ಮಂಡ್ಯ: ದಲಿತ ಯುವಕನನ್ನು ಹಸುವಿನೊಂದಿಗೆ ಕಟ್ಟಿ, ಹಲ್ಲೆ ನಡೆಸಿ ಜಾತಿ ದೌರ್ಜನ್ಯ

ಹಸು ಕೊಳ್ಳಲು ಬಂದಿದ್ದ ದಲಿತ ಯುವಕನಿಗೆ ಮೋಸ ಮಾಡಲಾಗಿದ್ದು, ಆತನ ಮೇಲೆಯೇ ಕಳ್ಳತನದ ಆರೋಪ ಹೊರಿಸಿ, ಆತನಿಗೆ ಅಮಾನವೀಯವಾಗಿ ಥಳಿಸಿ, ಹಸುವಿಗೆ ಕಟ್ಟಿ ಮೆರವಣಿಗೆ ನಡೆಸಿ ಜಾತಿ ದೌರ್ಜನ್ಯ ಎಸಗಿರುವ ಅಮಾನುಷ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ದಲಿತ ಯುವಕನನ್ನು ಹಸುವಿಗೆ ಕಟ್ಟಿ ಮೆರವಣಿಗೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಕಳೆದ ವಾರ, ಮಳವಳ್ಳಿ ತಾಲ್ಲೂಕಿನ ಹಣಕೊಳ ಗ್ರಾಮದ ಸುರೇಶ್ ವರ್ಧನ್ (32) ಹಲ್ಲೆಗೊಳಗಾದ ಯುವಕ. ಆರೋಪಿಗಳಾದ ದುಗ್ಗನಹಳ್ಳಿಯ ರಾಜು, ಹಣಕೊಳ ಗ್ರಾಮದ ಸುಂದರಮ್ಮ, ಮಳವಳ್ಳಿಯ ಮಲ್ಲಯ್ಯ ಮತ್ತು ಗಿರೀಶ್ ಎಂಬುವವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದೇವೆ” ಎಂದು ಡಿವೈಎಸ್ಪಿ ಲಕ್ಷ್ಮಿ ನಾರಾಯಣ್ ತಿಳಿಸಿದ್ದಾರೆ.

ವಾಸ್ತವವಾಗಿ ನಡೆದಿದ್ದೇನು?

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಕೊರೊನಾ ತಂದೊಡ್ಡಿದ ಸಂಕಷ್ಟದಿಂದಾಗಿ ತನ್ನ ಹಳ್ಳಿಗೆ ಮರಳಿದ್ದರು. ಹಳ್ಳಿಯಲ್ಲಿಯೇ ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸಬೇಕೆಂದುಕೊಂಡಿದ್ದರು. ಪರಿಚಯಸ್ಥರೊಬ್ಬರಿಂದ ಹಸು ಮಾರಾಟ ಮಾಡುತ್ತಿದ್ದ ರಾಜು ಅವರ ಪರಿಚಯವಾಗಿ, ಅವರ ಹತ್ತಿರ ಹಸು ಕೊಳ್ಳಲು ಮುಂದಾಗಿದ್ದರು. ಈ ಕುರಿತು ಸುರೇಶ್ ನಾನುಗೌರಿ ಜೊತೆ ತಮಗಾದ ಅನ್ಯಾಯವನ್ನು ಹಂಚಿಕೊಂಡಿದ್ದಾರೆ.

ಹಲ್ಲೆಗೊಳಗಾಗಿದ್ದ ಸುರೇಶ್ ಅವರು ವಿವರಿಸುವಂತೆ, ‘ಹಸು ವ್ಯಾಪಾರಿ ದುಗ್ಗನಹಳ್ಳಿ ರಾಜು, ಜೆರ್ಸಿ ಹಸುವೊಂದು ದಿನಕ್ಕೆ 15 ಲೀಟರ್ ಹಾಲು ಕೊಡುತ್ತದೆ ಎಂದು ನಂಬಿಸಿ 44 ಸಾವಿರ ರೂಗಳಿಗೆ ಹಸುವನ್ನು ಮಾರಿದ್ದರು. ಹದಿನೈದು ದಿನಗಳಾದರೂ ಹಸು ದಿನಕ್ಕೆ 3 ಲೀಟರ್ ಅಷ್ಟೇ ಹಾಲು ಕೊಡುತ್ತಿದ್ದರಿಂದ ರಾಜು ಅವರಿಗೆ ಫೋನ್ ಮಾಡಿ ಮೋಸ ಮಾಡಿದ್ದೀರಿ ಎಂದು ಬೇಸರ ತೋಡಿಕೊಂಡಿದ್ದೆ. ನಂತರ ರಾಜು ಇನ್ನೊಂದು ಹಸುವನ್ನು ಕಡಿಮೆ ಬೆಲೆಗೆ ನೀಡುವುದಾಗಿ ತಿಳಿಸಿ 14 ಸಾವಿರ ರೂಗಳಿಗೆ ಗೊಡ್ಡು ಹಸುವನ್ನು ನನಗೆ ಮಾರಿದ್ದರು. ಪಶುವೈದ್ಯರಿಗೆ ಹಸುವನ್ನು ತೋರಿಸಿದಾಗ ಹಸು ಕರು ಹಾಕುವುದಿಲ್ಲ ಎಂಬುದು ತಿಳಿಯಿತು. ಎರೆಡೆರಡು ಬಾರಿ ಮೋಸ ಮಾಡಿದ್ದ ರಾಜು ಅವರ ಬಗ್ಗೆ ಅವರ ಪರಿಚಯಸ್ಥರಿಗೆ ತಿಳಿಸಿದ್ದೆ. ಈ ಎಲ್ಲಾ ಘಟನೆಗಳ ನಂತರ ರಾಜು ಅಕ್ಟೋಬರ್ 12ನೇ ತಾರೀಖಿನಂದು ಊರಿಗೆ ಬಂದು ಇನ್ನೊಂದು ಹಸುವನ್ನು ಹೊಡೆದುಕೊಂಡು ಹೋಗಲು ತಿಳಿಸಿದ್ದರು.

ಇದನ್ನೂ ಓದಿ: ಹಾಕಿ ತಂಡದಲ್ಲಿ ದಲಿತರು ಹೆಚ್ಚು ಇದ್ದದ್ದೇ ಸೋಲಿಗೆ ಕಾರಣ; ಜಾತಿ ನಿಂದನೆಗೆ ತುತ್ತಾದ ಸ್ಟಾರ್‌ ಆಟಗಾರ್ತಿ

ಅದರಂತೆ ನನ್ನ ಸ್ನೇಹಿತನೊಂದಿಗೆ ಅಕ್ಟೋಬರ್ 12ನೇ ತಾರೀಖಿನಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅವರ ಮನೆಯ ಹತ್ತಿರ ಹೋಗಿದ್ದೆ. ಆದರೆ ರಾಜು ಅವರ ಮನೆಯಲ್ಲಿ ಯಾರು ಇರಲಿಲ್ಲ. ರಾಜು ಅವರು ಗದ್ದೆಯ ಬಳಿ ಇದ್ದಾರೆ ಎಂದು ಅವರ ಮನೆಯ ಹತ್ತಿರದ ಸಂಬಂಧಿಗಳೊಬ್ಬರು ತಿಳಿಸಿದರು. ಹೇಗೂ ಹಸು ಹೊಡೆದುಕೊಂಡು ಹೋಗಲು ತಿಳಿಸಿದ್ದರಿಂದ ಅವರ ಮನೆಯಲ್ಲಿದ್ದ ಹಸುವನ್ನು ಹೊಡೆದುಕೊಂಡು ರಾಜು ಅವರಿದ್ದ ಗದ್ದೆಯ ಬಳಿಗೆ ಹೊರಟಿದ್ದೆ. ನನ್ನ ಸ್ನೇಹಿತ ಹಿಂದೆ ಗಾಡಿಯಲ್ಲಿ ಬರುತ್ತಿದ್ದ. ಆದರೆ ರಾಜು ಅವರ ಗದ್ದೆಗೆ ಹೋಗುವ ಮೊದಲೇ ಅವರು ಪೂರ್ವ ನಿಯೋಜಿತವಾಗಿ ಕಳ್ಳ, ಕಳ್ಳ ಎಂದು ಕೂಗುತ್ತಾ ರಾಜು ಮತ್ತವರ ಸ್ನೇಹಿತರು ನನ್ನನ್ನು ಸುತ್ತುವರೆದು ಹಸು ಕದಿಯುತ್ತಿದ್ದಾನೆ ಎಂದು ಆರೋಪಿಸಿ ಥಳಿಸಿದರು. ನನ್ನ ಕೈಕಾಲುಗಳನ್ನು ಕಟ್ಟಿ ಬಾವಿಗೆ ಎಸೆದು ಕೊಲ್ಲಲು ಪ್ರಯತ್ನಿಸಿದಾಗ, ರಾಜು ಅವರನ್ನು ಕಾಲಿಡಿದುಕೊಂಡು ಸಾಯಿಸಬೇಡಿ ಎಂದು ಬೇಡಿಕೊಂಡೆ. ಆಗ ಜಾತಿನಿಂದನೆ ಮಾಡಿ ನನ್ನ ಕೈಗಳನ್ನು ಹಸುವಿನ ಹಗ್ಗಕ್ಕೆ ಕಟ್ಟಿ ಮೆರವಣಿಗೆ ಮಾಡಿದರು. ಇದನ್ನೆಲ್ಲಾ ಅಲ್ಲಿದ್ದವರು ವೀಡಿಯೋ ಮಾಡುತ್ತಿದ್ದರು. ನಂತರ ನನ್ನನ್ನು ಅವರೇ ಕಳ್ಳನೆಂದು ಪೊಲೀಸರಿಗೆ ಒಪ್ಪಿಸಿದರು. ನಂತರ ರಾಜು ಅವರು ತನ್ನ ಸ್ನೇಹಿತರೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜಿ ಸಂಧಾನ ನಡೆದು ಕೊನೆಗೆ ನನ್ನನ್ನು ಬಿಡುಗಡೆ ಮಾಡಿದರು ಎಂದು ಸುರೇಶ್ ಇಡೀ ಘಟನೆಯನ್ನು ವಿವರಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ರಾಜು ಮತ್ತವರ ಸ್ನೇಹಿತರು ಮಾಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಆ ವೀಡಿಯೋದಿಂದಾಗಿ ನನ್ನ ಇಡೀ ಕುಟುಂಬ ಊರಿನಲ್ಲಿ ತಲೆತಗ್ಗಿಸುವಂತಾಯಿತು. ಮಾಡಿಲ್ಲದ ತಪ್ಪಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ನೋವು ಅನುಭವಿಸಿದೆ. ನಿಜವಾಗಿಯೂ ನಡೆದದ್ದೇನು ಎಂಬುದನ್ನು ನನ್ನ ಸಂಬಂಧಿಕರು ಹಾಗೂ ನಮ್ಮ ಸಮುದಾಯದ ಮುಖಂಡರಿಗೆ ವಿವರಿಸಿದೆ. ಆಗ ನಮ್ಮ ಸಮುದಾಯದ ಹಿರಿಯರ ಸಲಹೆ ಮೇರೆಗೆ ಸ್ನೇಹಿತರೊಟ್ಟಿಗೆ ಸೇರಿ ಪೊಲೀಸ್ ಠಾಣೆಯಲ್ಲಿ ರಾಜು ಮತ್ತು ಅವರ ಸ್ನೇಹಿತರ ವಿರುದ್ಧ ದೂರು ನೀಡಿದ್ದೇನೆ ಎಂದು ಸುರೇಶ್ ತಿಳಿಸಿದರು.

”ಪೊಲೀಸ್‌ ಠಾಣೆಗೆ ದೂರು ದಾಖಲಿಸಲು ಹೋದಾಗ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್‌ ಕೂಡ ಆರೋಪಿಗಳ ಪರವಾಗಿ ಮಾತನಾಡಿದ್ದು, ನೀನು ದೂರು ದಾಖಲಿಸುವುದಾದರೆ, ನಿನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ದೂರು ದಾಖಲಿಸುತ್ತೇನೆ ಎಂದು ಹೆದರಿಸಿದರು. ನಂತರ ನಮ್ಮ ಸಮುದಾಯದವರ ಸಹಾಯದೊಂದಿಗೆ ಡಿವೈಎಸ್‌ಪಿ ಅವರನ್ನು ಸಂಪರ್ಕಿಸಿ, ಆದ ಘಟನೆಯನ್ನು ವಿವರಿಸಿದ ನಂತರ, ವಿಡಿಯೋ ವೈರಲ್ ಆಗಿರುವುದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾದ ನಂತರವಷ್ಟೇ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡರು” ಎಂದು ಸುರೇಶ್ ತಿಳಿಸಿದ್ದಾರೆ.

‘ನಾನು ಮಾಡದ ತಪ್ಪಿಗೆ ನನ್ನ ಮಕ್ಕಳು ತಲೆ ತಗ್ಗಿಸುವಂತಾಗದಿರಲಿ. ಜಾತಿ ಹೆಸರನಲ್ಲಿ ನಡೆಯುತ್ತಿರುವ ಈ ಕ್ರೌರ್ಯ ಇಲ್ಲಿಗೆ ಕೊನೆಗೊಳ್ಳಲಿ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಿ’ ಎನ್ನುವ ಸುರೇಶ್ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ವಂದನಾ ಕಟಾರಿಯಗೆ ಜಾತಿನಿಂದನೆ: ಜಾತಿಗ್ರಸ್ತ ಮನಸ್ಥಿತಿಯ ಯುವಕರಿಗೊಂದು ಪ್ರಶ್ನೆ..

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಮಳವಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಎಂ.ವಿ ಕೃಷ್ಣರವರು, “ಮಳವಳ್ಳಿ ತಾಲ್ಲೂಕಿನ ಹಳ್ಳಿಗಳಲ್ಲಿ ಇಂದಿಗೂ ಪರಿಶಿಷ್ಟ ಸಮುದಾಯದ ಜನರಿಗೆ ಕ್ಷೌರ ಮಾಡುವುದಿಲ್ಲ, ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಪೇಪರ್ ಲೋಟಗಳಲ್ಲಿ ಟೀ ಕೊಡುವ ಸಂಸ್ಕೃತಿ ಇದೆ. ಈ ಕುರಿತು ಹಲವು ಹೋರಾಟಗಳನ್ನು ನಡೆಸಿದ್ದೇವೆ. ಪರಿಸ್ಥಿತಿ ಇಂದಿಗೂ ಹೀಗೆ ಮುಂದುವರೆದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣದಲ್ಲಿ ಸಂತ್ರಸ್ತನನ್ನೇ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಲಾಗಿದೆ. ಆ ನಂತರ ರಾಜೀ ಮಾಡಿಸಲಾಗಿದೆ. ಆದರೆ ಸಂತ್ರಸ್ತ ದೂರು ನೀಡಿ ವಾರವಾದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.

ಈ ದೇಶದಲ್ಲಿ ವ್ಯಕ್ತಿಯೊಬ್ಬ ದಲಿತ ಎಂಬ ಕಾರಣಕ್ಕೆ ಅವನ ಮೇಲೆ ದೌರ್ಜನ್ಯ ಎಸಗುವುದು, ದಲಿತ ಮಹಿಳೆ ಎಂಬ ಕಾರಣಕ್ಕೆ ಅತ್ಯಾಚಾರ ಎಸಗುವುದು, ಜಾತಿಯ ಹೆಸರಿನಲ್ಲಿ ಅವಹೇಳನ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಇಡೀ ಕುಟುಂಬಗಳ ಮೇಲೆ ಹಲ್ಲೆ ನಡೆಸುವುದು ತೀರಾ ಸಾಮಾನ್ಯ ಎನ್ನುವಂತಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಇಂತಹ ಘಟನೆಗಳು ಕೊನೆಗೊಳ್ಳದಿರಲು ಒಂದು ಕಾರಣವಾಗಿದೆ. ಈ ಬಗ್ಗೆ ಸರ್ಕಾರಗಳು ಕಣ್ಣಿದ್ದು ಕುರುಡರಂತೆ, ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿರುವುದು ಏಕೆ? ನೊಂದ ಜನರೇ ಕಾನೂನು ಕೈಗೆತ್ತುಕೊಳ್ಳುವ ಮೊದಲು ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಈ ರೀತಿಯ ಜಾತಿ ದೌರ್ಜನ್ಯಗಳಿಗೆ ಕೊನೆ ಹಾಡಲಿ..

ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಇಂಡಸ್ಟ್ರಿಯಿಂದ ಹೊರ ಹಾಕಬೇಕು ಎಂದ ನಟಿ; ಪ್ರಕರಣ ದಾಖಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights