ಮುಸ್ಲಿಂ ಬಳೆ ವ್ಯಾಪಾರಿ ಮೇಲೆ ಗುಂಪು ಹಲ್ಲೆ; ‘ಬಳೆ ಜಿಹಾದ್’ ಪಟ್ಟ ಕಟ್ಟಿದ ನ್ಯೂಸ್‌ 18 ಮತ್ತು ಜೀ ನ್ಯೂಸ್‌!

ಬಳೆ ಮಾರಾಟ ಮಾಡುತ್ತಿದ್ದ ಮುಸ್ಲಿಂ ಬಳೆ ವ್ಯಾಪಾರಿಯೊಬ್ಬನನ್ನು ಕಿಡಿಗೇಡಿಗಳ ಗುಂಪೊಂದು  ಸಾರ್ವಜನಿಕರ ಎದುರೇ ಕ್ರೂರವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಭಾನುವಾರ ನಡೆದಿದೆ. ಮಾತ್ರವಲ್ಲದೆ, ಹಲ್ಲೆಕೋರರು ವ್ಯಾಪಾರಿಯ ಬಳಿಯಿದ್ದ 10,000 ರೂಗಳನ್ನು ಕಸಿದುಕೊಂಡು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೂವರೆಗೂ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌‌ ಮಿಶ್ರಾ ಅವರು ಯುವಕ ತನ್ನ ಬಳಿ ಎರಡು ಆಧಾರ್‌ ಕಾರ್ಡ್‌ಗಳನ್ನು ಹೊಂದಿದ್ದು, ಹಿಂದೂ ಹೆಸರನ್ನು ಬಳಸಿಕೊಂಡಿದ್ದಾರೆ. ಅಲ್ಲಿಂದ ವಿವಾದ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಬಿಜೆಪಿಯ ಕೆಲವು ನಾಯಕರು ಪ್ರಕರಣವನ್ನು ಲವ್ ಜಿಹಾದ್ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಘಟನೆಯನ್ನು ಕೋಮು ಪ್ರಚೋದನೆಗೂ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ICC world cup: ಸೋಲುಂಡ ಭಾರತ ತಂಡವನ್ನು ‘ದಂಡುಪಾಳ್ಯದ ದಂಡಪಿಂಡಗಳು’ ಎಂದ ದಿಗ್ವಿಜಯ ನ್ಯೂಸ್‌? ಭಾರೀ ಆಕ್ರೋಶ

ಅದಾಗ್ಯೂ, ನ್ಯೂಸ್18 ಎಂಪಿ ಛತ್ತೀಸ್‌ಗಡ್‌ ಮತ್ತು ಝೀ ಹಿಂದೂಸ್ತಾನ್ ಪ್ರಕರಣವನ್ನು ತಿರುಚಿ, ಕೋಮು ಪ್ರಚೋದನೆಗೆ ಬಳಸಿಕೊಂಡಿದೆ. ಪ್ರಕರಣವನ್ನು ಬಳಸಿಕೊಂಡು, “ಬಳೆ ಜಿಹಾ‌ದ್‌” ನಡೆಯುತ್ತಿದೆ ಎಂದು ಪ್ರತಿಪಾದಿಸಿ, ಪ್ರಕರಣವನ್ನು ಕಾಲ್ಪನಿಕ “ಲವ್ ಜಿಹಾದ್‌”ಗೆ ತಗಲು ಹಾಕಿವೆ.

ಪ್ರಕರಣದ ಕುರಿತು ಝೀ ಹಿಂದೂಸ್ತಾನ್‌ ಮಾಡಿರುವ ವಿಶೇಷ ವರದಿಗೆ, “ಹಿಂದೂಸ್ತಾನದಲ್ಲಿ ಹಿಂದೂಗಳ ಮೇಲೆ ಬಳೆ ಜಿಹಾದ್?” ಎಂಬ ಹೆಸರನ್ನು ನೀಡಿದೆ. ಈ ಕಾರ್ಯಕ್ರಮದ ಪ್ರೊಮೋವನ್ನು ಝೀ ಹಿಂದೂಸ್ತಾನ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಅದರಲ್ಲಿ, “ಇಂದೂರ್‌ನ ತಸ್ಲೀಂ, ತುಷಾರ್‌ ಯಾಕೆ ಆದ? ಸೇಡಿನ ಹೆಸರು, ಸೇಡಿನ ಕೆಲಸ, ಹಿಂದೂಗಳ ಮೇಲೆ ಪಿತೂರಿ? ಬಳೆಗಾರ ಆಗಿ ಸನಾತನದ ಮೇಲೆ ಮೋಸ? ಹಿಂದೂಸ್ತಾನದಲ್ಲಿ ಹಿಂದೂಗಳ ಮೇಲೆ ‘ಬಳೆ ಜಿಹಾದ್’?” ಎಂದು ಪ್ರಶ್ನೆಗಳನ್ನು ಹಾಕಿ ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ:ವಿಡಿಯೋ ನೋಡಿ: ತಬ್ಲಿಘಿಗಳ ವಿರುದ್ದ ಸುಳ್ಳು ಪ್ರಸಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ನ್ಯೂಸ್‌ 18 ಕನ್ನಡ!

ಝೀ ಹಿಂದೂಸ್ತಾನ್‌ ರೀತಿಯಲ್ಲೇ, ನ್ಯೂಸ್ 18 ಕೂಡ ಅಂತಹದ್ದೇ ವಿಶೇಷ ವರದಿಯನ್ನು ಮಾಡಿದೆ. ಅದು ತನ್ನ ವಿಶೇಷ ವರದಿಗೆ “ಬಳೆ ನೆಪ, ಲವ್ ಜಿಹಾದ್‌ ಗುರಿ!” ಎಂದು ಹೆಸರು ನೀಡಿದೆ.

ಅಲ್ಲದೆ ಪ್ರೋಮೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು. ಅದರಲ್ಲಿ, “ಬಳೆ ನೆಪ, ಲವ್ ಜಿಹಾದ್‌ ಗುರಿ! ಬಳೆಗಾರನ ಮೇಲೆ ಹಲ್ಲೆಯಾದ ನಂತರ ಗಲಾಟೆ! ಬಳೆಗಾರನ ‘ಧರ್ಮ’ ಯಾವುದು? ಲವ್‌ ಜಿಹಾದ್‌ಗಾಗಿ ಹೆಸರು ಬದಲಾವಣೆ?” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ:ತಬ್ಲೀಘಿ ವಿರುದ್ದ ದ್ವೇಷದ ಸುದ್ದಿ ಪ್ರಸಾರ; ಸುವರ್ಣ ನ್ಯೂಸ್‌ ಮತ್ತು ನ್ಯೂಸ್‌ 18 ಕನ್ನಡ ಚಾನೆಲ್‌ಗಳಿಗೆ 1.5 ಲಕ್ಷ ದಂಡ!

ಆದರೆ ಪೊಲೀಸರು ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೋಮು ಪ್ರಚೋದಕ ಹೇಳಿಕೆಗಳ ಬಗ್ಗೆ ಈ ಹಿಂದೆಯೆ ಎಚ್ಚರಿಕೆ ನೀಡಿದ್ದಾರೆ.

“ನಾವು ದೂರುದಾರರ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಮತ್ತು ತನಿಖೆ ಮಾಡುತ್ತಿದ್ದೇವೆ. ಆದರೆ ಸಾಮಾಜಿಕ ಜಾಲತಾಣದ ಕೋಮು ಪ್ರಚೋದಕ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ನಾವು ಮನವಿ ಮಾಡಿದ್ದೇವೆ. ಸಾಮಾಜಿಕ ಜಾಲತಾಣದ ಅಂತಹ ಪೋಸ್ಟ್‌ಗಳ ಮೇಲೆ ನಾವು ನಿಗಾ ಇಟ್ಟಿದ್ದೇವೆ. ವಿಡಿಯೋದಲ್ಲಿನ ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಇಂದೋರ್ ಪೂರ್ವ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಅಶುತೋಷ್ ಬಾಗ್ರಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು.

ಪೊಲೀಸರ ಎಚ್ಚರಿಕೆಯ ಹೊರತಾಗಿಯು ಎರಡು ಹಿಂದಿ ಚಾನೆಲ್‌ಗಳು ಪ್ರಕರಣವನ್ನು ಕಾಲ್ಪನಿಕ ಲವ್‌ಜಿಹಾದ್‌ಗೆ ತಗಲು ಹಾಕಿ ದ್ವೇಷವನ್ನು ಬಿತ್ತುತ್ತಿದೆ. ಇದರ ವಿರುದ್ದ ಸಾಮಾಜಿಕ ಜಾತಲಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಇಂದಿನ ಪತ್ರಿಕೋದ್ಯಮದ ‘ಮಟ್ಟ’ !!! ರಾಷ್ಟ್ರೀಯ ಚಾನೆಲ್ ಮೂಲಕ ದ್ವೇಷ ಮತ್ತು ಭಯೋತ್ಪಾದನೆಯನ್ನು ಬಹಿರಂಗವಾಗಿ ಪ್ರಚೋದಿಸಲಾಗುತ್ತಿದೆ! ಅದ್ಭುತವಾಗಿದೆ! ಈಗ ನಾಶವು ತುಂಬಾ ದೂರವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತ ವಿರೋಧಿ ಧೋರಣೆ ತಳೆದ ಸುವರ್ಣ ನ್ಯೂಸ್‌; ರೈತ ಹೋರಾಟದ ಬಗ್ಗೆ ಜನರ ದಿಕ್ಕು ತಪ್ಪಿಸಿದ್ದು ಹೀಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights