ಪಂಜಾಬ್ ಮುಖ್ಯಮಂತ್ರಿ ಬದಲಾವಣೆ; ಇಂದಿನ ಪ್ರಮುಖ 5 ಬೆಳವಣಿಗೆಗಳು!

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಅವರು ಕಳೆದ ಎರಡು ತಿಂಗಳಿನಿಂದ ಮೂರು ಬಾರಿ ಅವಮಾನಿತನಾಗಿದ್ದೆ ಎಂಬ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ನವಜ್ಯೋತ್‌ ಸಿಂಗ್ ಸಿಧು ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷವು ತಮಗೆ ನಂಬಿಕಸ್ಥರಾದ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ, ಆದರೆ ಅಸಮರ್ಥನಾದ ನವಜ್ಯೋತ್ ಸಿಂಗ್ ಸಿಧುವನ್ನು ಮುಖ್ಯಮಂತ್ರಿ ಮಾಡುವುದನ್ನು ಒಪ್ಪುವುದಿಲ್ಲ ಎಂದು ಗುಡುಗಿದ್ದರು. ಇಂದಿನ ಬೆಳವಣಿಗೆಯ 5 ಅಂಶಗಳು ಇಲ್ಲಿವೆ.

  • ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ಕಾಂಗ್ರೆಸ್ ನಾಯಕಿ, ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯೊಂದಿಗೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಅವರು ಸಿಖ್ ಅಲ್ಲದ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿಯಾಗುವುದು ಪಕ್ಷಕ್ಕೆ ಒಳ್ಳೆಯದು ಮಾಡುವುದಿಲ್ಲ ಎಂಬ ಕಾರಣದೊಂದಿಗೆ ಪ್ರಸ್ತಾಪ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
  • ಇನ್ನು ಸಿಎಂ ಸ್ಥಾನಕ್ಕೆ ಸದ್ಯಕ್ಕೆ ನಾಲ್ವರು ನಾಯಕರ ಹೆಸರುಗಳು ಚಾಲ್ತಿಯಲ್ಲಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಸುಖಜಿಂದರ್ ರಾಂಧವಾ ಜೊತೆಗೆ ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥರುಗಳಾದ ಸುನೀಲ್ ಜಖರ್ ಮತ್ತು ಪ್ರತಾಪ್ ಸಿಂಗ್ ಬಾಜ್ವಾರೊಂದಿಗೆ ಬಿಯಾಂತ್ ಸಿಂಗ್ ಅವರ ಮೊಮ್ಮಗ ರವಣೀತ್ ಸಿಂಗ್ ಬಿಟ್ಟು ಕೂಡ ಸ್ಪರ್ಧೆಯಲ್ಲಿದ್ದಾರೆ ಎನ್ನಲಾಗಿದೆ.
  • ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥರಾದ ಸುನೀಲ್ ಜಖರ್ ಹೆಸರೂ ಮುಂಚೂಣಿಯಲ್ಲಿದೆ. ಒಂದು ವೇಳೆ ಅವರು ಮುಖ್ಯಮಂತ್ರಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಿಖ್ ಅಲ್ಲದ ಮುಖ್ಯಮಂತ್ರಿಯಾಗಲಿದ್ದಾರೆ.
  • ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದ ಹಿತ ಕಾಪಾಡಲು ಮುಂದಾಗಿ ಎಂದು ಅಮರಿಂದರ್‌ ಸಿಂಗ್‌ರವರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಧೀರ್ಘ ಪತ್ರ ಬರೆದಿರುವ ಅವರು “ನಮ್ಮನ್ನು ಮೀರಿ ಮತ್ತು ಪಕ್ಷದ ಮತ್ತು ದೇಶದ ಹಿತಾಸಕ್ತಿಗಾಗಿ ಯೋಚಿಸುತ್ತೀರಿ ಎಂಬ ಭರವಸೆಯಿದೆ” ಎಂದಿದ್ದಾರೆ.
  • ಇಂದು ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅಲ್ಲಿ ಹೊಸ ಮುಖ್ಯಮಂತ್ರಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಒಟ್ಟು 117 ಜನರ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸದ್ಯಕ್ಕೆ 80 ಶಾಸಕರನ್ನು ಹೊಂದಿದೆ. ಮುಖ್ಯಮಂತ್ರಿಯೊಂದಿಗೆ ಇಬ್ಬರು ಉಪಮುಖ್ಯಮಂತ್ರಿಗಳಿರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Breaking News: ಪಂಜಾಬ್ ಸಿಎಂ ಅಮರೀಂದರ್‌ ಸಿಂಗ್‌ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.