ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಭಗವಾ ಧ್ವಜ ಹಾರಿಸಿದ ಎಂಇಎಸ್ ಪುಂಡರು!

ಬೆಳಗಾವಿ ಪಾಲಿಕೆ ಚುನಾವಣೆ ವೇಳೆ ಭಗವಾ ಧ್ವಜ ಹಾರಿಸಿ ಎಂಇಎಸ್ ಸದಸ್ಯರು ಪುಂಡಾಟ ಮೆರೆದಿದ್ದಾರೆ. ಮತದಾನ ಆರಂಭವಾದ ಬಳಿಕ ಭಗವಾ ಧ್ವಜ ಹಾರಿಸಿ ಚುನಾವಣೆ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ಬೆಳಗಾವಿ ಮಹಾನಗರದ ಚುನಾವಣೆ ವೇಳೆ ಎಲ್ಲೆಡೆ ಭಗವಾ ಧ್ವಜ ಹಾರಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕೂಡಲೆ ಎಂಇಎಸ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮಹಾನಗರ ಪಾಲಿಕೆ ಚುನಾವಣಾ ಮತದಾನ ಆರಂಭವಾಗಿದ್ದು, ಸರತಿ ಸಾಲಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.ಬೆಳಗ್ಗೆ 7 ಗಂಟೆಯಿಂದಲೇ 3 ಮಹಾನಗರ ಪಾಲಿಕೆಗಳಿಗೆ ಮತದಾನ ಆರಂಭವಾಗಿದ್ದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭವಾಗಿದೆ. ಕೊವಿಡ್ ಮಾರ್ಗಸೂಚಿ ಪಾಲಿಸಿ ಪಾಲಿಕೆಗಳ ಚುನಾವಣೆ ನಡೆಯುತ್ತಿದೆ. ಸೆಪ್ಟೆಂಬರ್ 6ರಂದು ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಬೆಳಗಾವಿ ಪಾಲಿಕೆಯ 58 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತಿದ್ದು, ಪಾಲಿಕೆ ಚುನಾವಣಾ ಕಣದಲ್ಲಿ 385 ಅಭ್ಯರ್ಥಿಗಳಿದ್ದಾರೆ. ಒಟ್ಟು 4,28,364 ಮತದಾರರಿದ್ದು, ಮತದಾನಕ್ಕಾಗಿ ಒಟ್ಟು 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 162 ಸೂಕ್ಷ್ಮ, 42 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಕರ್ತವ್ಯಕ್ಕೆ 1,828 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು 58 ವಾರ್ಡ್‌ಗಳ ಪೈಕಿ 55ರಲ್ಲಿ ಬಿಜೆಪಿ, 45ರಲ್ಲಿ ಕಾಂಗ್ರೆಸ್, 11 ವಾರ್ಡ್‌ಗಳಲ್ಲಿ ಜೆಡಿಎಸ್, 21ರಲ್ಲಿ ಎಂಇಎಸ್, 27 ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧೆ ನಡೆಸಿತ್ತಿದ್ದಾರೆ.

ಬಂಡಾಯ ಅಭ್ಯರ್ಥಿಗಳ ತಲೆನೋವಿನಿಂದ ಹಾಲಿ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕು ಎಂಬ ಧೋರಣೆಯಲ್ಲಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಮೂರೂ ಪಾಲಿಕೆಗಳಲ್ಲಿ ವ್ಯಕ್ತಿಗಳ ಬದಲಿಗೆ ಪಕ್ಷಗಳ ಚಿನ್ಹೆಗಳ ಮೂಲಕ ಚುನಾವಣೆ ಎದುರಿಸಲಾಗುತ್ತಿದ್ದು, ಈ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights