“2-ದಿನಗಳ ಲಾಕ್‌ಡೌನ್?”: ದೆಹಲಿ ಮಾಲಿನ್ಯ ತಡೆಗೆ ತುರ್ತು ಯೋಜನೆಗಾಗಿ ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ!

ದೆಹಲಿ ಮತ್ತು ಸುತ್ತಲಿನ ನಗರ ಪ್ರದೇಶಗಳು ಕಳೆದ ಒಂದು ವಾರದಿಂದ ವಾಯು ಮಾಲಿನ್ಯಕ್ಕೆ ತುತ್ತಾಗಿವೆ. ದೆಹಲಿ ಮಾಲಿನ್ಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, “ಮಾಲಿನ್ಯ ತಡೆಗೆ ತುರ್ತು ಕ್ರಮಗಳನ್ನು ಹೇಗೆ ತೆಗೆದುಕೊಳ್ಳುತ್ತಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ. ಎರಡು ದಿನಗಳ ಲಾಕ್‌ಡೌನ್‌ ಬಗ್ಗೆ ಯೋಜಿಸಿದ್ದೀರಾ? ಎಂದು ಕೇಳಿದೆ.

“ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ನೀವು ನೋಡುತ್ತೀರಿ… ನಮ್ಮ ಮನೆಗಳಲ್ಲಿಯೂ ಸಹ ನಾವು ಮಾಸ್ಕ್‌ಗಳನ್ನು ಧರಿಸುತ್ತಿದ್ದೇವೆ. ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡುವ ನಿಮ್ಮ ಯೋಜನೆ ಏನು?” ಎಂದು  ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಇಂದು ತುರ್ತು ಸಭೆ ನಡೆಯಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

“ಸರ್ಕಾರಗಳ (ಕೇಂದ್ರ ಅಥವಾ ರಾಜ್ಯಗಳ) ಜವಾಬ್ದಾರಿಯನ್ನು ಮೀರಿ ಸಮಸ್ಯೆಯನ್ನು ನೋಡಬೇಕಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ವಾತಾವರಣವನ್ನು ಉತ್ತಮಗೊಳಿಸಲು ಏನನ್ನಾದರೂ ಮಾಡಬೇಕಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ದೆಹಲಿಯ ಗಾಳಿಯನ್ನು ಉಸಿರಾಡುವುದು “ದಿನಕ್ಕೆ 20 ಸಿಗರೇಟ್ ಸೇದಿದಂತಹ ಪರಿಸ್ಥಿತಿ” ಇದೆ ಎಂದು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. “ಪರಿಸ್ಥಿತಿಯ ಗಂಭೀರತೆಯನ್ನು ನಾವು ಒಪ್ಪುತ್ತೇವೆ” ಎಂದು ಸರ್ಕಾರ ಹೇಳಿದೆ.

ದೆಹಲಿಯ ಹದಗೆಡುತ್ತಿರುವ ಗಾಳಿಯ ಗುಣಮಟ್ಟವು ಸ್ಥಳೀಯರು ಮತ್ತು ಅಧಿಕಾರಿಗಳಲ್ಲಿ ಅತ್ಯಂತ ಕಳವಳವನ್ನು ಉಂಟುಮಾಡಿದೆ.

ವಾಯುಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳಲ್ಲಿ ಒಂದಾದ ಹುಲ್ಲು ಸುಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ ಕೇಂದ್ರ ಸರ್ಕಾರ, ಪಂಜಾಬ್ ಮೇಲೆ ಹೊಣೆಗಾರಿಕೆಯನ್ನು ಹೊರಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯ 4 ಗಂಟೆಗಳ ಭೇಟಿಗಾಗಿ 23 ಕೋಟಿ ರೂ. ಖರ್ಚು ಮಾಡುತ್ತಿದೆ ಮ.ಪ್ರದೇಶ ಸರ್ಕಾರ!

“ನಾವು ಹುಲ್ಲು ಸುಡುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಕಳೆದ ಐದಾರು ದಿನಗಳಿಂದ ಪಂಜಾಬ್‌ನಲ್ಲಿ ಉರಿಯುತ್ತಿರುವ ದಳ್ಳುರಿಯಿಂದಾಗಿ ಮಾಲಿನ್ಯವು ಹೆಚ್ಚಾಗುತ್ತಿದೆ. ಪಂಜಾಬ್‌ ರೈತರು ಹುಲ್ಲನ್ನು ಸುಡುತ್ತಿದ್ದಾರೆ. ರಾಜ್ಯ ಸರ್ಕಾರವು ಅದನ್ನು ತಡೆಯುವ ಅಗತ್ಯವಿದೆ” ಎಂದು ಕೇಂದ್ರ ಹೇಳಿದೆ…

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, “ರೈತರಿಂದಲೇ ಮಾಲಿನ್ಯವಾಗಿದೆ ಎಂದು ಏಕೆ ಬಿಂಬಿಸುತ್ತಿದ್ದೀರಿ? ಇದು ಕೇವಲ ಶೇಕಡಾವಾರು ಮಾಲಿನ್ಯವಾಗಿದೆ. ಉಳಿದವುಗಳ ಬಗ್ಗೆ ಏನು ಹೇಳುತ್ತೀರಿ? ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ನೀವು ಏನು ಮಾಡುತ್ತಿದ್ದೀರಿ? ನೀವೇ ಹೇಳಿ? ನಿಮ್ಮ ಸರಿಯಾದ ಯೋಜನೆ ಏನು… ಇದು ಕೇವಲ 2-3 ದಿನಗಳ ಸಂಗತಿ ಅಲ್ಲ” ಎಂದು ಹೇಳಿದ್ದಾರೆ.

ರೈತರಿಗೆ ಪ್ರೋತ್ಸಾಹಧನ ಸಿಗದಿದ್ದರೆ ಬದಲಾವಣೆ ಅಸಂಭವ. ಸಬ್ಸಿಡಿಯ ಹೊರತಾಗಿಯೂ, ಅನೇಕ ರೈತರಿಗೆ ಹುಲ್ಲು ಸುಡುವ ಯಂತ್ರಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಗಮನಸೆಳೆದ್ದಾರೆ.

“ರೈತರನ್ನು ಬಗ್ಗು ಬಡಿಯುವುದು ಎಲ್ಲರಿಗೂ ಫ್ಯಾಶನ್ ಆಗಿದೆ. ನೀವು ಪಟಾಕಿಯನ್ನು ನಿಷೇಧಿಸಿದ್ದೀರಿ. ಆದರೆ, ಕಳೆದ 5-6 ದಿನಗಳಿಂದ ಏನಾಗುತ್ತಿದೆ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.

ಆದರೆ, ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಾವು ಕೇವಲ ರೈತರು ಎಂದು ಹೇಳುತ್ತಿಲ್ಲ. ನಾವು ಆ ರೀತಿ ಎಂದಿಗೂ ಹೇಳಲಿಲ್ಲ” ಎಂದು ಸ್ಪಷ್ಟಪಡಿಸಿದರು.

ದೆಹಲಿ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ ನ್ಯಾಯಾಲಯವು, “ನೀವು ಎರಡು ವಾರಗಳ ಹಿಂದೆ ಎಲ್ಲಾ ಶಾಲೆಗಳನ್ನು ತೆರೆದಿದ್ದೀರಿ.. ಎಲ್ಲಾ ಮಕ್ಕಳು ತಮ್ಮ ಶ್ವಾಸಕೋಶವನ್ನು ಈ ಅಪಾಯಕಾರಿ ಗಾಳಿಗೆ ಒಡ್ಡುತ್ತಿದ್ದಾರೆ.” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ದೀಪಾವಳಿಯಂದು ಪಟಾಕಿಗಳ ನಿಷೇಧವನ್ನು ವ್ಯಾಪಕವಾಗಿ ಉಲ್ಲಂಘಿಸಲಾಗಿತ್ತು. ಹೀಗಾಗಿ, ದೆಹಲಿ ಮತ್ತು ಹತ್ತಿರದ ನಗರಗಳಲ್ಲಿ ಗಾಳಿಯ ಗುಣಮಟ್ಟವು ಕಳೆದ ವಾರ ಹದಗೆಟ್ಟಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಹುಲ್ಲು ಸುಡುವುದು ಸಹ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: ವಡೋದರಾ: ಮೋದಿ ತವರಿನ ಬೀದಿಯಲ್ಲಿ ಮಾಂಸಾಹಾರ ಪ್ರದರ್ಶಿಸದಂತೆ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights