ರೈತ ವಿರೋಧಿ ಧೋರಣೆ ತಳೆದ ಸುವರ್ಣ ನ್ಯೂಸ್‌; ರೈತ ಹೋರಾಟದ ಬಗ್ಗೆ ಜನರ ದಿಕ್ಕು ತಪ್ಪಿಸಿದ್ದು ಹೀಗೆ!

ದೆಹಲಿ ಗಡಿಯಲ್ಲಿ ರೈತರ ಹೋರಾಟ ಆರಂಭವಾದಾಗಿನಿಂದ ಗೋದಿ ಮೀಡಿಯಾಗಳು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಸುದ್ದಿ ಚಾನೆಲ್‌ಗಳು ರೈತ ವಿರೋಧಿ ಧೋರಣೆಯೊಂದಿಗೆ ಸುದ್ದಿ ಮಾಡುತ್ತಲೇ ಇವೆ. ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಎಂದು ರಾಷ್ಟ್ರೀಯ ಮಾಧ್ಯಮಗಳು ಬೊಬ್ಬೆಹೊಡೆಯುತ್ತಿವೆ. ಅವುಗಳಿಗೆ ನಾವೆನೂ ಕಮ್ಮಿ  ಎಂಬಂತೆ ಕನ್ನಡದ ಸುವರ್ಣ ನ್ಯೂಸ್‌ ಕೂಡ ರೈತ ವಿರೋಧಿ ಸುದ್ದಿ ಮಾಡಲು ಮುಂದಾಗಿದೆ.

ಗಣರಾಜ್ಯೋತ್ಸವದ ದಿನ ಸುದ್ದಿ ಮಾಡಿದ್ದ ಸುವರ್ಣ ನ್ಯೂಸ್‌, ಕೆಲವು ಆಯ್ದ ವಿಡಿಯೋ ಕ್ಲಿಪ್‌ಗಳನ್ನು ಹಾಕಿಕೊಂಡು, ಗಣರಾಜ್ಯೋತ್ಸವದ ದಿನ ಕೆಂಪುಕೋಟೆಗೆ ನುಗ್ಗಿದ ಒಂದು ರೈತರ ಗುಂಪು, ಭಾರತದ ತಿರಂಗ ಧ್ವಜವನ್ನು ಇಳಿಸಿ, ಖಲಿಸ್ತಾನಿಗಳ ಧ್ವಜವನ್ನು ಹಾರಿಸಿದ್ದಾರೆ. ಇದಕ್ಕೆ ಐದು ತಿಂಗಳ ಹಿಂದೆಯೇ ಸಂಚು ನಡೆದಿತ್ತು. ಭಾರತದ ಧ್ವಜಕ್ಕೆ ರೈತರು ಅಪಮಾನ ಮಾಡಿದ್ದಾರೆ. ಇವರು ರೈತರಲ್ಲ ಖಲಿಸ್ಥಾನಿಗಳು, ಭಯೋತ್ಪಾದಕರು. ಕೆಂಪುಕೋಟೆಯಲ್ಲಿ ಖನಿಸ್ತಾನಿ ಧ್ವಜ ಹಾರಿಸಲು 2 ಕೋಟಿ ಖರ್ಚು ಮಾಡಿ ಸಂಚು ರೂಪಿಸಿದ್ದಾರೆ? ಎಂದೆಲ್ಲಾ ಸುವರ್ಣ ನ್ಯೂಸ್ ಸುದ್ದಿ ಮಾಡಿತ್ತು.

ಅದಾದ ನಂತರ, ಅದೇ ಸುವರ್ಣ ಚಾನೆಲ್‌ನ ವೆಬ್‌ಸೈಟ್‌ನಲ್ಲಿ ಕೆಂಪುಕೋಟೆಯಲ್ಲಿ ಹಾರಾಡಿದ್ದು, ಖಲಿಸ್ತಾನಿ ಧ್ವಜವಲ್ಲ, ಸಿಖ್‌ ಧ್ವಜ. ಆ ಬಾವುಟ ಭಾರತೀಯ ಸೇನೆಯಲ್ಲಿಯೂ ಇದೆ ಎಂದು ಚಿಕ್ಕ ಸುದ್ದಿ ಮಾಡಿ ಅಪ್‌ಲೋಡ್‌ ಮಾಡಿದೆ.

ಅಲ್ಲದೆ, ಸುವರ್ಣ ನ್ಯೂಸ್‌ನ ನಿರೂಪಕ ಅಜಿತ್‌ ಹನುಮಕ್ಕನವರ್, ಕೆಂಪುಕೋಟೆಯ ಒಂದು ಭಾಗವನ್ನಷ್ಟೇ ತೋರಿಸಿ, ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದಾರೆ. ಗಣರಾಜ್ಯೋತ್ಸವದ ಹೆಮ್ಮೆಯನ್ನು ಮಣ್ಣು ಪಾಲುಮಾಡಿದ್ದಾರೆ. ಇದಕ್ಕೆ ರೈತರನ್ನು ಬೆಂಬಲಿಸುವ ಪ್ರತಿಯೊಬ್ಬರೂ ಉತ್ತರಿಸಬೇಕು ಎಂದೆಲ್ಲಾ ಕೂಗಾಡಿದ್ದಾರೆ.

ಆದರೆ, ಇಡೀ ದೇಶವೇ ಕಂಡಿತ್ತು. ಕೆಂಪುಕೋಟೆಯಲ್ಲಿ ತಿರಂಗ ಧ್ವಜವನ್ನು ಯಾರೂ ಕೆಳಗಿಳಿಸಿಲ್ಲ. ಅದು ಕೆಂಪುಕೋಟೆಯಲ್ಲಿ ಎತ್ತರ ಜಾಗದಲ್ಲಿ ಹಾರುತ್ತಿದೆ. ಅದರ ಕೆಳಗೆ ಸಿಖ್‌ ಮತ್ತು ರೈತರ ಧ್ವಜಗಳನ್ನು ಹಾರಿಸಲಾಗಿದೆ ಎಂಬುದು. ತಿರಂಗ ಧ್ವಜದ ಕೆಳಗೆ ಹಾರುತ್ತಿದ್ದ ಆ ಎರಡೂ ಬಾವುಟಗಳು ‘ತಾಯಿಯ ಮುಂದೆ ಎರಡು ಮಕ್ಕಳು ತಮ್ಮ ಅಳಲನ್ನು ಹೇಳಿಕೊಳ್ಳುತ್ತಿರುವಂತಿದೆ’ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ಅಲ್ಲದೆ, ಕೆಂಪುಕೋಟೆಗೆ ರೈತರ ಒಂದು ಗುಂಪು ನುಗ್ಗಲು ಮತ್ತು ಅಲ್ಲಿ ಬಾವುಟವನ್ನು ಹಾರಿಸಲು ಪ್ರಚೋದನೆ ನೀಡಿ, ಕರೆದೊಯ್ದದ್ದು ಬಿಜೆಪಿ ಬೆಂಬಲಿಗ, ನಟ ದೀಪ್‌ ಸಿಧು ಎಂದು ಎಲ್ಲರಿಗೂ ತಿಳಿದಿದೆ. ಇದು ಪ್ರಭುತ್ವ ಮತ್ತು ಪೊಲೀಸರೇ ನಡೆಸಿರುವ ಹುನ್ನಾರ ಎಂದು ರೈತರೂ- ಭಾರತದ ಜನರೂ ಹೇಳಿದ್ದಾರೆ.

ಆದರೆ, ಇದೆಲ್ಲವೂ ತಿಳಿದಿದ್ದರೂ ಕೂಡ ಸುವರ್ಣ ನ್ಯೂಸ್‌ ತನ್ನ ರೈತ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸಿದ್ದು, ಕೆಂಪುಕೋಟೆಯ ಒಂದು ಚಿಕ್ಕ ಭಾಗದ ದೃಶ್ಯವನ್ನಷ್ಠೇ ಫೋಕಸ್‌ ಮಾಡಿ ಸುದ್ದಿ ಹರಿಬಿಟ್ಟಿದೆ.

ಅಲ್ಲದೆ, ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಲ್‌ಗಳನ್ನು ಕ್ರಿಯೇಟ್‌ ಮಾಡಿ, ರೈತ ಹೋರಾಟದ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಲು, ರೈತ ವಿರೋಧಿ ಅಭಿಪ್ರಾಯವನ್ನು ಸೃಷ್ಟಿಸಲು ಮುಂದಾಗಿತ್ತು. ಆದರೆ, ಈ ಪೋಲ್‌ಗಳಿಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಸುವರ್ಣ ಚಾನೆಲ್‌ ನಿರೀಕ್ಷಿಸಿದ್ದಕ್ಕೆ ವಿಭಿನ್ನವಾಗಿಯೂ – ವಿರೋಧವಾಗಿಯೂ ಉತ್ತರಿಸಿದ್ದಾರೆ.

ಒಂದು ಪೋಲ್‌ನಲ್ಲಿ ‘ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಹಾದಿ ತಪ್ಪಿದೆಯೇ’ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ 81% ಜನರು ಇಲ್ಲ ಎಂದು ಉತ್ತರಿಸಿದ್ದಾರೆ.

ಹಾಗೂ, ಕೆಂಪುಕೋಟೆಯ ಮೇಲೆ ಹಾರಿದ್ದು ಖಲಿಸ್ತಾನ್ ಪ್ರತ್ಯೇಕ ದೇಶ ಧ್ವಜವಾ..? ಎಂದು ಕೇಳಿದ್ದು, ಅದಕ್ಕೂ ಜನರು ಇಲ್ಲಾ ಎಂದೇ ಉತ್ತರಿಸಿದ್ದಾರೆ.

ಅಲ್ಲದೆ, ದೆಹಲಿಯ ಘಟನೆಗೆ ಮೋದಿ ಸರ್ಕಾರದ ವೈಫಲ್ಯ ಕಾರಣವೇ ಎಂದು ಪ್ರಶ್ನೆಗೆ ಹೌದು ಎಂದು ಬಹುಸಂಖ್ಯೆಯಲ್ಲಿ ಪ್ರತಿಕ್ರಿಸಿದ್ದು, ಸುವರ್ಣ ಚಾನೆಲ್‌ ನಿರೀಕ್ಷೆ ಹುಸಿಯಾಗಿದೆ.

ಈ ಹಿಂದೆ ರೈತರು ಬಾಯ್ಕಾಟ್‌ ಅಂಬಾನಿ-ಅದಾನಿ ಎಂದು ಕರೆಕೊಟ್ಟಾಗಲೂ ಸುವರ್ಣ ನ್ಯೂಸ್‌ ರೈತರ ವಿರುದ್ದ ಸುದ್ದಿ ಮಾಡಿತ್ತು. ಅದರ ವಿಶ್ಲೇಷಣೆ ಕಳಗಿದೆ.

ಇದನ್ನೂ ಓದಿ: ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights