ದುರಂತ ಅಪಘಾತ ಪ್ರಕರಣ: 10 ದಿನಗಳ ಬಳಿಕ ಪ್ರಕರಣ ಬೇಧಿಸಿದ ಪೊಲೀಸರು!

ಬಸ್ ಚಾಲಕನ ಹಿಟ್ ಅಂಡ್ ರನ್​ನಿಂದಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂರಿನಲ್ಲಿ ನಡೆದಿತ್ತು. ಆದರೆ, ಅಪಘಾತ ಮಾಡಿವರು ಯಾರು ಎಂಬುದು ತಿಳಿದು ಬಂದಿರಲಿಲ್ಲ. ಪ್ರಕರಣದ ಬೆನ್ನತ್ತಿದ ಪೊಲೀಸರು, ಇದೀಗ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ಬಂಧಿಸಿದ್ದಾರೆ.

ಇಬ್ಬರು ಯುವಕರು ಹಟ್ಟಿಯಲ್ಲಿ ತಮ್ಮ ಸ್ನೇಹಿತನ ಬರ್ತಡೇ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ವಾಪಸ್ ತೆರಳುತ್ತಿದ್ದರು. ಈ ವೇಳೆ,ಲಿಂಗಸೂರಿನಲ್ಲಿರುವ ಕಲಬುರ್ಗಿ-ಬೆಂಗಳೂರು ಹೈವೇಯಲ್ಲಿ ಅವರ ಬೈಕ್‌ಗೆ ವಾಹನವೊಂದು ಡಿಕ್ಕಿ ಹೊಡೆದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತಪಟ್ಟವರನ್ನು ನಾಗೇಶ್ ಹಾಗೂ ದೇವರಾಜ್ ಎಂದು ಗುರುತಿಸಲಾಗಿತ್ತು. ಅವರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್‌ನ ಚಾಲಕ ಗುರುತು ಸಿಗಬಾರದು ಎಂದು ಬಸ್‌ಗೆ ರೀ-ಪೇಂಟ್ ಮಾಡಿದ್ದರು.

ಯುವಕರಿಗೆ ಅಪಘಾತ ಮಾಡಿದವರು ಯಾರು ಎಂದು ಪತ್ತೆಯಾಗಿರಲಿಲ್ಲ. ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸುಮಾರು 100ಕ್ಕೂ ಹೆಚ್ಚು ಬಸ್ಸು, ಲಾರಿಗಳ ತಪಾಸಣೆ ನಡೆಸಿದರೂ ಆರೋಪಿಗಳು ಪತ್ತೆಯಾಗಿರಲಿಲ್ಲ.

ಬಳಿಕ ಸ್ಥಳದಲ್ಲಿ ಸಿಕ್ಕ ಕೆಲವು KSRTC ಬಸ್​ನ ಅವಶೇಷಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಹತ್ತು ದಿನಗಳ ಬಳಿಕ ಅಪಘಾತ ಎಸಗಿದ್ದ ಕೆ‌ಎಸ್‌ಆರ್‌ಟಿಸಿ ಬಸ್ ಪತ್ತೆಯಾಗಿದೆ.

ಕಲಬುರಗಿ ಜಿಲ್ಲೆಯ ಕಾಳಗಿ ಡಿಪೋದ ಈ ಬಸ್​​, ಲಿಂಗಸ್ಗೂರಿನ ಬಸ್ ನಿಲ್ದಾಣದಲ್ಲಿ ಎಂಟ್ರಿ ಮಾಡಿ ತೆರಳಿತ್ತು. ಹಾಗೆ ತೆರಳುವಾಗ ನಿಲ್ದಾಣದಲ್ಲಿ ಬಸ್​​ನ್ನ ಚಾಲಕ ಹಿಮ್ಮುಖವಾಗಿ ನಿಲ್ಲಿಸಿದ್ದ. ಕಾರಣ ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿತ್ತು. ಮೊದಲು ಇದನ್ನ ನಿಲ್ದಾಣದಲ್ಲಿರೋ‌ ಸಿ.ಸಿ. ಕ್ಯಾಮರಾಗಳ ಮೂಲಕ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಸಿಂಧನೂರು, ಸಿರಗುಪ್ಪ, ಹೀಗೆ ಬೆಂಗಳೂರು ಮಾರ್ಗದಲ್ಲಿ ಬರುವ ನಿಲ್ದಾಣಗಳಲ್ಲಿ ಎಲ್ಲೂ ಆತ ಎಂಟ್ರಿ ಮಾಡಿಸಿರಲಿಲ್ಲ. ಅದಲ್ಲದೇ ಆತನ ಬಸ್ ಜಖಂಗೊಂಡಿರೋ ವಿಡಿಯೋಗಳು ಚಳ್ಳಕೆರೆ ಚೆಕ್ ಪೋಸ್ಟ್ ಬಳಿ ಸಿ.ಸಿ. ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಆದರೂ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಅದರ ಚಾಲಕ ಬಸ್ಸನ್ನ ಬೆಂಗಳೂರು ತಲುಪಿಸಿದ್ದ. ಅಲ್ಲದೇ ಬೆಂಗಳೂರಿನ ಕೆಂಗೇರಿಯಲ್ಲಿರೋ ಖಾಸಗೀ ಗ್ಯಾರೇಜೊಂದರಲ್ಲಿ ಡ್ಯಾಮೇಜ್‌ ಆದ ಬಸ್ ರಿಪೇರಿ ಮಾಡಿಸಿದ್ದ. ರೀ ಪೇಂಟ್ ನಂತರ ಡಿಪೋಗೆ ತಂದು ಬಸ್ ನಿಲ್ಲಿಸಿರೋದು ತನಿಖೆಯಿಂದ ತಿಳಿದುಬಂದಿದೆ ಅಂತಾ ಸರ್ಕಲ್​​​ ಇನ್ಸ್​ಪೆಕ್ಟರ್ ಮಹಾಂತೇಶ್ ಸಜ್ಜನ್ ತಿಳಿಸಿದ್ದಾರೆ.

15 ದಿ‌ನಗಳ ಕಾಲ 2000 ಕಿ.ಮೀ ಸುತ್ತಾಡಿ ಬಸ್ ಚಾಲಕ ಆರೋಪಿ ಶ್ರೀಕಾಂತ್​ನನ್ನು ವಶಕ್ಕೆ ಪಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.