Fact Check: ವಿಡಿಯೋದಲ್ಲಿ ಹಂಚಿಕೊಳ್ಳಲಾದ ಶಿಲ್ಪಕಲೆಗಳು ಅಯೋಧ್ಯೆ ರಾಮ ಮಂದಿರದ್ದವೇ?

ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿರುವ ಶಿಲ್ಪಿಗಳ ವಿನ್ಯಾಸ ಎಂದು ಹೇಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕಂಡುಬಂದಿರುವ ಅದ್ಬುತ ಶಿಲ್ಪಕಲೆಯು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ್ದು ಎಂದು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್‌ನ ಸತ್ಯಾಸತ್ಯೆತೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಅಯೋಧ್ಯ ರಾಮಮಂದಿರದಲ್ಲಿ ಕೆತ್ತಲಾಗುತ್ತಿರುವ ಅದ್ಭುತ ಶಿಲ್ಪಗಳ ದೃಶ್ಯಗಳು.

ಸತ್ಯ: ವಿಡಿಯೋದಲ್ಲಿರುವ ಕಟ್ಟಡವು ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾದ ಚುಲಿ ಜೈನ ದೇವಾಲಯವಾಗಿದೆ. ಈ ದೇವಸ್ಥಾನವು ಗುಜರಾತ್ ರಾಜ್ಯದ ಹಲ್ವಾಡ್-ದಂಗಾಧರ ರಸ್ತೆಯ ಸಮೀಪದಲ್ಲಿದೆ. ಚುಲಿ ಜೈನ ಮಂದಿರವನ್ನು ‘ಶ್ರೀ ತರಂಗ್ ವಿಹಾರ್ ಧಾಮ’ ಎಂದೂ ಕರೆಯುತ್ತಾರೆ. ಹೀಗಾಗಿ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಹಲವಾರು ಫೇಸ್‌ಬುಕ್‌ ಬಳಕೆದಾರರು ತಮ್ಮ ಮುಖಪುಟದಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಬಳಕೆದಾರರು ತಮ್ಮ ಪೋಸ್ಟ್‌ನ ವಿವರಣೆಯಲ್ಲಿ ವಿಡಿಯೋದಲ್ಲಿರುವ ಅದ್ಭುತವಾದ ಶಿಲ್ಪಕಲೆಗಳೊಂದಿಗೆ ನಿರ್ಮಿಸಲಾಗಿರುವ ಕಟ್ಟಡವು ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾದ ಚುಲಿ ಜೈನ ಮಂದಿರವಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ವಿವರಣೆಯೊಂದಿಗೆ ಹಲವಾರು ಬಳಕೆದಾರರೂ ಇದೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಕೊಂಡಿದ್ದಾರೆ. ಆ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವಿವರಗಳ ಆಧಾರದ ಮೇಲೆ, ವೀಡಿಯೋದಲ್ಲಿ ಕಾಣುವ ದೃಶ್ಯಗಳ ಸಂಪೂರ್ಣ ವಿವರಗಳಿಗಾಗಿ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ, ‘ಡೂನೈಟೆಡ್ ನ್ಯೂಸ್’ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚೂಲಿ ಗ್ರಾಮದಲ್ಲಿ ನಿರ್ಮಿಸಲಾದ ಈ ಜೈನ ದೇಗುಲವನ್ನು ವಿವರಿಸುವ ವೀಡಿಯೊವನ್ನು ಪ್ರಕಟಿಸಿರುವುದು ದೊರೆತಿದೆ. ಈ ವೀಡಿಯೊ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ದೃಶ್ಯಗಳನ್ನು ಹೋಲಿಕೆ ಮಾಡಿ ನೋಡಿದಾಗ, ಅದೇ ರೀತಿಯ ಶಿಲ್ಪಗಳನ್ನು ನೋಡಬಹುದು. ನ್ಯೂಸ್‌ ಚಾನೆಲ್ ಪ್ರಸಾರ ಮಾಡಿರುವ ವಿಡಿಯೋದ ವಿವರಣೆಯಲ್ಲಿಯೂ ಜೈನ ದೇವಾಲಯವನ್ನು ಗುಜರಾತ್ ರಾಜ್ಯದ ಹಲ್ವಾಡ್-ದಂಗಾಧರ ರಸ್ತೆಯ ಬಳಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಚುಲಿ ಗ್ರಾಮದಲ್ಲಿರುವ ಈ ಜೈನ ದೇಗುಲವನ್ನು ‘ಶ್ರೀ ತರಂಗ್ ವಿಹಾರ್ ಧಾಮ’ ಎಂದೂ ಕರೆಯುತ್ತಾರೆ. ಈ ದೇಗುಲಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ ಕೆಲವು ವೀಡಿಯೋಗಳು ‘ಶ್ರೀ ತರಂಗ ಧಾಮ ತೀರ್ಥ’ ಎಂದು ಕರೆದು ಪ್ರಸಾರವಾಗಿವೆ. ಆ ವೀಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಶ್ರೀ ತರಂಗ್ ವಿಹಾರ್ ಧಾಮದ ದೇಗುಲವನ್ನು ಗೂಗಲ್‌ನಲ್ಲಿ ಹುಡುಕಿದಾಗ ಗುಜರಾತ್ ರಾಜ್ಯದ ಚುಲಿ ಗ್ರಾಮದಲ್ಲಿ ಈ ದೇಗುಲವಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿರುವ ಅದೇ ಶಿಲ್ಪಗಳ ಫೋಟೋಗಳು ಗೂಗಲ್ ಮ್ಯಾಪ್‌ನಲ್ಲಿರುವ ಚುಲಿ ಜೈನ ದೇವಸ್ಥಾನಕ್ಕೆ ಸಂಬಂಧಿಸಿವೆ.

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದ ಫೋಟೋಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 31 ಮೇ 2021ರ ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ, ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯಲ್ಲಿ ಇನ್ನೂ ಶಿಲಾನ್ಯಾಸ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂಡಿಯಾ ಟಿವಿ ನ್ಯೂಸ್ ಪ್ರಕಟಿಸಿದ ಲೇಖನದ ಪ್ರಕಾರ, ಅಯೋಧ್ಯೆ ರಾಮ ಮಂದಿರದ ಶಿಲಾನ್ಯಾಸ ಕೆಲಸವು ಡಿಸೆಂಬರ್ 2021 ರಿಂದ ಆರಂಭವಾಗಲಿದೆ. ಈ ವಿವರಗಳನ್ನು ಆಧರಿಸಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿಲ್ಲ ಎಂದು ಖಚಿತವಾಗಿ ಹೇಳಬಹುದು.

ಅಂತಿಮವಾಗಿ, ಗುಜರಾತಿನ ಚುಲಿ ಜೈನ ದೇವಾಲಯದಲ್ಲಿರುವ ಶಿಲ್ಪಗಳನ್ನು ಅಯೋಧ್ಯೆಯ ರಾಮ ಮಂದಿರದಲ್ಲಿ ಕೆತ್ತಲಾಗುತ್ತಿರುವ ಅದ್ಭುತ ಶಿಲ್ಪಗಳು ಎಂದು  ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಅಮೆರಿಕಾದಲ್ಲಿ ರದ್ದಾಗಲಿದೆ ಒಪಿಟಿ ಕಾಯ್ದೆ?; 80 ಸಾವಿರ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights