ಮಗುವಿನ ಚಿಕಿತ್ಸೆಗಾಗಿ ಒಲಿಂಪಿಕ್ಸ್‌ ಪದಕ ಹರಾಜಿಗಿಟ್ಟ ಕ್ರೀಡಾಪಟು; ಪದಕ ಖರೀದಿಸಿ ಮರಳಿ ಕೊಟ್ಟ ಕಂಪನಿ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಪೋಲೆಂಡ್‌ ಜಾವೆಲಿನ್ ಎಸೆತಗಾರ್ತಿ ಮಗುವೊಂದರ ಚಿಕಿತ್ಸೆಗಾಗಿ ತನ್ನ ಪದಕವನ್ನು 1,25,000 ಡಾಲರ್‌ಗೆ ಹರಾಜು ಹಾಕಿದ್ದಾರೆ. ತನ್ನ ದೇಶದಲ್ಲಿರುವ 08 ಮಗುವೊಂದಕ್ಕೆ ಅಮೆರಿಕದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುವುದಕ್ಕಾಗಿ ತನ್ನ ಪದಕವನ್ನು ಹರಾಜು ಹಾಕಿದ್ದಾರೆ. ಅವರ ಪದಕವನ್ನು ಒಂದು ಕಂಪನಿ ಖರೀದಿಸಿದ್ದು, ನಂತರ ಅದನ್ನು ಅವರಿಗೇ ಮರಳಿ ನೀಡಿದೆ ಎಂದು ತಿಳಿದು ಬಂದಿದೆ.

ಒಲಿಂಪಿಕ್ಸ್‌ನಲ್ಲಿ ಜಾವೆಲಿನ್‌ ಎಸೆತದಲ್ಲಿ ಎರಡನೇ ಸ್ಥಾನ ಪಡೆದ ಮರಿಯಾ ಆಂಡ್ರೆಜಿಕ್, ತನ್ನ ತವರಿಗೆ ಮರಳಿದ ಐದು ದಿನಗಳ ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದರು. ಅದರಲ್ಲಿ, ಅಮೆರಿಕಾದ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಮೆಡಿಕಲ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಪಡೆಯಲು ಕ್ಯಾಲಿಫೋರ್ನಿಯಾಗೆ ತೆರಳಬೇಕಿದ್ದ 8 ತಿಂಗಳ ಮಿಲೋಝೋಕ್ ಮಾಲಿಸಾ ಎಂಬ ಮಗುವಿಗಾಗಿ ಹಣ ಸಂಗ್ರಹಿಸಲು ತನ್ನ ಪದಕವನ್ನು ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಘೋಷಿಸಿದ್ದರು.

“ಮಿಲೋಝೋಕ್‌ಗೆ ಗಂಭೀರವಾದ ಹೃದಯ ದೋಷವಿದೆ, ಆತನಿಗೆ ಆಪರೇಷನ್ ಅಗತ್ಯವಿದೆ. ಆತನಿಗೆ ನಾನು ಈ ರೀತಿ ಸಹಾಯ ಮಾಡಲು ಬಯಸುತ್ತೇನೆ. ಅವರಿಗಾಗಿ ನಾನು ನನ್ನ ಒಲಿಂಪಿಕ್ ಬೆಳ್ಳಿ ಪದಕವನ್ನು ಹರಾಜು ಹಾಕುತ್ತಿದ್ದೇನೆ” ಎಂದು ಆಂಡ್ರೆಜ್ಜಿಕ್ ಪೋಲಿಷ್‌ ಭಾಷೆಯಲ್ಲಿ ಬರೆದಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಪೋಲೆಂಡ್‌ನ ಸೂಪರ್‌ಮಾರ್ಕೆಟ್ ಕಂಪನಿ ‘ಜಬ್ಕಾ’ 1.4 ಕೋಟಿ ರೂ. ನೀಡಿ ಈ ಪದಕವನ್ನು ಖರೀದಿಸಿದೆ. ಅಲ್ಲದೆ, ಆ ಪದಕವನ್ನು ಮರಿಯಾ ಆಂಡ್ರೆಜಿಕ್ ಅವರಿಗೆ ಮರಳಿ ನೀಡಿದೆ. ಮಗುವಿನ ಶಸಚಿಕಿತ್ಸೆಗೆ ಬೇಕಾದ ಉಳಿದ ಮೊತ್ತವನ್ನು ದೇಣಿಗೆ ಸಂಗ್ರಹದ ಮೂಲಕ ಕಲೆಹಾಕಲಾಗಿದೆ.

ಯಾಹೂ ಸ್ಪೋರ್ಟ್ಸ್ ಪ್ರಕಾರ, 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದ ಮರಿಯಾ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಅವರು 2017ರಲ್ಲಿ ಭುಜದ ಶಸಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ, 2018ರಲ್ಲಿ ಎಲುಬಿನ ಕ್ಯಾನ್ಸರ್‌ಗೂ ಚಿಕಿತ್ಸೆ ಪಡೆದುಕೊಂಡಿದ್ದರು. ಎಲ್ಲಾ ಸವಾಲುಗಳನ್ನು ಎದುರಿಸಿ ಬಂದು ಮರಿಯಾ ಟೋಕಿಯೊದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌: ರಿಲೇಯಲ್ಲಿ ಕಂಚು ಗೆದ್ದ ಭಾರತ ತಂಡ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights