ್ಭವನ್ನು ಮತ್ತು ನಮ್ಮ ಇಡೀ ಸಂವಿಧಾನ ರಚನೆಯ ಪ್ರಕ್ರಿಯೆಯನ್ನು “ಅಧಿಕೃತ ರಾಷ್ಟ್ರೀಯವಾದದ” ನೆಲೆಯಲ್ಲಲ್ಲದೆ ದಲಿತ, ಸ್ತ್ರಿ, ಭಾಷಿಕ ರಾಷ್ಟ್ರೀಯತೆ, ಶೂದ್ರ ಇನ್ನಿತ್ಯಾದಿ ವಂಚಿತ ನೆಲೆಗಳಿಂದ ಭಿನ್ನವಾಗಿ ವಿಶ್ಲೇಷಿಸುವ ಮತ್ತು ಭಿನ್ನವಾಗಿ ಅರ್ಥಮಾಡಿಕೊಳ್ಳುವ ವಿಮರ್ಶಿಸುವ ದೃಷ್ಟಿಕೋನಗಳು ಇಂದಿನ ಪ್ರಜಾತಂತ್ರವನ್ನು ಆಳಗೊಳಿಸಿದೆ.

ಹೀಗಾಗಿಯೇ ಅಂದಿನ ಯಾವುದೇ ಹೇಳಿಕೆಗಳು ಅಥವಾ ಕಥನಗಳ ಬಗ್ಗೆ ಇಂದು ಭಿನ್ನಮತ ಅಥವಾ ಟೀಕೆ ಇರುವುದು ಸಹಜ. ಅದು ನಮ್ಮ ತಿಳವಳಿಕೆಯನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ ಮತ್ತು ಬಹುಮುಖಿಯಾಗಿಸುತ್ತದೆ. ಅದು ಸ್ವಾಗತಾರ್ಹ.

ಪ್ರಸ್ತುತ 11 ನೇತರಗತಿಯಲ್ಲಿ ಸೇರಿಸಲ್ಪಟ್ಟಿರುವ ವ್ಯಂಗ್ಯಚಿತ್ರ ಸಂವಿಧಾನ ರಚನೆಯ ಗತಿಯ ಬಗ್ಗೆ ಮತ್ತು ಅದರಲ್ಲಿ ನೆಹರೂ ಮತ್ತು ಅಂಬೇಡ್ಕರ್ ಅವರ ಪಾತ್ರದ ಬಗ್ಗೆ ತೆಳು ಟೀಕೆಯನ್ನು ತೋರಿಸುತ್ತದೆ. ಹಾಗೆ ನೋಡಿದರೆ ಈಗಲೂ ಈ ವ್ಯಂಗ್ಯಚಿತ್ರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತನಾಡುವುದಾದರೆ ಅವಕಾಶವಾದಿ ರಾಜಕಾರಣಿಗಳು ಹೇಳುತ್ತಿರುವಂತೆ ಅಂಬೇಡ್ಕರ್ ಅವರಿಗೆ ಅವಮಾನವಾಗುವಂತ ಯಾವುದೂ ವ್ಯಂಗ್ಯ ಚಿತ್ರದಲ್ಲಿಲ್ಲ. ಶಂಕರ್ ಅವರ ಒಟ್ಟಾರೆ ಸೃಜನಶಿಲ ಅಭಿವ್ಯಕ್ತಿಯನ್ನು ಗಮನಿಸುವುದಾದರೂ ಅವರಿಗೆ ಅಂಬೇಡ್ಕರ್ ಅವರ ಬಗ್ಗೆ ಗೌರವದ ಹೊರತು ಇನ್ಯಾವ ಕುತ್ಸಿತ ಭಾವನೆಯೂ ಇರಲಿಲ್ಲ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆಗೆ ಸೆಡ್ಡು: ಸೌರ ಬೈಸಿಕಲ್‌ ನಿರ್ಮಿಸಿದ್ದಾರೆ 12 ವರ್ಷದ ಮಕ್ಕಳು!

ಆದರೆ ಇಂದಿನ ಪ್ರಗತಿಪರ ಸೃಜನಶಿಲತೆಯು ಖಂಡಿತವಾಗಿಯೂ ಒಳಗೊಳಬೇಕಾದ ದಲಿತ ಪ್ರಜ್ನೆಯ ಹರಿತ ಆ ಕಾಲಘಟ್ಟದಲ್ಲಿ ಶಂಕರ ಅವರಿಗೆ ಮಾತ್ರವಲ್ಲ, ಬಹುಪಾಲು ಸಮಾಜವಾದಿಗಳಿಗೆ ಮತ್ತು ಕಮ್ಯುನಿಸ್ಟರಿಗೇ ಇರಲಿಲ್ಲ.

ಹಾಗೆಂದ ಮಾತ್ರಕ್ಕೆ ಅವರೆಲ್ಲಾ ಆ ಕಾಲಘಟ್ಟದಲ್ಲಿ ದಲಿತ ವಿರೋಧಿಗಳೆಂದು ಶರಾ ಬರೆಯಲಾಗುವುದಿಲ್ಲ.

ಅಂಬೇಡ್ಕರ್ ಪ್ರಣೀತ ದಲಿತ ಪ್ರಜ್ನೆ ಭಾರತೀಯ ಸಮಾಜದಲ್ಲಿ ಒಂದು ಚಳವಳಿ ಸ್ವರೂಪ ಪಡೆದುಕೊಳ್ಳಲು ಹಲವು ದಶಕಗಳೇ ಬೇಕಾಯಿತು ಎಂಬುದನ್ನು ಗಮನದಲ್ಲಿಟ್ಟುಕೊಂಡಾಗ ಆ ಕಾಲಘಟ್ಟದ ಐತಿಹಾಸಿಕ ಮಿತಿಗಳು ಇನ್ನಷ್ಟು ಸ್ಪಷ್ಟವಾಗುತ್ತದೆ.

ಯಾವುದೇ ಸೃಜನಶೀಲ ಕೃತಿ ನಿರ್ದಿಷ್ಟ ಕಾಲ ಸಂದರ್ಭದಲ್ಲಿ ಸೃಷ್ಟಿಯಾಗುವುದರಿಂದ ಅದಕ್ಕೆ ಆ ಕಾಲಘಟ್ಟದ ಮಿತಿಗಳು ಇದ್ದೇ ಇರುತ್ತವೆ.

ಕಾಲಘಟ್ಟದದ ಮಿತಿಯನ್ನು ವ್ಯಕ್ತಿಯ ಮಿತಿಯಾಗಿಯೋ ಅಥವಾ ಆ ವ್ಯಕ್ತಿಯ ದುರುದ್ದೇಶವಾಗಿಯೋ ಅರ್ಥಮಾಡಿಕೊಳ್ಳುವುದು ಈ ಕಾಲಘಟ್ಟದ ದುರುದ್ದೇಶಪ್ರೇರಿತ ತಿಳವಳಿಕೆಯಾಗುತ್ತದೆ.

ಕೇಳಬೇಕಾದ ಪ್ರಶ್ನೆಯೇನೆಂದರೆ ಆ ಕಾಲಘಟ್ಟದ ಪ್ರಗತಿಪರತೆಯನ್ನಾದರೂ ಆ ವ್ಯಕ್ತಿ ಒಳಗೊಡಿದ್ದರೋ ಇಲ್ಲವೋ ಎಂಬುದೇ

ಉದಾಹರಣೆಗೆ ನಮ್ಮ ಸಂವಿಧಾನ ರಚನೆಯ ಸಂದರ್ಭದಲ್ಲಿ ಕೆಲವು ನಾಯಕರುಗಳು ಆ ಕಾಲಘಟ್ಟದ ಸರಾಸರಿ ಜನಪರತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು.

ಸರ್ದಾರ್ ವಲ್ಲಭಬಾಯಿ ಪಟೇಲ್, ಪುರುಷೋತಮ್ ದಾಸ್ ಟಂಡನ್, ಗೋಲ್ವಾಲ್ಕರ್ (ಇವರಲ್ಲಿ ಹಲವರು ಆ ಕಾಲಘಟ್ಟದ ವಿವಿಧ ತಿಳವಳಿಕೆಯ ನಾಯಕರೇ ಹೊರತು ಸಂವಿಧಾನ ರಚನಾ ಸಭೆಯ ಸದಸ್ಯರಲ್ಲ..) ಇನ್ನಿತರರು ಆ ಕಾಲದ ಪ್ರಗತಿಪರತೆಯ ಒಂದಿಂಚನ್ನೂ ಮೈಗೂಡಿಸಿಕೊಳ್ಳದ ಪ್ರತಿಗಾಮಿಗಳು.

ನೆಹರು ಹಾಗೂ ಇನ್ನಿತರರು ಇವೆರಡರ ಮಧ್ಯೆ ತೇಲುತ್ತಿದ್ದ ಯಥಾಸ್ಥಿತಿವಾದಿಗಳು.

ಅದೇ ಮಾನದಂಡಗಳನ್ನು ಸೃಜನಶೀಲ ಪ್ರತಿಭೆಗಳ ಬಗ್ಗೆಯೂ ಅನ್ವಯಿಸಿ ಹೇಳುವುದಾದರೆ ಶಂಕರ್ ಅವರ ಸೃಜನಶೀಲ ಪ್ರತಿಭೆಯನ್ನು ಮಾರ್ಗದರ್ಶನ ಮಾಡುತ್ತಿದ್ದ ತಿಳವಳಿಕೆ ಹೆಚ್ಚು ಮೊದಲ ಬಗೆಗೆ ಸೇರುವ ಆ ಕಾಲದ ಪ್ರಗತಿಪರ ಚಿಂತನೆಯದ್ದೇ ಆಗಿತ್ತು.

ಹಾಗೆ ನೋಡಿದರೆ ವ್ಯಂಗ್ಯಚಿತ್ರಕಾರನೊಬ್ಬ ಹುಟ್ಟುವುದೇ ಯಥಾಸ್ಥಿತಿವಾದದ ವಿಮರ್ಶೆಯಲ್ಲಿ..

ಹೀಗಾಗಿ ಶಂಕರ್ ಅವರ ವ್ಯಂಗ್ಯಚಿತ್ರ ಆ ಕಾಲಘಟ್ಟದ ಮಿತಿಯನ್ನು ಹೊಂದಿದ್ದರೂ ಪ್ರಧಾನವಾಗಿ ಆ ಕಾಲದ ಜನಪರ ಆಶಯಗಳನ್ನು ಪ್ರತಿಬಿಂಬಿಸುತ್ತವೆ ಎಂಬುದು ನಿರ್ವಿವಾದ.

ಆದರೆ ಪ್ರಶ್ನೆ ಅದಲ್ಲ. 63 ವರ್ಷಗಳಷ್ಟು ಹಿಂದಿನ ವ್ಯಂಗ್ಯಚಿತ್ರವನ್ನು ಒಂದು ಐತಿಹಾಸಿಕ ದಾಖಲೆಯಾಗಿ ನೋಡುವುದಕ್ಕೂ ಮತ್ತು ವರ್ತಮಾನದಲ್ಲಿ ಇತಿಹಾಸದ ಅಂಶವೊಂದನ್ನು ಗತಿಶೀಲವಾಗಿ ಅರ್ಥಮಾಡಿಕೊಳ್ಳಲು ಸಾಧನವಾಗಿ ಬಳಸುವುದಕ್ಕೂ ವ್ಯತ್ಯಾಸವಿದೆ.

“1949ರಲ್ಲಿ ಶಂಕರ್ ಎಂಬ ವ್ಯಂಗ್ಯಚಿತ್ರಕಾರರು ಸಂವಿಧಾನ ರಚನೆಯ ಬಗ್ಗೆ ಈ ರೀತಿಯ ವ್ಯಂಗ್ಯ ಚಿತ್ರ ಬರೆದಿದ್ದರು” ಎಂಬಂತೆ ಒಂದು ಐತಿಹಾಸಿಕ ಸಂಗತಿಯಂತೆ ಈ ವ್ಯಂಗ್ಯಚಿತ್ರ ಬಳಕೆಯಾಗಿದ್ದರೆ ಅದರಲ್ಲಿ ಹೆಚ್ಚು ಗೊಂದಲವೇ ಇರುತ್ತಿರಲಿಲ್ಲ. ಆದರೆ 63 ವರ್ಷಗಳ ನಂತರವೂ ಸಂವಿಧಾನ ರಚನಾ ಸಭೆಯ ಬಗ್ಗೆ ಪ್ರಸ್ತಾಪ ಮಾಡುತ್ತಾ ಸಂವಿಧಾನ ರಚನೆಯ ಬಗ್ಗೆ ಮೌಲಿಕವಾಗಿ ಅರ್ಥಮಾಡಿಕೊಳ್ಳುವ ಸಾಧನವಾಗಿ ವ್ಯಂಗ್ಯಚಿತ್ರ ಬಳಕೆಯಾದಾಗ ಸಹಜವಾಗಿಯೇ ಅದರ ಬಗ್ಗೆ ಭಿನ್ನವಾದ ಧ್ವನಿಗಳು ಕೂಡಾ ಹುಟ್ಟಿಕೊಳ್ಳುತ್ತವೆ.

1949ರಲ್ಲಿ ಶಂಕರ್ ಅವರು ಗ್ರಹಿಸಿದಂತೆ, ಅಥವಾ ಈ ವ್ಯಂಗ್ಯಚಿತ್ರ ಸಲಹೆ ಮಾಡುವಂತೆ, ರಾಷ್ಟ್ರೀಯ ಹೋರಾಟದಲ್ಲಿ ಮತ್ತು ಸಂವಿಧಾನ ರಚನೆಯಲ್ಲಿ ನೆಹರು ಮತ್ತು ಅಂಬೇಡ್ಕರ್ ಅವರ ಪಾತ್ರವನ್ನು ಪರಸ್ಪರ ಪೂರಕವಾಗಿತ್ತೇಂದೇನೂ ಇಂದಿನ ಎಚ್ಚೆತ್ತ ದಲಿತ ಪ್ರಜ್ನೆ ಸಕಾರಣವಾಗಿ ಗ್ರಹಿಸುವುದಿಲ್ಲ. ಗಾಂಧಿ ಮತ್ತು ನೆಹರು ಅವರ ಬಗ್ಗೆ ದಲಿತ ವಿಮರ್ಶೆ ಸಕಾರಣವಾಗಿ ಹರಿತವಾಗಿದೆ.

ಆದ್ದರಿಂದ ಸಂವಿಧಾನ ರಚನೆಯಲ್ಲಿ ಮತ್ತು ದೇಶದ ಕಟ್ಟೋಣದಲ್ಲಿ ಅಂಬೇಡ್ಕರ್ ಮತ್ತು ನೆಹರೂ ಅವರ ಪಾತ್ರದ ಬಗ್ಗೆ ಇರುವ ಆ ವ್ಯಂಗ್ಯಚಿತ್ರದ ಗ್ರಹಿಕೆಗಳೂ ಭಿನ್ನಭಿನ್ನವಾಗಿರುತ್ತವೆ.

ದಮನಿತ ಕಣ್ಣುಗಳು ಆ ವ್ಯಂಗ್ಯಚಿತ್ರದಲ್ಲಿ ನೆಹರು ಅಂಬೇಡ್ಕರ್ ಅವರನ್ನು ಉಸ್ತುವಾರಿ ಮಾಡುವಂತೆ ಕಂಡರೆ ಅದರಲ್ಲಿ ಆ ಕಣ್ಣಿನ ತಪ್ಪೇನೂ ಇಲ್ಲ.

ಹಾಗೆಯೇ ಕೆಲವು ಕಾಮಾಲೆ ಕಣ್ಣುಗಳು ನೆಹರು ಚಾಟಿ ಬೀಸುತ್ತಿರುವುದು ಅಂಬೇಡ್ಕರ್ ಮೇಲೆ ಎಂದು ಅಂದುಕೊಳ್ಳುವುದನ್ನೂ ಆ ವ್ಯಂಗ್ಯಚಿತ್ರ ತಡೆಯುವುದಿಲ್ಲ.

ಇದನ್ನೂ ಓದಿ: ಅಮೆರಿಕಾದಲ್ಲಿ ರದ್ದಾಗಲಿದೆ ಒಪಿಟಿ ಕಾಯ್ದೆ?; 80 ಸಾವಿರ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಈ ಬಗೆಯ ಓದಿನ ಹಿಂದೆ ಒಂದು ಅವಕಾಶವಾದಿ ರಾಜಕಾರಣ ಇರುವುದು ಸ್ಪಷ್ಟವಾದರೂ ಒಟ್ಟಾರೆ ನೆಹರು ಮತ್ತು ಅಂಬೇಡ್ಕರ್ ಅವರ ವಿಚಾರ ಬೇಧ ಮತ್ತು ಪ್ರಧಾನಿ ಮತ್ತು ಕಾಂಗ್ರೆಸ್ ಪಕ್ಷ ಪ್ರತಿನಿಧಿಸುತ್ತಿದ್ದ ಹಿತಾಸಕ್ತಿಗಳು ಅಂಬೇಡ್ಕರ್ ಅವರು ಪ್ರತಿನಿಧಿಸುತ್ತಿದ ಹಿತಾಸಕ್ತಿಗಳ ಮೇಲೆ ಚಾಟಿಯನ್ನೇ ಬೀಸಿದ ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ನೋಡಿದಾಗ ವ್ಯಂಗ್ಯಚಿತ್ರ ಅನುದ್ದೇಶಪೂರ್ವಕವಾಗಿ ಹಲವು ಓದುಗಳನ್ನು ಹುಟ್ಟಿಸುತ್ತದೆ.

ಹೀಗಾಗಿ ಬಹುಬಗೆಯ ಓದಿನ ಸಾಧ್ಯತೆ ವ್ಯಂಗ್ಯ ಚಿತ್ರದಲ್ಲೂ ಇದೆ. ನೋಡುಗರಲ್ಲೂ ಇದೆ.

ಹೀಗಾಗಿ ಅದರ ಬಗ್ಗೆ ಹುಯಿಲೆಬ್ಬಿಸ್ರುವ ಅವಕಾಶವಾದಿ ರಾಜಕಾರಣಿಗಳ ದುರುದ್ದೇಶವನ್ನು ಟೀಕಿಸಬಹುದಾದರೂ ಆ ಬಗೆಯ ಓದಿನ ಸಾಧ್ಯತೆಯನ್ನು ಸಾಹಿತ್ಯ ಮತ್ತು ಸಂಸ್ಕೃತಿ ಅರ್ಥವಾಗದವರ ಬುದ್ಧಿಹೀನ ಓದು ಎಂದು ತಿರಸ್ಕರಿಸಲಾಗುವುದಿಲ್ಲ.

ಹೀಗಾಗಿ ಅಂಬೇಡ್ಕರ್ ಅವರನ್ನು ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಅವಕಾಶವಾದಿ ರಾಜಕರಣವನ್ನು ಟೀಕಿಸುವ ಹೊತ್ತಿನಲ್ಲೇ ಬದಲಾದ ಸಂದರ್ಭ ಮತ್ತು ಎಚ್ಚೆತ್ತ ದಮನಿತ ಪ್ರಜ್ನೆಗಳ ಹಿನ್ನೆಲಯಲ್ಲಿ ಒಟ್ಟಾರೆ ವಿರೋಧವನ್ನು ಸಹಾನುಭೂತಿಯಿಂದಲೇ ಪರಿಶೀಲಿಸಬೇಕಾಗುತ್ತದೆ. ಈ ವ್ಯಂಗ್ಯಚಿತ್ರವನ್ನು ಅಪಮಾನವೆಂಬಂತೆ ಪ್ರಾಮಾಣಿಕವಾಗಿಯೇ ಗ್ರಹಿಸಬಹುದಾದ ತಿಳವಳಿಕಯೆನ್ನು ರಾಜಕೀಯ ಮುಗ್ಧತೆಯೆಂದು ಅವಗಣನೆ ಮಾಡುವುದು ಸಹ ಇಂದಿನ ದಲಿತ ಪ್ರಶ್ನೆಯನ್ನು ತಿರಸ್ಕರಿಸುವ ದುಷ್ಟ ವಿಧಾನವೇ ಆಗಿಬಿಡುವ ಸಾಧ್ಯತೆ ಇದೆ..

ಅದೇನೇ ಇರಲಿ. ಈ ವಿರೋಧಕ್ಕೆ ಐತಿಹಾಸಿಕ ತಳಹದಿಯಿದೆ ಎಂದು ಒಪ್ಪಿಕೊಂಡ ಮೇಲೆ ಆ ವ್ಯಂಗ್ಯಚಿತ್ರವನ್ನು ಮತ್ತು ಪಠ್ಯವನ್ನು ಏನು ಮಾಡಬೇಕು?

ಈ ಪ್ರಶ್ನೆಗೆ ಮಾತ್ರ ನಮ್ಮ ಪಾರ್ಲಿಮೆಂಟು ಅತ್ಯಂತ ಕೆಟ್ಟ ಉತ್ತರವನ್ನು ನೀಡಿದೆ. ಆ ವ್ಯಂಗ್ಯಚಿತ್ರವಾಗಲೀ, ಅದನ್ನು ಪಠ್ಯಕ್ಕೆ ಸೇರಿಸಿದ ಸುಭಾಷ್ ಮತ್ತು ಯಾದವ್ ಅವರಿಗೇ ಆಗಲೀ ಯಾವುದೇ ಜಾತಿವಾದಿ ದುರುದ್ದೇಶಗಳಿಲ್ಲ. ಹೀಗಾಗಿ ಅವರ ಮೇಲೆ ಅದನ್ನು ಆರೋಪಿಸುವುದು, ಇಡೀ ಪಠ್ಯಪುಸ್ತಕವನ್ನೇ ಹಿಂತೆಗೆದುಕೊಳ್ಳುವುದು ಹಾಗೂ ಅವರ ಮೇಲೆ ಕೇಸುಗಳನ್ನು ಜಡಿಯುವುದು, ಹಲ್ಲೆ ಮಾಡುವುದು ಇತ್ಯಾದಿಗಳೆಲ್ಲಾ ಅತಿರೇಕದ ಮತ್ತು ಅವಕಾಶವಾದಿ ಜಾತಿ ರಾಜಕಾರಣದ ಕ್ರಮಗಳಾಗಿವೆ. ಈ ಕ್ರಮಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ಮತ್ತು ದ್ವೇಷದ ರಾಜಕಾರಣವನ್ನು ಮತ್ತು ಸಂಕುಚಿತ ತಾತ್ವಿಕತೆಯನ್ನು ಗಟ್ಟಿಗೊಳಿಸುತ್ತದೆ.

ಸಂದರ್ಭದ ವ್ಯಂಗ್ಯವೇನೆಂದರೆ ವಿದ್ಯಾರ್ಥಿಗಳನ್ನು ಪಠ್ಯ ಪುಸ್ತಕದ ಆಚೆ ಮತ್ತು ಅವು ನೀಡುತ್ತಿದ್ದ “ಅಧಿಕೃತ ಸತ್ಯ”ಗಳನ್ನು ವಿಮರ್ಶೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಾನಸಿಕತೆಯನ್ನು ಬುದ್ಧಿಮತ್ತೆಯನ್ನು ತಯಾರು ಮಾಡಬೇಕೆಂಬ ಅತ್ಯಂತ ಪ್ರಗತಿಪರ ದೃಷ್ಟಿಯಿಂದ ಈಗ NCERT ಮಾರ್ಗದರ್ಶನದಂತೆ ಪಠ್ಯಗಳು ತಯಾರಾಗುತ್ತಿವೆ.

ಹಾಗೂ ಪಠ್ಯದಲ್ಲಿ ಏಕತಾನತೆಯನ್ನು ಕಡಿಮೆ ಆಡುವ ದೃಷ್ಟಿಯಿಂದ ಮತ್ತು ವಿದ್ಯಾರ್ಥಿಗಳಲ್ಲಿ ಟೀಕಾತ್ಮಕ ಮತ್ತು ವಿಮರ್ಶಾತ್ಮಕ ಸಂವೇದನೆಯನ್ನು ಬೆಳಸುವ ದೃಷ್ಟಿಯಲ್ಲಿ ವ್ಯಂಗ್ಯಚಿತ್ರಗಳನ್ನು ಬಳಸಿಕೊಳ್ಳಲಾಗಿದೆ.ಸದರಿ ವ್ಯಂಗ್ಯಚಿತ್ರವೂ ಆ ದೃಷ್ಟಿಕೋನದ ಭಾಗ.

ಪ್ರಾಯಶಃ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ‘ಕೊಟ್ಟಿದ್ದನ್ನು ತುಂಬಿಕೊಳ್ಳುವ’ ಗೋಣಿಚೀಲದಂಥ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಬದಲಿಗೆ ವಿಮರ್ಶೆ ಮತ್ತು ಸ್ವಂತ ಚಿಂತನೆಯುಳ್ಳ ಪ್ರಬುದ್ಧ ವಿದ್ಯಾರ್ಥಿಗಳನ್ನು ನಾಗರಿಕರನ್ನು ಸೃಷ್ಟಿಸುವ ಉದ್ದೇಶದಿಂದ ವಿದ್ಯಾರ್ಥಿ ಕೇಂದ್ರಿತ ಮತ್ತು ಪ್ರಜಾತಾಂತ್ರಿಕ ಪ್ರಜ್ನೆ ಪಠ್ಯರಚನೆಯಲ್ಲಿ ಬರುತ್ತಿದೆ. ಇದು ಸ್ವಾಗತಾರ್ಹ.

ಇದನ್ನೂ ಓದಿ: ಬೆಂಗಳೂರಲ್ಲಿ ಬದಲಾಯಿತು ಸಿಎಂ ಹೆಸರು? ಬೆಲ್ಲದ್ ಬದಲು ಬೊಮ್ಮಾಯಿಗೆ ಕುದುರಿತು ಲಕ್!

ಹೀಗಾಗಿ ಈ ಪ್ರಕರಣದಲ್ಲಿ ಈ ವ್ಯಂಗ್ಯಚಿತ್ರದ ಜೊತೆಗೆ ಸಂವಿಧಾನ ರಚನೆಯ ಬಹುಮುಖಿ ಓದನ್ನು ಸಾಧ್ಯವಾಗಿಸಬಲ್ಲ ಮತ್ತಷ್ಟು ಚಿತ್ರವೋ. ಪಠ್ಯವೋ, ಹೇಳಿಕೆಗಳೊ ಸೇರ್ಪಡೆಯಾಗಿ ವಿದ್ಯಾರ್ಥಿಗೆ ಸಂವಿಧಾನ ರಚನೆಯ ಬೇರೆ ಮುಖಗಳು ಮತ್ತು ಅದರಲ್ಲಡಗಿದ್ದ ಸಂಕೀರ್ಣತೆಯನ್ನು ಪರಿಚಯಿಸುವಂತಾಗಬೇಕೆ ಹೊರತು ಈ ವ್ಯಂಗ್ಯಚಿತ್ರವನ್ನಾಗಲೀ, ಪಠ್ಯವನ್ನಾಗಲೀ ಹಿಂತೆಗೆದುಕೊಳ್ಳಬಾರದು. ಹಾಗಾದಲ್ಲಿ ಅದು ಯಥಾಸ್ಥಿತಿವಾದದ ವಿಜಯವಾಗುತ್ತದೆ.

ಅದೇರೀತಿ ಅಂಬೇಡ್ಕರ್ ಅವರು ದಮನಿತ ಸಮುದಾಯದ ಐಕಾನ್ ಆದ್ದರಿಂದ ಅವರನ್ನು ಟೀಕಿಸುವುದು ತಪ್ಪು ಎಂಬ ಅಭಿಪ್ರಾಯವೂ ಸಹ ಸ್ವತಃ ಅಂಬೇಡ್ಕರ್ ಅವರೇ ವಿರೋಧಿಸುತ್ತಿದ್ದ ಮೂರ್ತಿಪೂಜೆಗೆ ಇಂಬುಕೊಟ್ಟಂತಾಗುತ್ತದೆ.

ಅಂಬೇಡ್ಕರ್ ಆಗಲೀ, ಮಾರ್ಕ್ಸ್ ಆಗಲೀ, ಪ್ರತಿಮೆಗಳಾದ ತಕ್ಷಣ ವರ್ತಮಾನದಲ್ಲಿ ಅವರ ಸಿದ್ಧಾಂತದ ಬಳಕೆ ಸಾಯುತ್ತದೆ.

ಆಯಾ ಕಾಲಘಟ್ಟದ ಉತ್ಪನ್ನಗಳಾದ ಮಾರ್ಕ್ಸ್ , ಅಂಬೇಡ್ಕರ್ ಅವರಂಥ ದಾರ್ಶನಿಕರು ಪ್ರತಿಪಾದಿಸಿದ ದರ್ಶನ ಮತ್ತು ವಿಮೋಚನಾ ಮಾರ್ಗಗಳಲ್ಲಿ ಕಾಲಾತೀತ ಸತ್ಯಗಳು ಇದ್ದಂತೆಯೇ ಕಾಲಬಾಹಿರವಾದ ಸಂಗತಿಗಳೂ ಇವೆ. ಅದರಲ್ಲಿನ ಸಾರ್ವತ್ರಿಕತೆಯನ್ನು ಮುಂದುವರೆಸಿ ವರ್ತಮಾನ ಬೇಡುವಂತೆ ಆಯಾ ಸಿದ್ಧಾಂತಗಳನ್ನು ಪುನರುಜ್ಜೀವೀಕರಿಸುವ ಮೂಲಕ ಮಾತ್ರ ಅಂಬೇಡ್ಕರ್ ಆಗಲೀ ಮಾರ್ಕ್ಸ್ ಆಗಲಿ ಮರುಜೀವ ಪಡೆಯುತ್ತಾರೆ.

ಅದರ ಬದಲಿಗೆ ಅವರನ್ನು ಪ್ರತಿಮೆಗಳನ್ನಾಗಿಸುವವರು ಮತ್ತು ಅವರ ದರ್ಶನಗಳನ್ನು ಚಲನರಹಿತ ಶಾಸ್ತ್ರಗಳನ್ನಾಗಿಸುವವರು ಈ ದಾರ್ಶನಿಕರನ್ನು ಪ್ರತಿನಿತ್ಯ ಸಾಯಿಸುತ್ತಾರೆ. ಹಾಗೆ ನೋಡಿದರೆ ಇಂದಿನ ದಮನಿತ ಸಮುದಾಯಗಳ ರಾಜಕಾರಣ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆ ಈ ಜೀವಂತ ಸಿದ್ಧಾಂತಗಳ ಪ್ರಾಣವನ್ನು ತೆಗೆದು ಸ್ಥಾವರ ಮಾಡುವ ಪ್ರತಿಮಾ ರಾಜಕಾರಣವೇ…..

ಹೀಗಾಗಿ ವ್ಯಂಗ್ಯ ಇರುವುದು ನಮ್ಮ ಇಂದಿನ ಸಂಕೀರ್ಣ ಸಂದರ್ಭದಲ್ಲಿ. ಒಂದು ಸಂಕೀರ್ಣ ಸಂದರ್ಭವನ್ನು ವಿಶ್ಲೇಷಿಸುವಾಗ ಕಪ್ಪು ಬಿಳುಪಿನ ತೀರ್ಮಾನಗಳಿಗೆ ಬರುವುದು ಕಷ್ಟ. ಹೀಗಾಗಿ ಇಂಥ ಸಂದರ್ಭಗಳಲ್ಲಿ ಅಂತಿಮವಾಗಿ ನಿಲುವಿನ ನೆಲೆ ಮತ್ತು ಖಾಚಿತ್ಯವನ್ನು ಪುನರುಚ್ಚರಿಸುವ ಅಗತ್ಯ ಬೀಳುತ್ತದೆ.

ಆದ್ದರಿಂದ ಒಟ್ಟು ಸಾರಾಂಶದಲ್ಲಿ ಹೇಳುವುದಾದರೆ:..

ಸುಭಾಷ್ ಪಾಲ್ಷೀಕರ್ ಮತ್ತು ಯೋಗೇಂದ್ರ ಯಾದವ್ ಮೇಲೆ ಹಾಕಿರುವ ಪ್ರಕರಣವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಇಡೀ ಪಠ್ಯವನ್ನು ಹಿಂತೆಗೆದುಕೊಳ್ಳುವ ಸರ್ಕಾರ ನಿರ್ಧಾರ ಖಂಡನಾರ್ಹ. ಕೂಡಲೇ ಆ ನಿರ್ಧಾರವನ್ನು ವಾಪಸ್ ಪಡೆಯಬೇಕು.

ವ್ಯಂಗ್ಯಚಿತ್ರಕ್ಕೆ ಬರುತ್ತಿರುವ ಒಟ್ಟಾರೆ ಪ್ರತಿರೋಧವನ್ನು ಅವಕಾಶವಾದಿ ರಾಜಕಾರಣ ಎಂದು ತಿರಸ್ಕರಿಸಲು ಸಾಧ್ಯವಿಲ್ಲ. ಬದಲಾದ ಸಂದರ್ಭ ಮತ್ತು ಎಚ್ಚೆತ್ತ ದಮನಿತ ಪ್ರಜ್ನೆಗಳು ಇತಿಹಾಸಕ್ಕೆ ಸಂಬಂಧ ಪಟ್ಟಂತ ಎಲ್ಲಾ ಓದನ್ನು ಮುರುನಿರ್ವಚನಕ್ಕೆ ಒಳಪಡಿಸುವುದು ಪ್ರಜಾತಂತ್ರಕ್ಕೆ ಪೂರಕವಾದದ್ದೇ. ಹೀಗಾಗಿ ಈ ವಿರೋಧವನ್ನು ಸಹಾನ್ಜುಭೂತಿಯಿಂದಲೇ ನೋಡಬೇಕು ಮತ್ತು ಆ ವಿರೋಧದ ಧ್ವನಿಗೂ ಅವಕಾಶವಿರುವಂತೆ ನಮ್ಮ ಇತಿಹಾಸದ ಓದನ್ನು ಬಹುಮುಖೀ ನಿರ್ವಚನಕ್ಕೆ ಒಳಪಡಿಸಬೇಕು.

ಹೀಗಾಗಿ ಇಂದಿನ ಸಂದರ್ಭ ಹೆಚ್ಚೆಚು ಓದಿನ ಸಾಧ್ಯತೆಗಳನ್ನು ಆಗಮಾಡುವ ಪಠ್ಯ ಸಾಮಗ್ರಿಗಳ ಸೇರ್ಪಡೆಯನ್ನು ಕೇಳುತ್ತವೆಯೇ ವಿನಃ ವಿಮರ್ಶೆ ಮತ್ತು ಟೀಕೆಯನ್ನೇ ತೆಗೆದುಹಾಕುವಂತ ಅವಿiರ್ಶಾತ್ಮಕ ಓದನ್ನಲ್ಲ. ಅಂಥ ಕ್ರಮ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮ ಜ್ನಾನವನ್ನು ಹುಟ್ಟಿಸುವ ಬದಲಿಗೆ ಯಂತ್ರಗಳನ್ನು ಸೃಷ್ಟಿಸುತ್ತದೆ.

ನಮ್ಮ ಐಕಾನ್‌ಗಳನ್ನು ಪದೇಪದೇ ಪುನರ್ ವಿಮರ್ಶೆಗೊಳಪಡಿಸುವ ಮತ್ತು ಅವರ ಸಾಧನೆಯ ಶಕ್ತಿಯನ್ನು ಪಡೆದುಕೊಂಡು ಅವರ ಮಿತಿಯನ್ನು ಮೀರಿ ಬೆಳೆಯುವ ರಾಜಕೀಯ ಸಂಸ್ಕೃತಿ ಬೆಳೆಸಬೇಕೆ ವಿನಃ ನಾಯಕರನ್ನು ಪ್ರಶ್ನಾತೀತ ಪ್ರತಿಮೆಗಳನ್ನಾಗಿಸುವುದು ತಪ್ಪು.

ನಮ್ಮ ಪಾರ್ಲಿಮೆಂಟಿನಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆಗಳು ದಿನನಿತ್ಯ ನಡೆಯುತ್ತಿರುವಾಗಲೂ ಎಂದು ಅದರ ವಿರುದ್ಧ ಇಷ್ಟು ದೊಡ್ಡ ಧ್ವನಿ ಎದ್ದಿರಲಿಲ್ಲ. ಆದರೆ ಈ ವ್ಯಂಗ್ಯಚಿತ್ರವನ್ನು ವಾಪಸ್ ತೆಗೆದುಕೊಳ್ಳಬೇಕೆಂಬ ಧ್ವನಿ ಮಾತ್ರ ಪಾರ್ಲಿಮೆಂಟಿನಲ್ಲಿ ಅತಿ ಗಟ್ಟಿಯಾಗಿ.ಕೇಳಿಸಿದ್ದು ಮಾತ್ರವಲ್ಲದೆ ದಲಿತ ವಿರೋಧಿಗಳು, ಅವಕಾಶವಾದಿಗಳು ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕಾರಣಿಗಳು ಒಂದಾಗಿ ಹುಯಿಲೆಬ್ಬಿಸಿ ಇಡೀ ಪಠ್ಯ ಪುಸ್ತಕವನ್ನೇ ಹಿಂತೆಗೆದುಕೊಳ್ಳುವಂತೆ ಮಾಡಿಬಿಟ್ಟರು.

ಪ್ರಾಯಶಃ ಇದು ನಮ್ಮ ಸಂದರ್ಭದ ಅತಿ ದೊಡ್ಡ ವ್ಯಂಗ್ಯಚಿತ್ರವಲ್ಲವೇ?

– ಶಿವಸುಂದರ್

ಇದನ್ನೂ ಓದಿ: ಯುಎಪಿಎ ಅಡಿಯಲ್ಲಿ ಬುಡಕಟ್ಟು ಜನಾಂಗದ ದಮನ; ಪ್ರತಿ ವರ್ಷವೂ ಏರುತ್ತಲೇ ಇದೆ ಬಂಧನದ ಸಂಖ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights