ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ; ಆದರೆ, ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಕಳೆದ ಒಂದು ವರ್ಷದಿಂದ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿಯಿಂದ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಕೋರಿ ಕೆಲವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್‌ಕೆ ಕೌಲ್ ನೇತೃತ್ವದ ನ್ಯಾಯಪೀಠವು, ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ರಸ್ತೆಗಳನ್ನು ಅನಿರ್ದಿಷ್ಟವಾಗಿ ನಿರ್ಬಂಧಿಸಲು ಸಾಧ್ಯವಿಲ್ಲ ಎಂಧು ಹೇಳಿದೆ. ಅಲ್ಲದೆ, ಪ್ರತಿಭಟನೆಗೆ ತೆರವಿಗೆ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರೈತ ಸಂಘಟನೆಗಳಿಗೆ ಮೂರು ವಾರಗಳ ಸಮಯವನ್ನು ಕೋರ್ಟ್‌ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 7 ರಂದು ಮುಂದೂಡಿದೆ.

ನೋಯ್ಡಾದ ನಿವಾಸಿ ಮೊನಿಕ್ಕಾ ಅಗರ್‌ವಾಲ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಮೊನಿಕ್ಕಾ ಅವರು ರೈತರ ಆಂದೋಲನದಿಂದಾಗಿ ದೈನಂದಿನ ಪ್ರಯಾಣವು ವಿಳಂಬವಾಗುತ್ತಿದೆ. ಹೀಗಾಗಿ, ಪ್ರತಿಭಟನಾಕಾರರನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ರಸ್ತೆಗಳಿಂದ ತೆರವುಗೊಳಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಕೃಷಿ ಕ್ಷೇತ್ರದ ಮೇಲೆ ಅಮೆಜಾನ್, ಮೈಕ್ರೋಸಾಫ್ಟ್‌ ಆಕ್ರಮಣ; ಅಮೆರಿಕಾದಲ್ಲಾಗಿದ್ದು, ಭಾರತದಲ್ಲಾಗುವುದಿಲ್ಲವೇ?

“ಅಂತಿಮವಾಗಿ ಕೆಲವು ಪರಿಹಾರವನ್ನು ಕಂಡುಹಿಡಿಯಬೇಕು. ಕಾಯ್ದೆಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗಲೂ ರೈತರ ಪ್ರತಿಭಟಿಸುವ ಹಕ್ಕನ್ನು ನಾವು ವಿರೋಧಿಸುವುದಿಲ್ಲ. ಆದರೆ ರಸ್ತೆಗಳನ್ನು ಅನಿರ್ಧಿಷ್ಟಾವಧಿಗೆ ನಿರ್ಬಂಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ನೀವು ಯಾವುದೇ ರೀತಿಯಲ್ಲಿ ಆಂದೋಲನ ಮಾಡುವ ಹಕ್ಕನ್ನು ಹೊಂದಿದ್ದೀರಿ. ಆದರೆ ರಸ್ತೆಗಳನ್ನು ಈ ರೀತಿ ನಿರ್ಬಂಧಿಸಬಾರದು. ಜನರಿಗೆ ರಸ್ತೆಗಳಲ್ಲಿ ಸಂಚರಿಸಲು ಹಕ್ಕಿದೆ. ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಹೇಳಿದೆ.

“ಸಮಸ್ಯೆಗಳ ಪರಿಹಾರವು ನ್ಯಾಯಾಂಗ ವೇದಿಕೆ, ಆಂದೋಲನ ಅಥವಾ ಸಂಸತ್ತಿನ ಚರ್ಚೆಗಳ ಮೂಲಕ ಆಗಿರಬಹುದು. ಆದರೆ ಹೆದ್ದಾರಿಗಳನ್ನು ಹೀಗೆ ನಿರ್ಬಂಧಿಸಬಹುದೇ? ಇದು ನಿರಂತರವಾಗಿ ನಡೆಯುತ್ತಿದೆ. ಇದು ಎಲ್ಲಿ ಕೊನೆಗೊಳ್ಳುತ್ತದೆ?” ಎಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು.

ಇದನ್ನೂ ಓದಿ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಆಂದೋಲನ ಕೈಬಿಡಲ್ಲ – ಟಿಕಾಯತ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.