ಚೋರ.. ಚೋರಿಯ ಭಯಂಕರ ಪ್ರೇಮಕಥೆ : ‘ಕಾರು’ಬಾರು ಮಾಡಲು ಹೋಗಿ ತಗಲಾಕಿಕೊಂಡ ಕಳ್ಳಪ್ರೇಮಿಗಳು!

ಪ್ರಿಯಕರ ಕಳ್ಳನಾಗಿದ್ದರೂ ಪ್ರೀತಿಸಿದ ಯುವತಿ ಲಾಂಗ್ ಡ್ರೈವ್ ಹೋಗಲು ತಾನೂ ಕಳ್ಳತನಕ್ಕೆ ಸಹಕಾರ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧಿತರನ್ನು ವಿನಯ್ ಹಾಗೂ ಕೀರ್ತನಾ ಎಂದು ಗುರುತಿಸಲಾಗಿದೆ. ಬೆಂಗಳೂರನ ರಾಜಾಜಿನಗರದಲ್ಲಿ ರೌಡಿ ಶೀಟರ್ ಆಗಿದ್ದ ವಿನಯ್ ನನ್ನು ಕೀರ್ತನಾ ಪ್ರೀತಿಸಿ ತನಗೆ ಬಂಗಾರ, ಅಧಿಕ ಹಣ ನೀಡುವಂತೆ ಪ್ರತಿನಿತ್ಯ ಒತ್ತಾಯಿಸುತ್ತಿದ್ದಳಂತೆ. ಕಳ್ಳತನ ಮಾಡಿಯಾದರೂ ಇದನ್ನೆಲ್ಲಾ ಕೊಡಿಸು ಎಂದು ಪೀಡಿಸುತ್ತದ್ದಳಂತೆ. ಮಾತ್ರವಲ್ಲದೇ ಕಳ್ಳತನಕ್ಕೆ ತಾನೂ ಕೈ ಜೋಡಿಸುತ್ತಿದ್ದ ಕತರ್ನಾಕ್ ಚೋರ-ಚೋರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅಕ್ಟೋಬರ್ 4ರಂದು ಮಾರುತಿ ನಗರದ ಗುಣಶೇಖರ್ ಎಂಬುವವರು ಮನೆ ಕಳ್ಳತನದ ದೂರು ನೀಡಿದ್ದರು. ಇವರ ಮನೆ ಕಳ್ಳತನವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕಳ್ಳ ಪ್ರೇಮಿಗಳು ಮನೆ ಬಾಡಿಗೆ ಕೇಳುವ ನೆಪದಲ್ಲಿ ದಂಪತಿಗಳಾಗಿ ಬಂದು ಮನೆಯಲ್ಲಿದ್ದ 15 ಸಾವಿರ ಹಣ, ಲಾಪ್ ಟಾಪ್, ಮೊಬೈಲ್ ಎಗರಿಸಿದ್ದರು. ದೃಶ್ಯದ ಜಾಡು ಹಿಡಿದು ಹೊರಟ ಪೊಲೀಸರಿಗೆ ಈ ಚೋರಾ ಚೋರಿ ಸಿಕ್ಕಿಬಿದ್ದಿದ್ದಾರೆ.

ಪೊಲೀಸ್ ವಿಚಾರಣೆ ವೇಳೆ ಕಳ್ಳತನಕ್ಕೆ ಕಾರಣವನ್ನು ಹೇಳಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. ರೌಡಿ ಶೀಟರ್ ವಿನಯ್ ಗೆ ಪ್ರಿಯತಮೆ ಕೀರ್ತನಾ ಲಾಂಗ್ ಡ್ರೈವ್ ಹೋಗಬೇಕು, ಗಿಫ್ಟ್ ಕೊಡಿಸಬೇಕು ಎಂದು ಡಿಮಾಂಡ್ ಮಾಡ್ತಾಯಿದ್ದಳಂತೆ. ಮಾತ್ರವಲ್ಲದೆ ನಿನ್ನ ಜೊತೆ ಜೈಲಿಗೂ ಬರ್ತೀನಿ ಎಂದಿದ್ದ ಕೀರ್ತನಾ ಮಾತು ಕೇಳಿ ವಿನಯ್ ಮತ್ತಷ್ಟು ತನ್ನ ಕೃತ್ಯದಲ್ಲಿ ಚುರುಕಾಗಿದ್ದಾನೆ.

ಹೀಗಾಗಿ ಮೊದಲೇ ಕಳ್ಳತನ ಮಾಡುತ್ತಿದ್ದ ಕಳ್ಳ ವಿನಯ್ ಗೆ ಇದ್ಯಾವುದು ಕಷ್ಟ ಅನ್ನಿಸಲೇ ಇಲ್ಲ. ಸಂಗಾತಿ ಕೀರ್ತನ ಜೊತೆ ಕಳ್ಳತನಕ್ಕೆ ಇಳಿದಿದ್ದಾನೆ. ಕೀರ್ತನಾ ಕೂಡ ಇದಕ್ಕೆಲ್ಲಾ ಸಾಥ್ ನೀಡಿದ್ದಾಳೆ.

ವಿಚಾರಣೆ ವೇಳೆ ಪೊಲೀಸರ ಮುಂದೆ ಇವರಿಬ್ಬರು ನವರಂಗಿ ಆಟ ಆಡಿದ್ದಾರೆ. ಪೊಲೀಸರ ಮುಂದೆ ನಮ್ಮದು ತಪ್ಪಿಲ್ಲಾ ಮನೆ ಮಾಲೀಕನದ್ದೇ ತಪ್ಪು ಎಂದಿದ್ದಾರೆ. ಖಾಲಿ ಮನೆಯಲ್ಲಿ ಲಾಪ್ ಟಾ್ಪ್ ಯಾಕ್ ಇಟ್ರು? ಮನೆಯೊಳಗೆ ಜೋಪಾನವಾಗಿ ಇಡಬೇಕು ತಾನೆ ಎಂದು ಪ್ರಶ್ನಿಸಿದ್ದಾಳೆ ಕೀರ್ತನಾ. ಹೀಗಾಗಿ ನಾನು ತೆಗೆದುಕೊಂಡು ಹೋದೆ. ನಮ್ಮದು ತಪ್ಪಿಲ್ಲ ಎಂದು ವಾದ ಮಾಡಿದ್ದಾಳೆ. ಈಕೆ ಕೊಟ್ಟ ವಿವರಣೆ ಕೇಳಿ ಪೊಲೀಸರೇ ಕಕ್ಕಬಿಕ್ಕಿಯಾಗಿದ್ದಾರೆ. ಕಳ್ಳತ ಮಾಡುವುದಲ್ಲದೇ ಅದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಸಾಕಷ್ಟು ಕಡೆಗಳಲ್ಲಿ ಇವರು ಕಳ್ಳತನ ಮಾಡಿದ್ದಾರೆ. ಆದರೆ ಈ ಹಿಂದೆ ಈ ಚೋರಾ ಚೋರಿ ಮೇಲೆ ಯಾವುದೇ ದೂರು ಬಂದಿರಲಿಲ್ಲ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಬಳಿಕ ಇವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಇನ್ನೂ ವಿನಯ್ ರಾಜಾಜಿ ನಗರದ ರೌಡಿ ಶೀಟರ್ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ಕೂಡ ನಡೆಸಲಾಗುತ್ತಿದೆ. ಆತನ ಮೇಲೆ ಎಷ್ಟು ಪ್ರಕರಣಗಳು ಇವೆ ಎನ್ನುವುದಕ್ಕೆ ಇನ್ನಷ್ಟು ವಿಚಾರ ಗೊತ್ತಾಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights