ಕಾಂಗ್ರೆಸ್‌ ತೊರೆಯುವ ವೇಳೆ ಬಿಜೆಪಿ ಹಣದ ಆಮಿಷವೊಡ್ಡಿತ್ತು: ಮಾಜಿ ಸಚಿವ ಶ್ರೀಮಂತ್ ಪಾಟೀಲ್

ಬಿಜೆಪಿಯ ಮಾಜಿ ಸಚಿವ ಮತ್ತು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರು 2019 ರಲ್ಲಿ ಕಾಂಗ್ರೆಸ್ ತೊರೆಯುವ ಸಮಯದಲ್ಲಿ ಬಿಜೆಪಿ ಹಣದ ಆಮಿಷವೊಡ್ಡಿತ್ತು ಎಂದು ಹೇಳಿದ್ದು, ಬಿಜೆಪಿಯನ್ನು ಮುಜುಗರಕ್ಕೆ ದೂಡಿದ್ದಾರೆ.

ನನಗೆ ಎಷ್ಟು ಹಣ ಬೇಕು ಎಂದು ಬಿಜೆಪಿ ನನ್ನನ್ನು ಕೇಳಿತ್ತು. ಆದರೆ ಜನರ ಸೇವೆ ಮಾಡಲು ನಾನು ಸರ್ಕಾರದಲ್ಲಿ ಉತ್ತಮ ಹುದ್ದೆಯನ್ನು ಕೇಳಿದ್ದೆ ಎಂದು ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ನಂತರ ಅವರು ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಿಂದ ಶ್ರೀಮಂತ್‌ ಪಾಟೀಲ್‌ ಹೊರಗುಳಿದಿದ್ದಾರೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟ ಬಂಡಾಯ ಶಾಸಕರಲ್ಲಿ ಅವರೂ ಒಬ್ಬರು.

“ಬಿಜೆಪಿ ಸೇರಿದ ನಂತರ, ನಾನು ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಬಯಸಿದ್ದೆ. ಅದಕ್ಕಾಗಿಯೇ ನಾನು ಒಂದು ದೊಡ್ಡ ಹುದ್ದೆಗೆ ಬೇಡಿಕೆ ಇಟ್ಟಿದ್ದೆ. ನಾಯಕರು ಒಪ್ಪಿ ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದರು. ಆದರೆ ಈ ಬಾರಿ, ನಾನು ಸಂಪುಟದಿಂದ ಹೊರಗುಳಿದಿದ್ದೇನೆ. ಆದಾಗ್ಯೂ, ಮುಂದಿನ ವಿಸ್ತರಣೆಯ ಸಮಯದಲ್ಲಿ ನನಗೆ ಕ್ಯಾಬಿನೆಟ್ ಸ್ಥಾನವನ್ನು ನೀಡಲಾಗುವುದು ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಯನ್ನು ನಡೆಸುತ್ತಿರುವ ಪಾಟೀಲ್, 1999 ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಸೇರಿದ್ದರು. 2004 ರಲ್ಲಿ ಕಾಗವಾಡದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗದಿದ್ದಾಗ, ಅವರು ಪಕ್ಷವನ್ನು ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರಿದ್ದರು. ಆದರೆ ಮುಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಅವರು ಸೋತರು.

2018ರ ಚುನಾವಣೆಗೆ ಮುನ್ನ, ಅವರು ತಮ್ಮ ಆಪ್ತ ರಮೇಶ್ ಜಾರಕಿಹೊಳಿ ಅವರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಅವರು ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ 2019ರಲ್ಲಿ, ರಮೇಶ್ ಮತ್ತು ಇತರ ಶಾಸಕರೊಂದಿಗೆ ಕಾಂಗ್ರೆಸ್ ತೊರೆದರು. ಅವರು 2021 ರಲ್ಲಿ ಕಾಗವಾಡ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಮತ್ತು ಗೋವಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸುತ್ತದೆ: ಸಂಜಯ್ ರಾವತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.