ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ; ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ!

ಮಧ್ಯಪ್ರದೇಶದ ಕೋಮು ಸೂಕ್ಷ್ಮ ಪ್ರದೇಶಗಳಾದ ಉಜ್ಜಯಿನಿ ಮತ್ತು ರೇವಾ ಜಿಲ್ಲೆಗಳಲ್ಲಿ ಮತ್ತೆ ಕೋಮು ಹಿಂಸಾಚಾರ ಪ್ರಕರಣಗಳ ವರದಿಯಾಗುತ್ತಿವೆ. ಈ ಎರಡೂ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿವೆ.

ಉಜ್ಜಯಿನಿಯಲ್ಲಿ ಅಬ್ದುಲ್ ರಶೀದ್ ಎಂಬ ಒಬ್ಬ ಸ್ಕ್ರ್ಯಾಪ್ ಡೀಲರ್ ಮೇಲೆ ಇಬ್ಬರು ಸ್ಥಳೀಯ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ, ಥಳಿಸಿದ್ದಾರೆ.

ರೇವಾ ಜಿಲ್ಲೆಯಲ್ಲಿ, ಬಸ್ಸಿನಿಂದ ಬ್ಯಾಟರಿಗಳನ್ನು ಕದ್ದಿದ್ದಾನೆ ಎಂಬ ಅನುಮಾನದ ಮೇಲೆ ವರ್ಣಚಿತ್ರಕಾರ ಮೊಹಮದ್ ಅಸದ್ ಮೇಲೆ ನಾಲ್ಕೈದು ಜನರು ನಿರ್ದಯವಾಗಿ ಥಳಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ತಲಾ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಉಜ್ಜಯನಿಯ ಸೆಕ್ಲಿ ಗ್ರಾಮದಲ್ಲಿ, ಮಧ್ಯ ವಯಸ್ಸಿನ ಸ್ಕ್ರ್ಯಾಪ್ ಡೀಲರ್ ಅನ್ನು ಓಬಿಸಿ ವರ್ಗಕ್ಕೆ ಸೇರಿದ ಇಬ್ಬರು ಯುವಕರು ತಡೆದಿದ್ದಾರೆ. ತಮ್ಮ ಗ್ರಾಮದಲ್ಲಿ ವ್ಯಾಪಾರ ಮಾಡಬೇಡಬಾದರು ಎಂದು ಬೆದರಿಕೆ ಹಾಕಿದ್ದಾರಲ್ಲದೆ, ಜೈ ಶ್ರೀರಾಮ್‌ ಘೋಷಣೆ ಕೂಗುವಂತೆ ಒತ್ತಾಯಿಸಿ ಥಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ಹಣ ದೋಚಿ ಪರಾರಿಯಾದ ಆರೋಪಿಗಳು!

ಘಟನೆಗೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ದ ಐಪಿಸಿ ಸೆಕ್ಷನ್‌ 153-ಎ ಮತ್ತು 505 (2) ಸೇರಿದಂತೆ ಆರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಜ್ಜಯನಿ ಗ್ರಾಮಾಂತರ ಪೊಲೀಸ್‌ ಠಾಣೆಯ ಎಎಸ್ಪಿ ಆಕಾಶ್ ಭೂರಿಯಾ ತಿಳಿಸಿದ್ದಾರೆ.

“ಇಬ್ಬರೂ ಒಂದು ದಿನದ ಪೊಲೀಸ್ ರಿಮಾಂಡ್‌ನಲ್ಲಿದ್ದಾರೆ” ಎಂದು ಭೂರಿಯಾ ಹೇಳಿದ್ದಾರೆ.

ರೇವಾ ಜಿಲ್ಲೆಯಲ್ಲಿ (ಇದು ಪೂರ್ವ ಯುಪಿಗೆ ಸಮೀಪದಲ್ಲಿದೆ), ಮೆಟಲ್ ಪೇಂಟರ್ ಮೊಹಮದ್ ಅಸದ್ ಅವರನ್ನು ಖಾಸಗಿ ಬಸ್ ಮಾಲೀಕ ನೀಲಕಂಠ ಮತ್ತು ಸಹಾಯಕರಾದ ಡ್ಯಾನಿಶ್, ಅನುಜ್ ಮತ್ತು ಕುಲ್ದಿಪ್ ಎಂಬುವವರು ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಾರೆ.

ಅಸದ್‌ ಬಸ್‌ಗಳಿಂದ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಎಂದು ದೂಷಿಸಿರುವ ಆರೋಪಿಗಳ, ಅಸದ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.

ಘಟನೆಯ ವೀಡಿಯೋ ವೈರಲ್ ಆಗಿದ್ದು, ಆರೋಪಿಗಳು ಅಸದ್ ನನ್ನು ಚರ್ಮದ ಬೆಲ್ಟ್ ನಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ಅವರಲ್ಲಿ ಒಬ್ಬರು ಅಸದ್ ಅವರ ಎದೆಯ ಮೇಲೆ ನಿಂತಿರುವುದನ್ನೂ ಕಾಣಬಹುದು.

ಐಪಿಸಿ ಸೆಕ್ಷನ್ 307, 342 ಮತ್ತು 34 ರ ಅಡಿಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ ಮತ್ತು ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಪಟ್ಟ ಕಟ್ಟಿದ ನ್ಯೂಸ್‌ 18 ಮತ್ತು ಜೀ ನ್ಯೂಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.