ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಲವ್ಲಿನಾಗೆ ಒಂದು ಕೋಟಿ ಬಹುಮಾನ; ಡಿಎಸ್‌ಪಿ ಹುದ್ದೆ!
ಟೋಕಿಯೋ ಒಲಿಂಪಿಕ್ಸ್‌ನ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಲವ್ಲಿನಾ ಬೋರ್ಗೋಹೈನ್ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಒಂದು ಕೋಟಿ ರೂ ನಗದು ಬಹುಮಾನ ನೀಡಿದ್ದಾರೆ. ಅಲ್ಲದೆ, ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಯನ್ನು ನೀಡಿದ್ದಾರೆ.
ಅಸ್ಸಾಂ ಮೂಲಕ ಲವ್ಲಿನಾ ಅವರು ಒಲಿಂಪಿಕ್ಸ್‌ನಲ್ಲಿ ರಾಜ್ಯಕ್ಕೆ ಮೊದಲ ಪದಕ ತಂದವರಾಗಿದ್ದಾರೆ. ಅವರಿಗೆ 2024ರ ಒಲಿಂಪಿಕ್ಸ್‌ವರೆಗೆ ಮಾಸಿಕ ಒಂದು ಲಕ್ಷ ರೂ ವಿದ್ಯಾರ್ಥಿ ವೇತನವನ್ನೂ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶರ್ಮಾ ಹೇಳಿದ್ದಾರೆ.
ಗುವಾಹಟಿಯಲ್ಲಿರುವ ರಸ್ತೆಗೆ ಆಕೆಯ ಹೆಸರನ್ನೂ ಇಡಲಾಗುವುದು ಎಂದು ಶರ್ಮಾ ಹೇಳಿದರು.
ಅಲ್ಲದೆ, ಲವ್ಲಿನಾ ಅವರ ನಾಲ್ವರು ತರಬೇತುದಾರರಾದ ಪ್ರಶಾಂತ್ ದಾಸ್, ಪಡುಮ್ ಬರುವಾ, ಸಂಧ್ಯಾ ಗುರುಂಗ್ ಮತ್ತು ರಾಫೆಲ್ ಗಮವಾಸ್ಕಾ ಅವರಿಗೆ ಅಸ್ಸಾಂ ಜನರ ಕೃತಜ್ಞತೆಯ ಸಂಕೇತವಾಗಿ ತಲಾ 10 ಲಕ್ಷ ರೂಗಳನ್ನು ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಅಬ್ಬರಿಸುತ್ತಿರುವ ಭಾರತೀಯ ವನಿತೆಯರು; ಮತ್ತೊಂದು ಪದಕ ತಂದ ಲವ್ಲಿನಾ!
ಬಾಕ್ಸಿಂಗ್ ಅಕಾಡೆಮಿಯೊಂದಿಗೆ ಒಂದು ಕ್ರೀಡಾ ಸಂಕೀರ್ಣವನ್ನು ಸರುಪಥರ್ ಕ್ಷೇತ್ರದಲ್ಲಿ ಸ್ಥಾಪಿಸಲಾಗುವುದು. ಇದು ಇನ್ನೂ ಹಲವು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
“ಲವ್ಲಿನಾ ರಾಜ್ಯಕ್ಕೆ ಮೊದಲ (ಒಲಿಂಪಿಕ್) ಪದಕವನ್ನು ತರುವ ಮೂಲಕ ರಾಜ್ಯದ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ನಾವು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಮತ್ತು ರಾಜ್ಯದ ಎಲ್ಲ ಜನರ ಪರವಾಗಿ, ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಅಸ್ಸಾಂ ಸಿಎಂ ಲವ್ಲಿನಾಗೆ ಶುಭಕೋರಿದ್ದ ಹೋರ್ಡಿಂಗ್ಸ್‌ನಲ್ಲಿ ಲವ್ಲಿನಾ ಫೋಟೋನೇ ಇಲ್ಲ; ವರದಿ ಮಾಡಿದ ವೆಬ್‌ಸೈಟ್ ಮೇಲೆ FIR