ಜಮ್ಮು – ಕಾಶ್ಮೀರ: ಅಪ್ನಿ ಪಕ್ಷದ ಮುಖಂಡ ಸೇರಿ 11 ದಿನಗಳಲ್ಲಿ 4 ರಾಜಕರಣಿಗಳ ಹತ್ಯೆ!
ಜಮ್ಮು ಮತ್ತು ಕಾಶ್ಮೀರದ ಪ್ರದೇಶಿಕ ಪಕ್ಷ ಅಪ್ನಿ ಪಾರ್ಟಿಯ ಹಿರಿಯ ಮುಖಂಡರೊಬ್ಬರನ್ನು ಶಂಕಿತ ಉಗ್ರಗಾಮಿಗಳು ಗುರುವಾರ ಹತ್ಯೆ ಮಾಡಿದ್ದಾರೆ. ಕಳೆದ 11 ದಿನಗಳಲ್ಲಿ ನಾಲ್ಕು ರಾಜಕಾರಣಿಗಳನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಕುಲ್‌ಗಾಮ್‌ನ ದೇವಸಾರ್ ಎಂಬಲ್ಲಿ ಅಪ್ನಿ ಪಾರ್ಟಿಯ ಮುಖಂಡ ಗುಲಾಮ್ ಹಸನ್ ಲೋನ್ ಅವರನ್ನು ಅವರ ಮನೆ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಇದಕ್ಕೂ ಮುನ್ನ ಕಳೆದ ಮಂಗಳವಾರ ಕುಲಗಾಮ್‌ನ ಬಿಜೆಪಿ ಕ್ಷೇತ್ರ ಉಸ್ತುವಾರಿ ಜಾವೇದ್ ದರ್ ಅವರನ್ನು ಹತ್ಯೆ ಮಾಡಲಾಗಿತ್ತು. ಆಗಸ್ಟ್ 9ರಂದು ಅನಂತನಾಗ್ ಜಿಲ್ಲೆಯ ಬಿಜೆಪಿ ಸರಪಂಚ ಗುಲಾಂ ರಸೂಲ್ ದಾರ್ ಮತ್ತು ಅವರ ಪತ್ನಿ ಹಾಗೂ ಪಂಚಾಯ್ತಿ ಸದಸ್ಯೆ ಜವಾಹಿರಾ ಬೇಗಂ ಅವರನ್ನು ಲಷ್ಕರ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ನೂರಾಬಾದ್ ಕ್ಷೇತ್ರ ಬಿಜೆಪಿ ಉಸ್ತುವಾರಿ ಮುಬಾರಕ್ ಅಹ್ಮದ್ ಭಟ್ ಅವರು ತಮ್ಮ ಹುದ್ದೆಗೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
“ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಕೆಲಸಗಳಿಂದ ಬೇಸರವಾಗಿದ್ದರೆ, ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನನಗೆ ಚಿಕ್ಕ ಮಕ್ಕಳಿದ್ದಾರೆ. ಯಾವುದೇ ಪಕ್ಷದ ಬಗ್ಗೆ ಅದರಲ್ಲೂ ಮುಖ್ಯವಾಗಿ ಬಿಜೆಪಿ ಬಗ್ಗೆ ನನಗೆ ಯಾವುದೇ ಕಳಕಳಿ ಅಥವಾ ಸಂಬಂಧ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಣಿವೆ ಪ್ರದೇಶದಲ್ಲಿ ರಾಜಕೀಯ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಾಜೀನಾಮೆ ನೀಡಲಾಗಿದೆ ಎಂದು ಇತರ ಪಕ್ಷಗಳು ಹೇಳಿವೆ.
Read Also: ‘ಫೋಟೋಗಳನ್ನು ಅಳಿಸಿ, ಸಮವಸ್ತ್ರವನ್ನು ಸುಟ್ಟುಹಾಕಿ’: ಆಟಗಾರ್ತಿಯರಿಗೆ ಅಫ್ಘಾನ್ ಫುಟ್‌ಬಾಲ್ ತಂಡದ ಮಾಜಿ ನಾಯಕಿ!

