ಆತ್ಮಹತ್ಯೆಗೆ ಶರಣಾದ ನಟಿ ಸೌಜನ್ಯ : ಡೆತ್ ನೋಟ್ ನಲ್ಲಿ ಬರೆದಿದ್ದೇನು?

ಸ್ಯಾಂಡಲ್ ವುಡ್ ನಟಿ ಸೌಜನ್ಯ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ಲಭ್ಯವಾಗಿದ್ದು ಅದರಲ್ಲಿ ಹಲವಾರು ವಿಚಾರಗಳನ್ನು ಬರೆದಿದ್ದಾರೆ.

ಬೆಂಗಳೂರಿನ ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ಥ್ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಕೆಲ ಸಮಯಗಳಿಂದ ತಮ್ಮ ಬಾಯ್ ಫ್ರೆಂಡ್ ಜೊತೆ ಅಪಾರ್ಟ್ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಸ್ನೇಹಿತನಿಗೆ ತಿಂಡಿ ತೆಗೆದುಕೊಂಡು ಬಾ ಎಂದು ಹೇಳಿ ಕಳುಹಿಸಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಆತ್ಮಹತ್ಯೆಗೂ ಮುನ್ನ ಮೂರು ನಾಲ್ಕು ದಿನದಿಂದ 5 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸೆಪ್ಟಂಬರ್ 27,28,29 ಮೂರು ದಿನ ನಟಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಇದರಲ್ಲಿ ತಂದೆ-ತಾಯಿಗೆ ಹಾಗೂ ಸ್ನೇಹಿತರಿಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಇತ್ತಿಚಿಗೆ ನಾನು ನನ್ನೊಳಗೆ ಸತ್ತು ಹೋಗಿದ್ದೇನೆ. ನಾನೆಂದು ಮೂರ್ಖಳಾಗಿ ಜೀವನ ಮಾಡಿಲ್ಲ. ಜೀವನ ನನಗೆ ಹಲವಾರು ಪಾಠ ಕಲಿಸಿದೆ. ಆದರೆ ನನಗೆ ಈ ಜೀವನ ಬೇಡ. ಯಾರಿಂದ ಯಾವುದನ್ನೂ ನಿರೀಕ್ಷಿಸಬೇಡಿ. ಮಧು ಅಪ್ಪ-ಅಮ್ಮ ಚೆನ್ನಾಗಿ ನೋಡಿಕೋ. ಸ್ನೇಹಿತರೇ, ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಬಿಡಿ. ನನಗೆ ನಿಮ್ಮನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ನನಗೆ ಸಾಯಲು ಇಷ್ಟವಿಲ್ಲ. ಹಾಗಂತ ನನಗೆ ಜೀವಿಸಲೂ ಇಷ್ಟವಾಗುತ್ತಿಲ್ಲ. ಐ ಲವ್ ಯೂ ಅಪ್ಪ-ಅಮ್ಮ” ಎಂದು ನಟಿ ಬರೆದಿದ್ದಾರೆ.

ಡೆತ್ ನೋಟ್ ನಲ್ಲಿ ತಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಯಾರಲ್ಲಿಯೂ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಾಕಷ್ಟು ಚಿಕಿತ್ಸೆ ತೆಗೆದುಕೊಂಡರೂ ಕಡಿಮೆಯಾಗುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲು ತಮಗೆ ಇಷ್ಟವಿಲ್ಲದಿದ್ದರೂ ಬೇರೆ ದಾರಿ ತೋಚುತ್ತಿಲ್ಲ, ದಯವಿಟ್ಟು ಕ್ಷಮಿಸಿ ಎಂದು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರನ್ನುದ್ದೇಶಿಸಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಆದರೆ ಕುಟುಂಬಸ್ಥರು ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೇ ಅಲ್ಲ. ಅವಳಿಗೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಮಗಳ ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಾವು ಸ್ಥಳಕ್ಕೆ ಆಗಮಿಸುವ ಮುನ್ನ ನೇಣಿನಿಂದ ಸೌಜನ್ಯಳನ್ನು ಕೆಳಗೆ ಇಳಿಸಿದ್ದು ಯಾಕೆ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ದೂರು ನೀಡಲು ಮುಂದಾಗಿದ್ಧಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಸತ್ಯಾಸತ್ಯತೆ ಬಯಲಾಗುವ ಸಾಧ್ಯತೆ ಇದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.