ಮುಂಬೈನಲ್ಲಿ ಡೆಲ್ಟಾ+ಗೆ ಮೊದಲ ಸಾವು : ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಬದುಕುಳಿಯದ ಮಹಿಳೆ..!
ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದರೂ ಮುಂಬೈನ 63 ವರ್ಷದ ಮಹಿಳೆ ಡೆಲ್ಟಾ+ಗೆ ಸಾವನ್ನಪ್ಪಿದ್ದಾಳೆ. ಮುಂಬೈನ ಡೆಲ್ಟಾ+ಗೆ ಮೊದಲ ಸಾವು ಇದಾಗಿದೆ.
63 ವರ್ಷದ ಮಹಿಳೆ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದು ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದಾರೆ. ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದ ಮಹಿಳೆಗೆ ಆರಂಭದಲ್ಲಿ ಒಣ ಕೆಮ್ಮು, ರುಚಿ ನಷ್ಟ, ದೇಹದ ನೋವು ಮತ್ತು ತಲೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಜುಲೈ 21 ರಂದು ಪರೀಕ್ಷೆಗೆ ಒಳಪಡಿಸಿದಾಗ ಈಕೆಗೆ ಕೋವಿಡ್ ಇರುವುದು ಕಂಡುಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಆದರೆ ತೀವ್ರ ಉಸಿರಾಟದ ತೊಂದರೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತೆ ಇವರು ಮೂರು ದಿನಗಳ ನಂತರ (ಜುಲೈ 27) ನಿಧನರಾಗಿದ್ದಾರೆ. ಆಕೆಗೆ ಯಾವುದೇ ಪ್ರಯಾಣದ ಇತಿಹಾಸವಿರಲಿಲ್ಲ. ಆದರೂ ಆಕೆಗೆ ಸೋಂಕು ಹೇಗೆ ಹರಡಿತು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಮುಂಬೈನಲ್ಲಿ ಡೆಲ್ಟಾ+ 11 ಪ್ರಕರಣಗಳಿವೆ.
ಮಹಾರಾಷ್ಟ್ರದಲ್ಲಿ ಒಟ್ಟಾರೆ 65 ರೂಪಾಂತರ ಕೊರೊನಾ ಪ್ರಕರಣಗಳಿದ್ದು, ಮುಂಬೈನಲ್ಲಿ 11 ಪ್ರಕರಣಗಳಿವೆ.
ಇನ್ನೂ 69 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೂಡ ಡೆಲ್ಟಾ+ಗೆ ರಾಯಗಡದಲ್ಲಿ ಮೃತಪಟ್ಟಿದ್ದಾರೆ. ರತ್ನಗಿರಿಯ 80 ವರ್ಷದ ವೃದ್ಧೆ ಕಳೆದ ತಿಂಗಳು ಡೆಲ್ಟಾ+ಗೆ ಮೃತಪಟ್ಟಿದ್ದರು.