ವಿಜಯೇಂದ್ರರನ್ನು ಮೂಲೆಗುಂಪು ಮಾಡಲು ಬಿಜೆಪಿ ತಂತ್ರ? ಬಿಎಸ್‌ವೈ ರಾಜೀನಾಮೆ ನಂತರ ಆಗುತ್ತಿರುವುದೇನು?
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಮೂಲೆಗುಂಪು ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾತು ಇತ್ತೀಚೆಗೆ ಕೇಳಿಬರುತ್ತಿವೆ. ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಿಸುವಾಗ ವಿಜಯೇಂದ್ರರನ್ನು ಕೈಬಿಟ್ಟಿದ್ದದ್ದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ವಿಜಯೇಂದ್ರ ಅವರಿಗೆ ಕ್ಯಾಬಿನೆಟ್‌ನಲ್ಲಿ ಸ್ಥಾನಮಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಬೊಮ್ಮಾಯಿ ಸಿಎಂ ಆದ ಬಳಿಕ ರಚನೆಯಾದ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಅಲ್ಲದೆ, ಬೇರೆ ಯಾವ ರೀತಿ ಸ್ಥಾನವನ್ನೂ ಅವರಿಗೆ ನೀಡಲಾಗಿಲ್ಲ.
ಅಲ್ಲದೆ, ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗೆ ಬಿಜೆಪಿ ಪಟ್ಟಿಮಾಡಿದ್ದ ಉಸ್ತುವಾರಿಗಳ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರನ್ನು ಕೈಬಿಡಲಾಗಿತ್ತು. ನಂತರದಲ್ಲಿ, ಅವರ ಅಭಿಮಾನಿಗಳ ಒತ್ತಡದಿಂದಾಗಿ ಅವರನ್ನು ಉಸ್ತುವಾರಿ ಪಟ್ಟಿಗೆ ಸೇರಿಸಲಾಯಿತು.
ಇದೆಲ್ಲವೂ, ಉದ್ದೇಶಪೂರ್ವಕವಾಗಿಯೇ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಅನುಮಾನವನ್ನು ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.
ಅಷ್ಟು ಮಾತ್ರವಲ್ಲದೆ, ಇತ್ತೀಚೆಗೆ ಐಟಿ ದಾಳಿಗೆ ಒಳಗಾದವರೆಲ್ಲರೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪ್ತ ಬಳಗದವರಾಗಿದ್ದಾರೆ. ಇದು ಯಡಿಯೂರಪ್ಪ ಅವರ ಬೆಂಬಲಿಗರನ್ನು ನಿಯಂತ್ರಿಸುವ ಹುನ್ನಾರವಿರಬಹುದು ಎಂಬ ಆರೋಪವೂ ಕೇಳಿಬರುತ್ತಿದೆ.
ಬಿಎಸ್‌ವೈ ಸರ್ಕಾರದಲ್ಲಿ ಭಾರೀ ಪಾತ್ರವಹಿಸಿದ್ದ ವಿಜಯೇಂದ್ರ ಅವರನ್ನು ಬಿಎಸ್‌ವೈ ರಾಜೀನಾಮೆಯ ಬಳಿಕ ಸೈಡ್‌ಲೈನ್ ಮಾಡಲಾಗುತ್ತಿದ್ದು, ಬಿಎಸ್‌ವೈ ಕುಟುಂಬವನ್ನು ರಾಜ್ಯದಲ್ಲಿ ಮೂಲೆಗೆ ಸರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಿದರೆ ಬೊಕ್ಕಸವೇ ಖಾಲಿ ಆಗುತ್ತಿದೆ: ಆರ್ ಅಶೋಕ್