ಅಮೆರಿಕಾದಲ್ಲಿ ರದ್ದಾಗಲಿದೆ ಒಪಿಟಿ ಕಾಯ್ದೆ?; 80 ಸಾವಿರ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಅಮೆರಿಕಾದಲ್ಲಿ ಸಂಸದರ ಗುಂಪೊಂದು ‘ವಿದೇಶಿ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮುಗಿದ ನಂತರವೂ ಕೆಲವು ಷರತ್ತುಗಳ ಅಡಿಯಲ್ಲಿ ಉದ್ಯೋಗಕ್ಕಾಗಿ ಅಮೆರಿಕಾದಲ್ಲಿಯೇ ಉಳಿಯಲು ಅವಕಾಶವಿದ್ದ ಕಾಯ್ದೆಯನ್ನು ತೆಗೆದು ಹಾಕಲು’ ಮಸೂದೆಯೊಂದನ್ನು ಮಂಡಿಸಿದ್ದಾರೆ. ಈ ಮಸೂದೆಯು ಅಮೆರಿಕಾ ಕಾಂಗ್ರೆಸ್‌ (ಸಂಸತ್ತು)ನಲ್ಲಿ ಅಂಗೀಕಾರಗೊಂಡರೆ ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 80 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

ಅಮೆರಿಕಾದ ಬಲಪಂಥೀಯ ಪಕ್ಷವಾದ ರಿಪಬ್ಲಿಕನ್‌ ಪಕ್ಷದ ಸಂಸದರಾದ ಪಾಲ್ ಎ. ಗೋಸರ್, ಮೋ ಬ್ರೂಕ್ಸ್, ಆಂಡಿ ಬಿಗ್ಸ್ ಮತ್ತು ಮ್ಯಾಟ್ ಗೇಟ್ಜ್ ಅವರು ಫೇರ್‌ನೆಸ್‌ ಫಾರ್ ಹೈ-ಸ್ಕಿಲ್ಡ್ ಅಮೆರಿಕನ್ಸ್‌‌ ಕಾಯ್ದೆಯನ್ನು ಪರಿಚಯಿಸಿದ್ದಾರೆ. ಸಂಸದರಾದ ಪಾಲ್ ಎ. ಗೋಸರ್‌‌ ಮೊದಲ ಬಾರಿಗೆ 116 ನೇ ಸಂಸತ್‌ ಅಧಿವೇಶನಲ್ಲಿ ಫೇರ್‌ನೆಸ್ ಫಾರ್ ಹೈ-ಸ್ಕಿಲ್ಡ್ ಅಮೆರಿಕನ್ಸ್‌‌ ಕಾಯ್ದೆಯನ್ನು ಪರಿಚಯಿಸಿದ್ದರು.

ಈ ಮಸೂದೆಯು ಆಪ್ಷನಲ್‌ ಪ್ರಾಕ್ಟೀಸ್‌ ಟ್ರೈನಿಂಗ್‌(ಒಪಿಟಿ) ಕುರಿತ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತದೆ. ಒಪಿಟಿ ಎಂದರೆ ಅಮೆರಿಕಾ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ಐಸಿಇ) ನಿಂದ ನಿರ್ವಹಿಸಲ್ಪಡುವ ಅತಿಥಿ ಕಾರ್ಮಿಕರ ಕಾರ್ಯಕ್ರಮವಾಗಿದೆ.

ಅಮೆರಿಕಾದಲ್ಲಿ ಒಪಿಟಿ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 80,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿಯಾಗಿದೆ. ಮಸೂದೆಯು ಕಾನೂನಾಗಲು ಅಮೆರಿಕಾ ಅಧ್ಯಕ್ಷರ ಸಹಿ ಅಗತ್ಯವಿದೆ. ಅದಕ್ಕೂ ಮೊದಲು ಮಸೂದೆಯು ಸೆನೆಟ್‌ನಲ್ಲಿ ಅಂಗೀಕಾರ ಆಗಬೇಕಾಗುತ್ತದೆ.

ಆದಾಗ್ಯೂ, ಅಮೆರಿಕಾ ಸಂಸತ್‌ನ ಎರಡೂ ಸದನದಲ್ಲಿ ಡೆಮೋಕ್ರಾಟ್‌ ಬಹುಮತವನ್ನು ಹೊಂದಿದ್ದರಿಂದ ಸೆನೆಟ್ ಮೂಲಕ ಮಸೂದೆಯನ್ನು ಅಂಗೀಕರಿಸುವುದು ಅಷ್ಟು ಸುಲಭವಲ್ಲ.

ಒಪಿಟಿಯಿಂದಾಗಿ ವಿದೇಶಿ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದ 1 ಲಕ್ಷಕ್ಕೂ ಹೆಚ್ಚು ವಿದೇಶಿಗರು ಪದವಿಯ ನಂತರ ಅಮೆರಿಕಾದಲ್ಲೇ ಮೂರು ವರ್ಷಗಳವರೆಗೆ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಪಾಲ್ ಎ. ಗೋಸರ್ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕಾ ಮಾಸ್ಕ್‌ ನಿಯಮವು ಭಾರತದ ಡೇಟಾವನ್ನು ಆಧರಿಸಿದೆ; ಇದು ದಡ್ಡತನ: ಅಮೆರಿಕಾ ಕಾಂಗ್ರೆಸ್ಸಿಗ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights