ವಾಹನಗಳಿಗೆ ಕೊಳ್ಳಿ ಇಟ್ಟವರಿಂದೆ ಕಾಣದ ‘ಕೈ’ : ಆರೋಪಿಗಳು ಕೊಟ್ಟ ಕಾರಣ ಒಪ್ಪಿಕೊಳ್ಳದ ಸತೀಶ್ ರೆಡ್ಡಿ!

ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ ವಾಹನಗಳಿಗೆ ಕೊಳ್ಳಿ ಇಟ್ಟವರು ಯಾರು ಎನ್ನುವ ತನಿಖೆ ನಡೆಯುತ್ತಿದ್ದು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಂಧಿತ ಆರೋಪಿಗಳು ಕೊಟ್ಟ ಕಾರಣವನ್ನು ಬೊಮ್ಮನ ಹಳ್ಳಿ ಶಾಸಕ ಸತೀಶ್‌ ರೆಡ್ಡಿ ಒಪ್ಪಿಕೊಳ್ಳಲು ತಯಾರಿಲ್ಲ. ಬದಲಿಗೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದಿದ್ದಾರೆ.

ಗಾರ್ವೆಬಾವಿಪಾಳ್ಯದ ನಿವಾಸಿ ಸಾಗರ್ (19), ಬೇಗೂರಿನ ಶ್ರೀಧರ್ (20) ಹಾಗೂ ನವೀನ್ ಅಲಿಯಾಸ್ ಕಾಳಪ್ಪ (22) ಬಂಧಿತರಾಗಿದ್ದು, ಆಗಸ್ಟ್‌‌ 11 ರ ಬುಧವಾರ ತಡರಾತ್ರಿ ಸತೀಶ್ ರೆಡ್ಡಿ ಅವರ ಮನೆ ಆವರಣಕ್ಕೆ ನುಗ್ಗಿದ್ದ ಆರೋಪಿಗಳು, ಅವರ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಕೊನೆಗೂ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪ್ರಕರಣದಲ್ಲಿ ಬಂಧಿಸಲಾದ ಮೂವರು ಆರೋಪಿಗಳನ್ನು ವಿಚಾರಿಸಿದಾಗ,‘ಶಾಸಕ ಸತೀಶ್‌ ರೆಡ್ಡಿ ಅವರನ್ನು ಭೇಟಿಯಾಗಲು ಅವಕಾಶ ಸಿಗದೆ ಇರುವುದರಿಂದ ಸಿಟ್ಟಾಗಿದ್ದ ಆರೋಪಿಗಳು ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.

ಆದರೆ ಇದನ್ನು ಒ್ಪಿಕೊಳ್ಳದ ಶಾಸಕ ಸತೀಶ್ ರೆಡ್ಡಿ ಇದರ ಹಿಂದೆ ಬೇರೆ ಯಾರದ್ದೂ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಬೇಗೂರು ಕೆರೆಯ ಶಿವನ ಪ್ರತಿಮೆಯ ವಿವಾದ :

ಬೇಗೂರು ಕೆರೆ ಅಭಿವೃದ್ಧಿಗೆ 2018 ರ ಮಾರ್ಚ್ 17 ರಂದು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದರು. ಆದರೆ ಬಿಬಿಎಂಪಿ ಕೆರೆ ಅಭಿವೃದ್ದಿ ಬದಲು ಕೆರೆಯ ಮಧ್ಯದಲ್ಲಿ ಕೃತಕ ದ್ವೀಪ ನಿರ್ಮಾಣ ಮಾಡಿ ಅಲ್ಲಿ ಶಿವನ ವಿಗ್ರಹ ಸ್ಥಾಪಿಸಲು ಮುಂದಾಗಿತ್ತು. ಇದು ಕೆರೆಯ ಸ್ವರೂಪವನ್ನು ಹಾಳು ಮಾಡುವುದಲ್ಲದೆ, ಕೆರೆಯ ವಿಸ್ತೀರ್ಣ ಮತ್ತು ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬ ಆತಂಕದಿಂದ ಕೆಲ ಪರಿಸರ ಹೋರಾಟಗಾರರು ಹೈಕೋರ್ಟ್‌ನಲ್ಲಿ ಬಿಬಿಎಂಪಿಯ ಕೆಲಸವನ್ನು ಪ್ರಶ್ನಿಸಿದ್ದರು. ಪ್ರಕರಣವನ್ನು ಆಲಿಸಿದ್ದ ಹೈಕೋರ್ಟ್ ಕೆರೆ ಪಾತ್ರವನ್ನು ಕಡಿಮೆ ಮಾಡುವ ಹಕ್ಕು ಯಾರಿಗೂ ಇಲ್ಲವೆಂದು ಸ್ಪಷ್ಟವಾಗಿ ತಿಳಿಸಿ, ಶಿವನ ವಿಗ್ರಹ ಮತ್ತು ಕೃತಕ ದ್ವೀಪ ನಿರ್ಮಾಣಕ್ಕೆ ತಡೆ ನೀಡಿತ್ತು.

ಅಷ್ಟೇ ಅಲ್ಲದೆ, ವಿಗ್ರಹವನ್ನು ಅಲ್ಲಿಂದ ತೆರವುಗೊಳಿಸಲು ಬಿಬಿಎಂಪಿ ನಿರ್ಣಯ ಕೈಗೊಳ್ಳುವಂತೆ ಆದೇಶಿಸಿರುವ ನ್ಯಾಯಾಲಯ ಎರಡು ವಾರಗಳ ಸಮಯ ನೀಡಿದೆ. ಆದರೆ, ಕಾನೂನಾತ್ಮಕ ತೊಡಕು ಮತ್ತು ಪರಿಸರ ಸಮಸ್ಯೆಯನ್ನು ಸಂಘಪರಿವಾರದ ಕಾರ್ಯಕರ್ತರು ಕೋಮುದ್ವೇಷಕ್ಕೆ ಬಳಸಿಕೊಂಡಿದ್ದು, ಪ್ರಕರಣವನ್ನು ಕೋಮು ವಿವಾದವನ್ನಾಗಿ ಮಾಡಿದ್ದರು.

ಇದರ ಮದ್ಯೆ ಶಾಸಕ ಸತೀಶ್‌ ರೆಡ್ಡಿ ಅವರ ಕಾರಿಗೆ ಬೆಂಕಿ ಹಚ್ಚಿದ್ದು, ಇದನ್ನೂ ಬೇಗೂರು ಕೆರೆಯ ವಿವಾದಕ್ಕೆ ತಗಲುಹಾಕಿಕೊಂಡು ಪ್ರಕರಣವನ್ನು ಮತ್ತಷ್ಟು ಸಿಕ್ಕುಸಿಕ್ಕನ್ನಾಗಿ ಮಾಡಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿ ವಿವಾದವನ್ನು ಸ್ವಲ್ಪ ಮಟ್ಟಿಗೆ ತಣ್ಣಗಾಗಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights