ಎರಡು ಹೆರಿಗೆಗಳ ನಂತರವೂ ಬಾಕ್ಸಿಂಗ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಮೀನಾ ರಾಣಿ!; ಆರು ಚಿನ್ನ ಗೆದ್ದ ವಿಜೇತೆ!
ಐದನೇ ಎಲೈಟ್ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಬಾಕ್ಸರ್ ಮೀನಾ ರಾಣಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದು, ಇದೂವರೆಗೂ ವಿವಿಧ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ 06 ಬಾರಿ ಚಾಂಪಿಯನ್ ಆಗಿ ಮಿಂಚಿದ್ದಾರೆ. ಬುಧವಾರ ನಡೆದ ಬಾಕ್ಸಿಂಗ್ ಚಾಂಪಿಯನ್ಶಿಪ್ನ 60 ಕೆಜಿ ವಿಭಾಗದಲ್ಲಿ ಭಾರತೀಯ ರೈಲ್ವೇಸ್ನ ಹರ್ಯಾಣದ ಜೈಸ್ಮಿನ್ ವಿರುದ್ಧ 3:2 ಅಂತರದಲ್ಲಿ ಅವರು ಗೆಲುವು ಸಾಧಿಸಿ, ಚಿನ್ನ ಗೆದ್ದಿದ್ದಾರೆ.
32 ವಯಸ್ಸಿನ ಅವರು ಚಾಂಪಿಯನ್ಆಗಿ ಮನೆಗೆ ಮರಳಿದಾಗ ಅವರ ಮಕ್ಕಳಾದ ಶಾನ್ವಿ ಮತ್ತು ಅಥರ್ವ್ ಅವರು ಪಡೆದ ಚಿನ್ನದ ಪದಕವನ್ನು ನೋಡುವುದಕ್ಕೂ ಮೊದಲು ರಾಣಿ ಅವರ ಕಣ್ಣಿನ ಬಳಿ ಊದಿಕೊಂಡಿದ್ದನ್ನು ಗಮನಿಸಿದರು. ಆದರೆ, ಆಕೆ ತನ್ನ ಊದಿಕೊಂಡಿದ್ದ ಕಣ್ಣುಗಳನ್ನೂ ನೋಡಿಯೂ ಹರ್ಷ ವ್ಯಕ್ತಪಡಿಸಿದ್ದಾರೆ.
“ನನ್ನ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳು ನನ್ನ ಮದುವೆಗೆ ಮುಂಚೆಯೇ ಬಂದಿವೆ. ನಾನು ಒಮ್ಮೆ ಪ್ರಾಬಲ್ಯ ಸಾಧಿಸಿದ ಅದೇ ವಿಭಾಗದಲ್ಲಿ ನಾನು ಆರನೇ ಪಶಸ್ತಿಯನ್ನು ಪಡೆದಿರುವುದು ನನಗೆ ಪುನರ್ಜನ್ಮದಂತೆ ಭಾಸವಾಗುತ್ತಿದೆ. ಟ್ರೋಫಿ ಕ್ಯಾಬಿನೆಟ್ನಲ್ಲಿ ಮತ್ತೊಂದು ಪದಕವನ್ನು ನೋಡಲು ನನ್ನ ಮಕ್ಕಳು ಸಂತೋಷಪಡುತ್ತಾರೆ. ಅದನ್ನು ಅವರು ಹೆಮ್ಮೆಯಿಂದ ತಮ್ಮ ಸ್ನೇಹಿತರಿಗೆ ತೋರಿಸುತ್ತಾರೆ. ಅದು ನನಗೆ ದೊಡ್ಡ ಪ್ರೇರಣೆ” ಎಂದು ರಾಣಿ ಹೇಳಿಕೊಂಡಿದ್ದಾರೆ.
“ಬಾಕ್ಸಿಂಗ್ ಮೇ ಅಗರ್ ಮಾರ್ತೆ ಹೋ ತೋ ಮಾರ್ ಖತೇ ಭೀ ಹೋ (ಬಾಕ್ಸಿಂಗ್ನಲ್ಲಿ, ಒಬ್ಬರು ಪಂಚ್ ಮಾಡಬೇಕೆಂದರೆ, ಅವರೂ ಸಹ ಪಂಚ್ಗೆ ಒಳಗಾಗುತ್ತಾರೆ). ಅಲ್ಲದೆ, ಎಲ್ಲಾ ತಾಯಿಯಂತೆ, ನನ್ನನ್ನು ಹೊಡೆಯುವುದನ್ನು ನನ್ನ ಮಕ್ಕಳು ನೋಡಬೇಕೆಂದು ನಾನು ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ: ಭಾರತದ ಮಹಿಳಾ ತಂಡಕ್ಕೆ ಚಿನ್ನದ ಪದಕ!
ಫರಿದಾಬಾದ್ ಬಳಿಯ ಪಲ್ವಾಲ್ ಮೂಲದ ರಾಣಿ ಅವರಿಗೆ ಬಾಕ್ಸಿಂಗ್ ಮೇಲಿದ್ದ ಪ್ರೀತಿಯನ್ನು ಗಮನಿಸಿದ ರಾಷ್ಟ್ರೀಯ ತರಬೇತುದಾರ ಅನುಪ್ ಕುಮಾರ್ ಅವರು, ರಾಣಿ ಅವರನ್ನು ಹಿಸಾರ್ನಲ್ಲಿರುವ SAI ತರಬೇತಿ ಕೇಂದ್ರಕ್ಕೆ ದಾಖಲಾಗುವಂತೆ ಒತ್ತಾಯಿಸಿದ್ದರು. ಇದಕ್ಕೂ ಮುನ್ನ ಅವರು RSC ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2006 ರಲ್ಲಿ ಮನೆಯನ್ನು ಕಳೆದುಕೊಂಡ ರಾಣಿ ಕ್ರೀಡೆಯನ್ನು ತೊರೆಯುವ ಬಗ್ಗೆ ಯೋಚಿಸಿದ್ದರು. ಎರಡು ವರ್ಷಗಳ ನಂತರ, ವಿಜೇಂದರ್ ಅವರು ಭಾರತಕ್ಕೆ ತನ್ನ ಮೊದಲ ಒಲಿಂಪಿಕ್ ಪದಕವನ್ನು ತಂದುಕೊಟ್ಟಿದ್ದನ್ನು ಗಮನಿಸಿ ಪ್ರೇರಣೆಗೊಂಡ ರಾಣಿ ಅವರು, ಆಗ್ರಾದಲ್ಲಿ 60 ಕೆಜಿ ವಿಭಾಗದ ಬಾಕ್ಸಿನಲ್ಲಿ ಭಾಗವಹಿಸಿ, ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. 2012 ರವರೆಗೆ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದರು.
2011 ರಲ್ಲಿ ವಿವಾಹವಾದ ರಾಣಿ, ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ 64 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪುವುದಕ್ಕೂ ಮೊದಲು ಅಮೆರಿಕಾದ ಮಿಖೇಲಾ ಮೇಯರ್ ವಿರುದ್ಧ ಸೋತಿದ್ದರು. “ಇದು ಒಲಿಂಪಿಕ್ಸ್ನಲ್ಲಿ ಮಹಿಳಾ ಬಾಕ್ಸಿಂಗ್ ಇಲ್ಲದ ಸಮಯ ಮತ್ತು ನನ್ನ ಮದುವೆಯ ನಂತರ, 2012ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ನಾನು 64 ಕೆಜಿಯಲ್ಲಿ ಪದಕವನ್ನು ಕೆಳೆದುಕೊಂಡೆ. ಅಲ್ಲದೆ, ಅದೇ ವೇಳೆ ಫೆಡರೇಶನ್ ಕೂಡ ನಿಷೇಧಕ್ಕೊಳಗಾಗಿದ್ದರಿಂದ ನಾನು ಬಾಕ್ಸಿಂಗ್ನಿಂದ ವಿರಾಮ ತೆಗೆದುಕೊಂಡೆ” ಎಂದು ರಾಣಿ ನೆನಪಿಸಿಕೊಳ್ಳುತ್ತಾರೆ.
2014 ರಲ್ಲಿ, ರಾಣಿ ತನ್ನ ಮಗಳಿಗೆ ಜನ್ಮ ನೀಡಿದರು. ಅಲ್ಲದೆ, 2016 ರವರೆಗೆ ರಾಣಿ ಬಾಕ್ಸಿಂಗ್ಗೆ ಮರಳಲಿಲ್ಲ. 80 ಕೆಜಿ ತೂಕವಿದ್ದ ಅವರು, 75 ಕೆಜಿಯಲ್ಲಿ ಮುಂದಿನ ರಾಷ್ಟ್ರ ಪ್ರಶಸ್ತಿಗಳಲ್ಲಿ ಅವರು ಕಂಚು ಗೆದ್ದು, ಕವಿತಾ ಗೋಯತ್ ವಿರುದ್ಧ ಸೋತರು.
ನಂತರ, ಸೆರ್ಬಿಯಾದಲ್ಲಿ ನಡೆದ ಸೆವೆನ್ ನೇಷನ್ಸ್ ಕಪ್ನಲ್ಲಿ ಬೆಳ್ಳಿ ಗೆದ್ದರು. ನಂತರ, ಖಝಕಿಸ್ತಾನ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತರು. ಒಂದು ವರ್ಷದ ನಂತರ ಅವರಿಗೆ ಮತ್ತೊಂದು ಮಗು ಹುಟ್ಟಿದ್ದರಿಂದ ಇನ್ನೊಂದು ಎರಡು ವರ್ಷಗಳ ವಿರಾಮ ಪಡೆದರು.
ಇದನ್ನೂ ಓದಿ: ಶುರುವಾಗ್ತಿದೆ ಪ್ರೊ ಕಬಡ್ಡಿ; ಡಿ. 22ರಿಂದ ಕ್ರೀಡೆಗೆ ಬೆಂಗಳೂರಿನಲ್ಲಿ ಅಖಾಡ ರೆಡಿ!
“ನಾನು ಮದುವೆಯಾದಾಗ, ನಾನು ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಆಲೋಚನೆಗಳನ್ನು ಹೊಂದಿದ್ದೆ. ಆದರೆ, ಅದು ಆಗಲಿಲ್ಲ. ಅ ವೇಳೆಗೆ, ನನ್ನ ಮಗಳ ಜನನವಾಯಿತು. ನನ್ನ ತೂಕ ಮತ್ತಷ್ಟು ಹೆಚ್ಚಿತು. ನಾನು ಬಾಕ್ಸಿಂಗ್ಗೆ ಮರಳುವ ಬಗ್ಗೆ ನನ್ನ ಪತಿ ಮನೋಜ್ ಕುಮಾರ್ಗೆ ಹೇಳಿದಾಗ, ನನ್ನ ಮಗಳನ್ನು ನೋಡಿಕೊಳ್ಳಲು ಅವರು ಹಿಸಾರ್ಗೆ ಬಂದರು. ನಾನು ಕೋಚ್ ಅಮಿತ್ ಅವರಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದಾಗ ಮೊದಲು ತೂಕ ಇಳಿಸುವತ್ತ ಗಮನ ಹರಿಸಿದೆ. ನಾನು ತರಬೇತಿಗೆ ತೆರಳುವಾಗ ನನ್ನ ಪತಿ ಮನೆಯಲ್ಲಿಯೇ ಇದ್ದು, ನಮ್ಮ ಮಗಳನ್ನು ನೋಡಿಕೊಳ್ಳುತ್ತಿದ್ದರು. ನನ್ನ ಪತಿ ನನ್ನ ಕ್ರೀಡೆಯಲ್ಲಿ ನನಗೆ ನೆರವು ನೀಡಿದರು” ಎಂದು ರಾಣಿ ಹೇಳುತ್ತಾರೆ.
2019 ರಲ್ಲಿ 69 ಕೆಜಿಯಲ್ಲಿ ಬೆಳ್ಳಿ ಗೆದ್ದ ಅವರು, ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗಾಗಿ 69 ಕೆಜಿ ಟ್ರಯಲ್ಸ್ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಮತ್ತು ಲಲಿತಾ ಅವರ ಹಿಂದೆ ಮೂರನೇ ಸ್ಥಾನ ಪಡೆದಿದ್ದರು. “ಮಹಿಳೆಯರಾದ ನಾವು ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ, ನನ್ನ ಪತಿ ಮತ್ತು ಅವರ ಪೋಷಕರ ಬೆಂಬಲವಿಲ್ಲದೆ ನಾನು ಈ ಪುನರಾಗಮನವನ್ನು ಪಡೆಯಲು ಸಾಧ್ಯವಿರಲಿಲ್ಲ. 2019 ರ ರಾಷ್ಟ್ರ ಪ್ರಶಸ್ತಿಗಳಲ್ಲಿ ನಾನು ಬೆಳ್ಳಿ ಪದಕವನ್ನು ಗೆದ್ದಾಗ, ಮೇರಿ ಕೋಮ್ ದೀದಿ ನನ್ನನ್ನು ಭೇಟಿಯಾಗಲು ಬಂದಿದ್ದರು. ಆಗ ಅವರು, “ಅರೇ, ನೀವು ಬಾಕ್ಸಿಂಗ್ಗೆ ಮತ್ತೆ ಮರಳಿದ್ದೀರಿ. ಇದು ತುಂಬಾ ಸಂತೋಷದ ವಿಷಯ” ಎಂಧು ಹೇಳಿದ್ದರು. 32 ನೇ ವಯಸ್ಸಿನಲ್ಲಿಯೂ ವೃತ್ತಿಜೀವನದಲ್ಲಿ ನಿರಂತರವಾಗಿ ನಾನು ನನ್ನನ್ನು ಸಾಬೀತುಪಡಿಸುವ ಒತ್ತಡವಿದೆ ಎಂದು ನನಗೆ ತಿಳಿದಿದೆ. ಅಲ್ಲದೆ, ಮೇರಿ ದೀದಿಗಿಂತ ನನಗೆ ಉತ್ತಮ ಸ್ಫೂರ್ತಿ ಇಲ್ಲ. ನನ್ನಿಂದ ಆಗುವುದಿಲ್ಲ ಎಂದು ನಾನು ಭಾವಿಸಿದಾಗ, ನಾನು ಮೇರಿ ದೀದಿ ಅವರ ಜೀವನಚರಿತ್ರೆ ಅಥವಾ ಇತ್ತೀಚಿನ ಬಾಲಿವುಡ್ ಚಲನಚಿತ್ರ ಪಂಗಾವನ್ನು ನೋಡುತ್ತೇನೆ. ಇದು ನನ್ನ ಪುನರಾಗಮನವನ್ನು ಹೋಲುತ್ತದೆ ಮತ್ತು ಪ್ರೇರೇಪಿಸುತ್ತದೆ” ಎಂದು ರಾಣಿ ಹೇಳುತ್ತಾರೆ.
ರಾಣಿ ಈಗ ಡಿಸೆಂಬರ್ನಲ್ಲಿ ಟರ್ಕಿಯಲ್ಲಿ ನಡೆಯಲಿರುವ ಎಐಬಿಎ ಮಹಿಳಾ ವಿಶ್ವ ಚಾಂಪಿಯನ್ಶಿಪ್ಗೆ ತೆರಳಲಿದ್ದಾರೆ. ಭಾರತೀಯ ರೈಲ್ವೇಸ್ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಸಾಗರ್ ಮಲ್ ಧಯಾಲ್ ಅವರು ರಾಣಿಯನ್ನು 2007 ರಿಂದ ಬಾಕ್ಸರ್ ಆಗಿ ನೋಡಿದ್ದಾರೆ. ಅವರು, ರಾಣಿ ಅವರಿಗೆ ಗುವಾಹಟಿಯಲ್ಲಿ 57-ದಿನಗಳ ತರಬೇತಿಯನ್ನು ನೀಡುತ್ತಿದ್ದಾರೆ. “ಕಡಿಮೆ ತೂಕದ ವರ್ಗಕ್ಕೆ ಶಕ್ತಿ ಮತ್ತು ವೇಗದ ಅಗತ್ಯವಿದೆ. ರಾಣಿ ಅವರು ಪ್ಯಾರಿಸ್ ಒಲಿಂಪಿಕ್ಸ್-2024ಗೆ ಅರ್ಹತೆ ಪಡೆಯಬಹುದು. ಆಕೆಯ ಬಲ ಈಗಲೂ 2008 ರಲ್ಲಿದ್ದಂತೆಯೇ ಇದೆ. ಆಕೆಯಲ್ಲಿ ಇನ್ನೂ ಹಲವು ವರ್ಷಗಳ ಕಾಲ ಬಾಕ್ಸಿಂಗ್ನಲ್ಲಿ ಉಳಿಯುವ ಶಕ್ತಿ ಇದೆ” ಎಂದು ಧಯಾಲ್ ಹೇಳುತ್ತಾರೆ.
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ತಮ್ಮ ಕೂದಲಿಗೆ ಕತ್ತರಿ ಹಾಕಲು ಬಯಸಿದ ನೀರಜ್ ಚೋಪ್ರಾ : ಯಾಕೆ ಗೊತ್ತಾ?