ನಾಗಾಲ್ಯಾಂಡ್: ದಂಗೆಕೋರರ ವಿರುದ್ದ ಸೇನಾ ಗುಂಡಿನ ದಾಳಿ; 13 ಮಂದಿ ಅಮಾಯಕ ಗ್ರಾಮಸ್ಥರ ಹತ್ಯೆ
ದಂಗೆಕೋರರ ವಿರುದ್ಧದ ಕಾರ್ಯಾಚರಣೆಯ ವೇಳೆ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ 13 ಮಂದಿ ಗ್ರಾಮಸ್ಥರು ಸಾವನ್ನಪ್ಪಿರುವ ಘಟನೆ ನಾಗಾಲ್ಯಾಂಡ್‌ನ ಮಯನ್ಮಾರ್ ಗಡಿಯ ಬಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ. ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ನಡೆದ ನಾಗರಿಕರ ಹತ್ಯೆಗಳ ಹೊಣೆಗಾರಿಕೆಯನ್ನು ಸೇನೆ ಹೊರುತ್ತಿದೆ ಎಂದು ದಿಮಾಪುರ್ ಮೂಲದ 3 ಕಾರ್ಪ್ಸ್ ಡಿಸೆಂಬರ್ 5 ರ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಿಂದ ನೇಮಿಸಲ್ಪಟ್ಟ ವಿಶೇಷ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.
ಮ್ಯಾನ್ಮಾರ್ ಗಡಿಯಲ್ಲಿರುವ ಮೋನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ದಂಗೆಕೋರರ ವಿರುದ್ಧದ ಕಾರ್ಯಾಚರಣೆಗೆ ಸಜ್ಜಾಗಿದ್ದವು. ದಂಗೆಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ ಓಟಿಂಗ್ ಗ್ರಾಮದ ಬಳಿ ದಾಳಿ ನಡೆಸಿದ್ದರು. ಆದರೆ ತಿರು-ಓಟಿಂಗ್ ರಸ್ತೆಯಲ್ಲಿ ಗ್ರಾಮಸ್ಥರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಪಟೇಲ್; ಭಾರತದ ವಿರುದ್ಧ ಸೃಷ್ಟಿಯಾಯ್ತು ಇತಿಹಾಸ!
ಗುಂಡಿನ ದಾಳಿಯಿಂದ ಆಕ್ರೋಶಗೊಂಡ ಸ್ಥಳೀಯರು ಭದ್ರತಾ ಪಡೆಗಳನ್ನು ಸುತ್ತುವರೆದರು. ಹೀಗಾಗಿ ಆತ್ಮ ರಕ್ಷಣೆಗಾಗಿ ಗುಂಪಿನ ಮೇಲೆ ಭದ್ರತಾ ಪೆಗಳು ಗುಂಡು ಹಾರಿಸಿದ್ದರು ಇದರಿಂದ ಕನಿಷ್ಠ ಏಳು ಗ್ರಾಮಸ್ಥರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳ ಮೂರು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
“ಬಂಡುಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಆಧಾರದ ಮೇಲೆ, ತಿರು, ಸೋಮ ಜಿಲ್ಲೆ, ನಾಗಾಲ್ಯಾಂಡ್ ಪ್ರದೇಶದಲ್ಲಿ ನಿರ್ದಿಷ್ಟ ಕಾರ್ಯಾಚರಣೆಯನ್ನು ನಡೆಸಲು ಯೋಜಿಸಲಾಗಿತ್ತು. ಆದರೆ, ಅದರ ನಂತರ ನಡೆದ ಘಟನೆ ಬಗ್ಗೆ ತೀವ್ರವಾಗಿ ವಿಷಾದಿಸುತ್ತವೆ. ಈ ದುರದೃಷ್ಟಕರ ಪ್ರಾಣಹಾನಿಯ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ನಾಗಾಲ್ಯಾಂಡ್‌ನ ದಿಮಾಪುರ್ ಮೂಲದ 3 ಕಾರ್ಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.
Anguished over an unfortunate incident in Nagaland’s Oting, Mon. I express my deepest condolences to the families of those who have lost their lives. A high-level SIT constituted by the State govt will thoroughly probe this incident to ensure justice to the bereaved families.
— Amit Shah (@AmitShah) December 5, 2021
ಘಟನೆ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ನಾಗಾಲ್ಯಾಂಡ್‌ನ ಓಟಿಂಗ್‌ನಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ದುಃಖವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಎಸ್‌ಐಟಿ ಈ ಘಟನೆಯನ್ನು ಕೂಲಂಕಷವಾಗಿ ತನಿಖೆ ನಡೆಸಿ ನ್ಯಾಯ ಒದಗಿಸುತ್ತದೆ” ಎಂದಿದ್ದಾರೆ.
ಇದನ್ನೂ ಓದಿ:ತಾಯಿ-ಮಗಳ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ; ಎಎಪಿ ಶಾಸಕಿಯ ಕೈವಾಡ?

