‘ಫೋಟೋಗಳನ್ನು ಅಳಿಸಿ, ಸಮವಸ್ತ್ರವನ್ನು ಸುಟ್ಟುಹಾಕಿ’: ಆಟಗಾರ್ತಿಯರಿಗೆ ಅಫ್ಘಾನ್‌ ಫುಟ್‌ಬಾಲ್‌ ತಂಡದ ಮಾಜಿ ನಾಯಕಿ!

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಟೋಗಳನ್ನು ಡಿಲೀಟ್‌ ಮಾಡಿ, ತಮ್ಮ ಗುರುತುಗಳನ್ನು ಅಳಿಸಿಹಾಕಿ ಮತ್ತು ತಮ್ಮ ಸ್ಪೋರ್ಟ್ಸ್‌ ಕಿಟ್‌ಗಳನ್ನು ಸುಟ್ಟು ಹಾಕಿ ಎಂದು ಅಫ್ಘಾನಿಸ್ತಾನದ ಆಟಗಾರ್ತಿಯರಿಗೆ ಅಫ್ಘಾನ್‌ ಮಹಿಳಾ ಫುಟ್‌ಬಾಲ್‌ ತಂಡದ ಮಾಜಿ ಕ್ಯಾಪ್ಟನ್ ಖಾಲಿದಾ ಪೋಪಾಲ್‌ ಒತ್ತಾಯಿಸಿದ್ದಾರೆ.

ಕೋಪನ್ ಹ್ಯಾಗನ್ ಮೂಲದ ಖಾಲಿದಾ ಪೋಪಾಲ್ ರಾಯಿಟರ್ಸ್‌ಗೆ ವಿಡಿಯೋ ಸಂದರ್ಶನ ನೀಡಿದ್ದು, ಈ ಹಿಂದೆ ಉಗ್ರರು ಮಹಿಳೆಯರನ್ನು ಕೊಂದಿದ್ದಾರೆ, ಅತ್ಯಾಚಾರ ಎಸಗಿದ್ದಾರೆ. ಇದೀಗ ಮಹಿಳಾ ಫುಟ್ಬಾಲ್ ಆಟಗಾರರ ಭವಿಷ್ಯ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಫ್ಘಾನ್ ಮಹಿಳಾ ಫುಟ್ಬಾಲ್ ಲೀಗ್‌ನ ಸಹ-ಸಂಸ್ಥಾಪಕಿಯೂ ಆಗಿರುವ ಖಾಲಿದಾ ತಮ್ಮ ಧ್ವನಿಯ ಮೂಲಕ ಯುವತಿಯರನ್ನು “ಬಲವಾಗಿ ನಿಲ್ಲುವಂತೆ, ಧೈರ್ಯದಿಂದ ಮುನ್ನುಗ್ಗುವಂತೆ” ಪ್ರೋತ್ಸಾಹಿಸುತ್ತಿದ್ದರು. ಆದರೆ, ಈಗ ಅವರು ವಿಭಿನ್ನ ಸಂದೇಶವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

“ಇಂದು ನಾನು ಅವರನ್ನು ಕರೆದು ಹೇಳುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಹೆಸರುಗಳನ್ನು ತೆಗೆಯಿರಿ, ನಿಮ್ಮ ಗುರುತುಗಳನ್ನು ತೆಗೆದುಹಾಕಿ, ನಿಮ್ಮ ಸುರಕ್ಷತೆಗಾಗಿ ನಿಮ್ಮ ಫೋಟೋಗಳನ್ನು ಡಿಲೀಟ್‌ ಮಾಡಿ. ನಿಮ್ಮ ತಂಡದ ಸಮವಸ್ತ್ರವನ್ನು ಸುಟ್ಟುಹಾಕುವಂತೆ ಹೇಳುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  ತಾಲಿಬಾನ್ ಭಯೋತ್ಪಾದನೆ: ಲೈಂಗಿಕ ಗುಲಾಮಗಿರಿಯ ಅಪಾಯದಲ್ಲಿ ಆಫ್ಘಾನ್ ಮಹಿಳೆಯರು?

“ಇದು ನನಗೆ ನೋವು ತಂದಿದೆ, ಒಬ್ಬ ಮಹಿಳಾ ರಾಷ್ಟ್ರೀಯ ತಂಡದ ಆಟಗಾರ್ತಿಯಾಗಿ ಆ ಗುರುತನ್ನು ಸಾಧಿಸಲು ಮತ್ತು ಗಳಿಸಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದೇವೆ. ಆದರೆ, ಈಗ ಅದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಎದೆಯ ಮೇಲೆ ಬ್ಯಾಡ್ಜ್ ಗಳಿಸಿದ್ದಕ್ಕಾಗಿ, ನಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಕ್ಕಾಗಿ ನಾವು ಎಷ್ಟು ಹೆಮ್ಮೆಪಡುತ್ತೇವೆ.”

ಇಸ್ಲಾಮಿಕ್ ಕಾನೂನಿನ ಆಧಾರದಲ್ಲಿ ತಾಲಿಬಾನ್‌ಗಳು 1996-2001ರ ಅವಧಿಯಲ್ಲಿ ಮಹಿಳೆಯರು ಉದ್ಯೋಗ ಪಡೆಯುವುದನ್ನು ನಿಷೇಧಿಸಿತ್ತು. ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಅವಕಾಶವಿರಲಿಲ್ಲ ಮತ್ತು ಮಹಿಳೆಯರು ಹೊರಗೆ ಹೋಗಲು ಬುರ್ಖಾ ಧರಿಸಬೇಕಿತ್ತು. ಅವರು ತಮ್ಮ ಪುರುಷ ಸಂಬಂಧಿ ಜೊತೆಗಿದ್ದಾಗ ಮಾತ್ರ ಹೊರಗೆ ಹೋಗಬೇಕಿತ್ತು. ನಿಯಮಗಳನ್ನು ಉಲ್ಲಂಘಿಸಿದವರಿಗೆ ಕಠೋರ ರೀತಿಯ ಶಿಕ್ಷೆಯನ್ನು ನೀಡಲಾಗುತ್ತಿತ್ತು.

ಇದೀಗ ಮತ್ತೆ ಅಫ್ಘಾನ್‌ ತಾಲಿಬಾನ್‌ಗಳ ವಶದಲ್ಲಿದೆ. ಆದರೂ, ಇಸ್ಲಾಮಿಕ್ ಕಾನೂನಿನ ಚೌಕಟ್ಟಿನೊಳಗೆ ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ತಾಲಿಬಾನ್ ಹೇಳಿದೆ. ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗ ಪಡೆಯಬಹುದು ಎಂದು ಹೇಳಿದೆ. ಆದರೂ, ಮಹಿಳೆಯರು ಅಪಾಯದ ಅಂಚಿನಲ್ಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರ ಪಟ್ಟಿ ಕೇಳಿದ ತಾಲಿಬಾನ್; ಮದುವೆಗೆ ಒತ್ತಾಯ!

ಮಹಿಳಾ ಫುಲ್‌ಬಾಲ್‌ ತಂಡ ಮಹಿಲೆಯರ ಹಕ್ಕುಗಳಿಗಾಗಿ ಬಲವಾದ ನಿಲುವು ತೆಗೆದುಕೊಳ್ಳಲು ಮತ್ತು ಅವರನ್ನು ಮೌನವಾಗಿಸುವವರನ್ನು ಧಿಕ್ಕರಿಸಲು ಶಕ್ತವಾಗಿದೆ ಎಂದು ಖಾಲಿದಾ ಹೇಳಿದ್ದಾರೆ.

“ಈಗಿನ ಪರಿಸ್ಥಿತಿ ಕೇವಲ ಆಟಗಾರರು ಮಾತ್ರವಲ್ಲ, ಕಾರ್ಯಕರ್ತರು ಕೂಡ ಆತಂಕ ಮತ್ತು ಭಯದಲ್ಲಿದ್ದಾರೆ… ಅವರಿಗೆ ಹೋಗಲು, ರಕ್ಷಣೆ ಪಡೆಯಲು, ಅವರು ಅಪಾಯದಲ್ಲಿದ್ದರೆ ಸಹಾಯ ಕೇಳಲು ಯಾರೂ ಇಲ್ಲ” ಎಂದು ಅವರು ಹೇಳಿದರು.

“ಯಾವ ಸಮಯದಲ್ಲಾದರೂ ತಮ್ಮ ಮನೆಯ ಬಾಗಿಲು ಬಡಿಯಬಹುದೆಂದು ಅವರು ಹೆದರುತ್ತಾರೆ.

“ನಾವು ಅಫ್ಘಾನಿಸ್ತಾನ ಫುಟ್ಬಾಲ್ ಫೆಡರೇಶನ್ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಂಪರ್ಕದಲ್ಲಿದ್ದೇವೆ. ಸ್ಥಳೀಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ. ಮಹಿಳೆಯರಿಗೆ ಮತ್ತು ಹೋರಾಟಗಾರರಿಗೆ ನಮ್ಮ ಬೆಂಬಲವನ್ನು ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಫ್ಘನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಇಲ್ಲ ಎಂದು ತಾಲಿಬಾನ್ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights