ಜಾತಿಯತೆಯ ವಿರುದ್ದ ರೋಹಿತ್ ವೇಮೂಲನಂತೆ ಸಿಡಿದ ಕೇರಳ ವಿದ್ಯಾರ್ಥಿನಿ; ಶಿಕ್ಷಣ ಕ್ಷೇತ್ರದಲ್ಲಿ ಜಾತಿ ತಾರತಮ್ಯದ ವಿರುದ್ದ ಪಿಎಚ್‌ಡಿ ವಿದ್ಯಾರ್ಥಿನಿ ಉಪವಾಸ ಸತ್ಯಾಗ್ರಹ!

ದೀಪಾ ಪಿ ಮೋಹನನ್ ಒಬ್ಬ ವಿಜ್ಞಾನಿ — ಒಬ್ಬ ಪಿಎಚ್‌ಡಿ ವಿದ್ಯಾರ್ಥಿನಿ. ಈಕೆ ನ್ಯಾನೊಮೆಡಿಸಿನ್ ಕ್ಷೇತ್ರವನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮತ್ತು ಗಾಯಗೊಂಡ ಜನರಿಗೆ ಸಹಾಯ ಮಾಡಲು ನ್ಯಾನೊಪರ್ಟಿಕಲ್‌ಗಳನ್ನು ಬಳಸಿಕೊಂಡು ಗಾಯವನ್ನು ಗುಣಪಡಿಸುವ ಸ್ಕ್ಯಾಫೋಲ್ಡ್‌ಗಳನ್ನು ನಿರ್ಮಿಸುತ್ತಿದ್ದಾರೆ.

ಎಂಫಿಲ್ ಮುಗಿಸಿರುವ 36 ವರ್ಷದ ಈಕೆ STEM ಪಿಎಚ್‌ಡಿ ಪಡೆಯುತ್ತಿದ್ದಾರೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಪಡೆದಿರುವ ಇವರಿಗೆ, ಜಾತಿ ತಾರತಮ್ಯದಿಂದ ಪಾರಾಗಲು ಆ ಹುದ್ದೆಯೂ ಸಹಾಯ ಮಾಡಿಲ್ಲ. ವಾಸ್ತವವಾಗಿ, ಆಕೆಯ ಕೆಲಸ, ಆಕೆಯ ಯಶಸ್ಸು ಮತ್ತು ಘನತೆಯ ಮೇಲೆ ಜಾತಿವಾದಿ ಆಕ್ರಮಣಗಳು ಹೆಚ್ಚಾಗಿವೆ.

ಐದು ದಿನಗಳಿಂದ, ದೀಪಾ ಅವರು ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಇಂಟರ್ನ್ಯಾಷನಲ್ ಮತ್ತು ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿ (IIUCNN) ವಿಭಾಗದ ಮುಂದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಏಕೆಂದರೆ, ಆಕೆ ದಲಿತೆ ಎಂಬ ಕಾರಣಕ್ಕೆ, ಕಳೆದ 10 ವರ್ಷಗಳಿಂದ ಆಕೆಯ ಪಿಹೆಚ್‌ಡಿ ಪೂರ್ಣಗೊಳಿಸಲು ಸಂಸ್ಥೆಯ ನಿರ್ದೇಶಕರಾದ ನಂದಕುಮಾರ್ ಕಲರಿಕಲ್ ಅವರು ಅಡ್ಡಿಯುಂಟುಮಾಡುತ್ತಿದ್ದಾರೆ ಎಂದು ದೀಪಾ ಹೇಳಿದ್ದಾರೆ.

ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ದೀಪಾ, ನಂತರ 2011 ರಲ್ಲಿ MG ಯುನಿವರ್ಸಿಟಿ (MGU) ಗೆ ಸೇರಿದರು. ಬಳಿಕ, ತಾವು ಯೂನಿವರ್ಸಿಟಿಗೆ ಸೇರಿದ ಮೊದಲ ವರ್ಷದಿಂದಲೂ ನಂದಕುಮಾರ್ ಕಲರಿಕಲ್ ಅವರು ತನ್ನ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಜಾತಿ ಸಮಸ್ಯೆ ಬಗ್ಗೆ ಮಾತನಾಡಬಾರದೇ? ಎಲ್ಲವೂ ಸರಿ ಇದೆ ಎಂಬ ಭ್ರಮೆಯಲ್ಲಿ ಬದುಕಬೇಕೇ?: ನೀನಾಸಂ ಸತೀಶ್‌

ದೀಪಾ ಅವರು ಇನ್ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಪ್ರಾರಂಭಿಸಿದಾಗ ಜಂಟಿ ನಿರ್ದೇಶಕರಾಗಿದ್ದ ಮತ್ತು ಈಗ IIUCNN ನಲ್ಲಿ ನಿರ್ದೇಶಕರಾಗಿರುವ ನಂದಕುಮಾರ್ ವಿರುದ್ಧದ ಆರೋಪಗಳ ಪಟ್ಟಿ ದೊಡ್ಡದಾಗಿದೆ. ದೀಪಾ ಪ್ರಕಾರ, ಆಕೆ ಲ್ಯಾಬ್‌ಗೆ ಪ್ರವೇಶಿಸುವುದನ್ನು, ಲ್ಯಾಬ್‌ನಲ್ಲಿ ಕೆಮಿಕಲ್‌ಗಳು ಮತ್ತು ಪಾಲಿಮರ್‌ಗಳನ್ನು ಬಳಸುವುದು ಮತ್ತು ಆಕೆಗೆ ಕೂರಲು ಖುರ್ಚಿಯನ್ನು ನಿರಾಕರಿಸುವುದನ್ನು ಆತ ನಿರಂತರವಾಗಿ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಆಕೆಗೆ ಬರುವ ಸ್ಟೈಫಂಡ್ ಅನ್ನು ಕೂಡ ತಡೆಯುವ ಕೆಲಸ ಮಾಡಿದ್ದಾನೆ.

Dalit Scholar Deepa P Mohanan On Hunger Strike For 4 Days Over Casteism At MG University

ಒಮ್ಮೆ ತಾನು ಲ್ಯಾಬ್‌ನಲ್ಲಿ ಏಕಾಂಗಿಯಾಗಿದ್ದಾಗ, ತನ್ನನ್ನು ಲಾಕ್‌ ಮಾಡಿದ್ದರು. ತನ್ನ ಬ್ಯಾಚ್‌ನಲ್ಲಿರುವ ಏಕೈಕ ದಲಿತ ಸ್ಕಾಲರ್‌ಆಗಿರುವ ತನ್ನೊಂದಿಗೆ ಅಸಭ್ಯವಾಗಿ ಮತ್ತು ನಿಂದನೀಯವಾಗಿ ವರ್ತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಪಿಎಚ್‌ಡಿ ಪಡೆಯದಂತೆ ತಡೆಯಲು ಎಲ್ಲಾ ರೀತಿಯಲ್ಲೂ ಯತ್ನಿಸುತ್ತಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ.

“ನಾನು ಈಗಾಗಲೇ ಎಂಫಿಲ್ ಅನ್ನು ಪಡೆದಿದ್ದೇನೆ. 2015 ರ ವೇಳೆಗೆ ನನ್ನ ಪಿಎಚ್‌ಡಿಯನ್ನು ಆದರ್ಶಪ್ರಾಯವಾಗಿ ಮುಗಿಸಬಹುದಿತ್ತು.” ಆದರೆ, 2021 ಕೊನೆಗೊಳ್ಳುತ್ತಿದೆ. ಪಿಎಚ್‌ಡಿ ಮುಗಿಸಲು ನಾನು ಇನ್ನೂ ಕಷ್ಟಪಡುತ್ತಿದ್ದೇನೆ. “ನನ್ನ ನ್ಯಾನೊಮೆಡಿಸಿನ್ ಯೋಜನೆಗಾಗಿ ನಾನು ಸಂಶ್ಲೇಷಣೆಯನ್ನು ಮಾಡಿದ್ದೇನೆ. ನಾನು ಸ್ಕ್ಯಾಫೋಲ್ಡ್ ಅನ್ನು ಅಭಿವೃದ್ಧಿಪಡಿಸಿದ್ದೇನೆ ಮತ್ತು ಅದನ್ನು ಆಪ್ಟಿಮೈಸ್ ಮಾಡಿದ್ದೇನೆ. ಆದರೆ ನಂದಕುಮಾರ್‌ನಿಂದಾಗಿ ನನಗೆ ಇನ್ನೂ ಪಿಎಚ್‌ಡಿ ಮುಗಿಸಲು ಸಾಧ್ಯವಾಗಿಲ್ಲ ಎಂದು ದೀಪಾ ಹೇಳಿದ್ದಾರೆ.

ಅಕ್ಟೋಬರ್ 29 ರಿಂದ, ದೀಪಾ ಮೂರು ಬೇಡಿಕೆಗಳನ್ನಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ: 1. ತನ್ನ ಸಂಶೋಧನಾ ಮಾರ್ಗದರ್ಶಿಯನ್ನು ಬದಲಾಯಿಸಬೇಕು; 2. ಎಲ್ಲಾ ಇತರ ಪಿಎಚ್‌ಡಿ ವಿದ್ಯಾರ್ಥಿಗಳಂತೆ ಆಕೆಗೆ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ಸಾಮಗ್ರಿಗಳನ್ನು ಒದಗಿಸಬೇಕು; ಮತ್ತು 3. ನಂದಕುಮಾರ್ ಕಲರಿಕಲ್ ಅವರನ್ನು ಸಂಸ್ಥೆಯಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನವೆಂಬರ್ 1 ರಂದು, ವಿಶ್ವವಿದ್ಯಾನಿಲಯವು ಆಕೆಯನ್ನು ರಾಜಿ ಸಭೆಗೆ ಕರೆದಿತು. ಸಭೆಯಲ್ಲಿ ಅವರು ಆಕೆಯ ಎರಡು ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡರು. ಆದರೆ ನಂದಕುಮಾರ್ ಅವರನ್ನು IIUCNN ನಿಂದ ತೆಗೆದುಹಾಕಲು ನಿರಾಕರಿಸಿದ್ದಾರೆ.

“ರಾಧಾಕೃಷ್ಣನ್ ಏಕ್ ಅವರನ್ನು ದೀಪಾ ಅವರ ಮಧ್ಯಂತರ ಮಾರ್ಗದರ್ಶಕರಾಗಿ ನೇಮಿಸಲಾಗುವುದು. ದೀಪಾ ಅವರ ಆಯ್ಕೆಯಂತೆ ಇನ್ನೊಬ್ಬ ಮಾರ್ಗದರ್ಶಿಯನ್ನು ನೇಮಿಸಲಾಗುವುದು. ಕೆಲ ತಾಂತ್ರಿಕ ಕಾರಣಗಳಿಂದ ನಂದಕುಮಾರ್ ಅವರನ್ನು ಪದಚ್ಯುತಗೊಳಿಸಲು ಸಾಧ್ಯವಾಗಿಲ್ಲ” ಎಂದು ಉಪಕುಲಪತಿ ಸಾಬು ಥಾಮಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ജാതി അധിക്ഷേപം നടത്തിയ അദ്ധ്യാപകനെ പിരിച്ചുവിടും വരെ നിരാഹാരം: ദീപ പി മോഹന്‍ - Fasting till dismissal of caste abusive teacher: Deepa P Mohan - Malayalam News

ಆದರೆ, ಅವರನ್ನು IIUCNNನಿಂದ ವಜಾಗೊಳಿಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂಬ ಬೇಡಿಕೆಗೆ ದೀಪಾ ದೃಢವಾಗಿದ್ದಾರೆ. ನಂದಕುಮಾರ್ IIUCNNನಲ್ಲಿ ಇದ್ದರೆ, ನನ್ನ ಸಂಶೋಧನೆಯನ್ನು ಮುಗಿಸಲು ನನಗೆ ಸಾಧ್ಯವಾಗುವುದಿಲ್ಲ. “ಆತ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಾನೆ.” ನನ್ನ ಹಿಂದಿನ ಅನುಭವಗಳು ಇದನ್ನು ಸಾಬೀತುಪಡಿಸುತ್ತವೆ” ಎಂದು ದೀಪಾ ನವೆಂಬರ್ 2 ರಂದು ಹೇಳಿದ್ದಾರೆ.

ದೀಪಾ ಅವರು 2015ರಲ್ಲಿ ನಂದಕುಮಾರ್ ವಿರುದ್ಧ ಜಾತಿ ತಾರತಮ್ಯ ಪ್ರಕರಣವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ಆಗ ವಿಶ್ವವಿದ್ಯಾನಿಲಯವು ಆರೋಪಗಳನ್ನು ಪರಿಶೀಲಿಸಲು ಎನ್ ಜಯಕುಮಾರ್ ಮತ್ತು ಕೆಎಸ್ ಇಂದು ಅವರ ದ್ವಿಸದಸ್ಯ ಸಮಿತಿಯನ್ನು ರಚಿಸಿತ್ತು. ಸಮಿತಿಯು ದೀಪಾ ಅವರ ಆರೋಪ ನಿಜವೆಂದು ವರದಿ ನೀಡಿತು. ಅಲ್ಲದೆ, ದೀಪಾ ಅವರ ಸಂಶೋಧನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ವಿಶ್ವವಿದ್ಯಾಲಯವು ಒದಗಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ 2016ರಲ್ಲಿ ನಂದಕುಮಾರ್ ವಿರುದ್ಧ ದೀಪಾ ಪೊಲೀಸ್ ದೂರು ದಾಖಲಿಸಿದ್ದರು.

ಆದರೆ, ಅದರ ನಂತರವೂ ಏನೂ ಬದಲಾಗಲಿಲ್ಲ. ಆಕೆ ದೂರು ನೀಡಲು ರಾಜ್ಯಪಾಲರನ್ನು ಭೇಟಿ ಮಾಡಲು ಯತ್ನಿಸಿದಾಗ ಆಕೆಯನ್ನು ಪೊಲೀಸರು ಬಂಧಿಸಿ ಎರಡು ದಿನಗಳ ಕಾಲ ಠಾಣೆಯಲ್ಲಿ ಇರಿಸಿದ್ದರು. ನಂದಕುಮಾರ್ ಕೇರಳದ ಸಿಪಿಐ(ಎಂ)ನ ಉನ್ನತ ನಾಯಕರ ನಿಕಟವರ್ತಿಯಾಗಿರುವುದು ಇದಕ್ಕೆ ಕಾರಣ ಎಂದು ದೀಪಾ ಈ ಹಿಂದೆ ಆರೋಪಿಸಿದ್ದರು. ಇದಕ್ಕಾಗಿಯೇ, ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾಗಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ದಂತಹ ವಿದ್ಯಾರ್ಥಿ ಒಕ್ಕೂಟಗಳು ಸಹ ತನ್ನನ್ನು ಬೆಂಬಲಿಸಿಲ್ಲ ಎಂದು ದೀಪಾ ಹೇಳಿದ್ದಾರೆ.

ಇದನ್ನೂ ಓದಿ: ಹಾಕಿ ತಂಡದಲ್ಲಿ ದಲಿತರು ಹೆಚ್ಚು ಇದ್ದದ್ದೇ ಸೋಲಿಗೆ ಕಾರಣ; ಜಾತಿ ನಿಂದನೆಗೆ ತುತ್ತಾದ ಸ್ಟಾರ್‌ ಆಟಗಾರ್ತಿ

ನಂದಕುಮಾರ್‌ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ, ಆತ ನನ್ನ ವಿರುದ್ಧ ಹೆಚ್ಚು ಸೇಡು ತೀರಿಸಿಕೊಂಡರು. ಅವರು ನನ್ನನ್ನು IIUCNN ನಿಂದ ವಜಾಗೊಳಿಸುವಂತೆ ಹಲವು ಬಾರಿ ವಿಶ್ವವಿದ್ಯಾಲಯಕ್ಕೆ ಪತ್ರಗಳನ್ನು ಬರೆದಿದ್ದಾರೆ. ಅಧ್ಯಯನ ಕೇಂದ್ರದಲ್ಲಿ ಎಲ್ಲವನ್ನೂ ನಿರ್ಧರಿಸುವವರು ಅವರೇ. ವಿಸಿ ಅವರನ್ನು ರಕ್ಷಿಸುತ್ತಿರುವುದರಿಂದ ನಾನು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುತ್ತಿದ್ದೇನೆ” ಎಂದು ದೀಪಾ ಹೇಳಿದ್ದಾರೆ.

“ನಾನು ರಕ್ತಹೀನತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ನನಗೆ ಹುಟ್ಟಿನಿಂದಲೂ ವಿಎಸ್‌ಡಿ (ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್) ಇದೆ. ಹಾಗಾಗಿ ನಾನು ಈ ಉಪವಾಸ ಸತ್ಯಾಗ್ರಹದಲ್ಲಿ ಹಸಿವಿನಿಂದ ನನ್ನ ಜೀವನವನ್ನು ಕಳೆದುಕೊಂಡರೆ, ಇದಕ್ಕೆ ಕಾರಣರಾದವರು ನಂದಕುಮಾರ್ ಕಲರಿಕಲ್, ವಿ.ಸಿ.ಸಾಬು ಥಾಮಸ್, ಸಂಶೋಧನಾ ಮಾರ್ಗದರ್ಶಕ ಡಾ.ರಾಧಾಕೃಷ್ಣನ್ ಇ.ಕೆ ಮತ್ತು ಈ ಸರ್ಕಾರ” ಎಂದು ದೀಪಾ ಅವರು ಅಕ್ಟೋಬರ್ 31 ರಂದು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ತೆರೆದ ಪತ್ರದಲ್ಲಿ ಬರೆದಿದ್ದಾರೆ.

“ರೋಹಿತ್ ವೇಮುಲ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನನಗೆ ಈ ಪರಿಸ್ಥಿತಿಯಲ್ಲಿ ಅರ್ಥವಾಗುತ್ತದೆ. ಆದರೆ, ನ್ಯಾಯಕ್ಕಾಗಿ ಹೋರಾಡದೆ ನಾನು ಪ್ರತಿಭಟನೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನನ್ನ ಜನರಿಗಾಗಿ ಹೋರಾಡಬೇಕು. ಸೋತ ಅನೇಕರಿಗಾಗಿ ನಾನು ಇಲ್ಲಿ ಗೆಲ್ಲಬೇಕು” ಎಂದೂ ಅವರು ಬರೆದಿದ್ದಾರೆ.

ಪ್ರಸ್ತುತ, ಭೀಮ್ ಆರ್ಮಿ ಕೇರಳ, ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ ​​ಮತ್ತು ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಷನ್ ​​ಸೇರಿದಂತೆ ಹಲವು ಸಂಘಟನೆಗಳು ದೀಪಾ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿವೆ.

ಇದನ್ನೂ ಓದಿ: ವಂದನಾ ಕಟಾರಿಯಗೆ ಜಾತಿನಿಂದನೆ: ಜಾತಿಗ್ರಸ್ತ ಮನಸ್ಥಿತಿಯ ಯುವಕರಿಗೊಂದು ಪ್ರಶ್ನೆ..

“ಕೊಟ್ಟಾಯಂ ಎಂಜಿ ವಿಶ್ವವಿದ್ಯಾನಿಲಯದಲ್ಲಿ ಜಾತಿ ತಾರತಮ್ಯದಿಂದಾಗಿ ಕಳೆದ 10 ವರ್ಷಗಳಿಂದ ತನ್ನ ಸಂಶೋಧನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ದೀಪಾ ಪಿ ಮೋಹನನ್ ಅವರ ಹೋರಾಟವನ್ನು ಭೀಮ್ ಆರ್ಮಿ ಕೇರಳ ಬೆಂಬಲಿಸುತ್ತದೆ. ಮನುವಾದಿ ಅಪರಾಧಿಗಳನ್ನು ಯಾವುದೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಭೀಮ್ ಆರ್ಮಿ ಎಂದಿಗೂ ಬಿಡುವುದಿಲ್ಲ” ಎಂದು ಭೀಮ್ ಆರ್ಮಿ ಕೇರಳ ಟ್ವೀಟ್ ಮಾಡಿದೆ.

“ASA ಸಂಘಟನೆಯು ದೀಪಾ ಪಿ ಮೋಹನನ್ ಜೊತೆ ನಿಂತಿದೆ. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ದೀಪಾ ಪಿ ಮೋಹನನ್ ಅವರಿಗೆ ನಾವು ನಮ್ಮ ಕ್ರಾಂತಿಕಾರಿ ಜೈ ಭೀಮ್ ಬೆಂಬಲವನ್ನು ವಿಸ್ತರಿಸುತ್ತೇವೆ. ಜೈ ಭೀಮ್!” ಎಂದು ASA ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಟ್ವೀಟ್ ಮಾಡಿದೆ.

ಈ ಮಧ್ಯೆ ಎಸ್‌ಎಫ್‌ಐ ಅಥವಾ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಆಕೆಗೆ ಇನ್ನೂ ಯಾವುದೇ ಬೆಂಬಲ ನೀಡಿಲ್ಲ.

ವಿಶ್ವವಿದ್ಯಾನಿಲಯದಲ್ಲಿ ದೀಪಾ ಎದುರಿಸುತ್ತಿರುವ ತಾರತಮ್ಯದ ಬಗ್ಗೆ 2016 ರಲ್ಲಿ TNM ವರದಿ ಮಾಡಿತ್ತು. “ಕಳೆದ ಏಪ್ರಿಲ್ (ಏಪ್ರಿಲ್ 2015), ನಾನು ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸೆಲರ್ ಶೀನ ಶುಕ್ಕೂರ್ ಅವರಿಗೆ ನನ್ನ ದುಸ್ಥಿತಿಯ ಬಗ್ಗೆ ದೂರು ನೀಡಿದಾಗಲೂ, ದಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ನಂದಕುಮಾರ್ ಹೇಳಿದ್ದರು.

ಐದು ವರ್ಷಗಳ ನಂತರವೂ ಆಕೆ ಇನ್ನೂ ಜಾತಿ ತಾರತಮ್ಯದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಆಕೆಗೆ ಕಿರುಕುಳ ನೀಡುತ್ತಿರುವವರು ಸಾಂಸ್ಥಿಕ ರಕ್ಷಣೆಯನ್ನು ಪಡೆಯುತ್ತಿದ್ದಾರೆ.

ಮೂಲ: ದಿ ನ್ಯೂಸ್‌ ಮಿನಿಟ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights