ಪರಿಶಿಷ್ಟ ಜಾತಿಯವರನ್ನು ಸಿನಿಮಾ ಇಂಡಸ್ಟ್ರಿಯಿಂದ ಹೊರ ಹಾಕಬೇಕು ಎಂದ ನಟಿ; ಪ್ರಕರಣ ದಾಖಲು

ಸಿನಿಮಾ ಉದ್ಯಮದಲ್ಲಿನ ಎಲ್ಲಾ ತಪ್ಪು ಚಟುವಟಿಕೆಗಳಿಗೆ ಪರಿಶಿಷ್ಟ ಜಾತಿಯವರೇ ಕಾರಣ, ಅವರನ್ನು ಸಿನಿಮಾ ಇಂಡಸ್ಟ್ರಿಯಿಂದ ಹೊರಹಾಕಬೇಕು ಎಂದು ತಮಿಳು ನಟಿ, ತಮಿಳು ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸಿದ್ದ ಮೀರಾ ಮಿಥುನ್ ಹೇಳಿದ್ದು, ಅವರ ವಿರುದ್ದ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಟಿ ಮೀರಾ ಮಿಥುನ್‌ ಅವರು ಪರಿಶಿಷ್ಟ ಜಾತಿಯವರನ್ನು ನಿಂದಿಸಿ, ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕವಾಗಿ ಜನಾಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಮೀರಾ ಮಿಥುನ್, “ಎಲ್ಲಾ ಪರಿಶಿಷ್ಟ ಸಮುದಾಯದ ಸದಸ್ಯರು ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳಲ್ಲಿ ತೊಡಗಿರುವ ಕಾರಣ ತೊಂದರೆ ಎದುರಿಸುತ್ತಾರೆ. ಯಾವುದೇ ಕಾರಣವಿಲ್ಲದೆ ಯಾರೂ ಅನಗತ್ಯವಾಗಿ ಕೆಟ್ಟದಾಗಿ ಮಾತನಾಡುವುದಿಲ್ಲ” ಎಂದಿದ್ದರು.

ಸಿನಿಮಾ ಉದ್ಯಮದಲ್ಲಿನ ಎಲ್ಲಾ ತಪ್ಪು ಚಟುವಟಿಕೆಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರು ಮತ್ತು ಎಸ್ಸಿ ಸಮುದಾಯದ ಸದಸ್ಯರ ಕಾರಣ ಎಂದು ಮೀರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಲಾಕ್ಡೌನ್ ಎಫೆಕ್ಟ್ : ವಿಮಾನದಲ್ಲಿ ಮದುವೆಯಾದ ತಮಿಳುನಾಡು ದಂಪತಿ..!

“ಸಿನಿಮಾ ಉದ್ಯಮದಲ್ಲಿನ ಎಲ್ಲಾ ಪರಿಶಿಷ್ಟ ಜಾತಿಯ ಜನರನ್ನು, ನಿರ್ದೇಶಕರನ್ನು ಹೊರಹಾಕುವ ಸಮಯ ಇದು ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಜೊತೆಗೆ ಎಸ್‌ಸಿ ಸಮುದಾಯದ ನಿರ್ದೇಶಕರು ತಮ್ಮ ಫೋಟೋವನ್ನು ಅವರ ಚಲನಚಿತ್ರದ ಫಸ್ಟ್ ಲುಕ್‌ಗಾಗಿ ಬಳಸಿದ್ದಾರೆ ಎಂದು ಮೀರಾ ಹೇಳಿಕೊಂಡಿದ್ದಾರೆ.

ಆಕೆಯ ಸಂದರ್ಶನದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ಹೇಳಿಕೆಯನ್ನು ಅನೇಕರು ಖಂಡಿಸಿದರು. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸರಿಗೆ ಒತ್ತಾಯಿಸಿದ್ದರು.

ಇದನ್ನೂ ಓದಿ: ತಮಿಳು ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ; ಮಾಜಿ ಸಚಿವನ ವಿರುದ್ದ ಅತ್ಯಾಚಾರ ದೂರು ದಾಖಲು!

ವಿಡುದಲೈ ಸಿರುತೈಗಲ್ ಕಚ್ಚಿಯ ಉಪ ಪ್ರಧಾನ ಕಾರ್ಯದರ್ಶಿ ವನ್ನಿ ಅರಸು ಅವರ ದೂರಿನ ಆಧಾರದ ಮೇಲೆ, ಚೆನ್ನೈ ಪೊಲೀಸರು ಐಪಿಸಿಯ 153, 153 ಎ (1) (ಎ), 505 (1) (ಬಿ) ಸೇರಿದಂತೆ SC ಮತ್ತು ST (ದೌರ್ಜನ್ಯ ತಡೆ) ಕಾಯಿದೆಯ 7 ಸೆಕ್ಷನ್‌ಗಳ ಅಡಿಯಲ್ಲಿ ಮೀರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸೈಬರ್ ಕ್ರೈಂ ವಿಭಾಗದ ಪೋಲಿಸರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪದರ್ಶಿ ಮತ್ತು ನಟಿ ಮೀರಾ ಮಿಥುನ್ ಅವರಿಗೆ ವಿಚಾರಣೆಗೆ ಬರುವಂತೆ ಬುಧವಾರ ನೋಟಿಸ್ ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡು ದೇವಾಲಯಗಳಲ್ಲಿ ಮಹಿಳೆಯರು – ಅಬ್ರಾಹ್ಮಣರಿಗೆ ಅರ್ಚಕ ಹುದ್ದೆ; ರಾಜ್ಯದಲ್ಲೂ ಜಾರಿಗೆ ಆಗ್ರಹ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights