ಪ್ರಾಕ್ಟಿಕಲ್ ಪರೀಕ್ಷೆ ನೆಪ: ವಿದ್ಯಾರ್ಥಿನಿಯರನ್ನು ರಾತ್ರಿ ಶಾಲೆಯಲ್ಲೇ ಉಳಿಸಿಕೊಂಡು ಕಿರುಕುಳ

10ನೇ ತರಗತಿಯಲ್ಲಿ ಓದುತ್ತಿದ್ದ 17 ವಿದ್ಯಾರ್ಥಿನಿಯರನ್ನು ಪ್ರಾಯೋಗಿಕ ಪರೀಕ್ಷೆಯ ತಯಾರಿಗಾಗಿ ರಾತ್ರಿ ಶಾಲೆಯಲ್ಲೇ ಉಳಿಯಬೇಕು ಎಂದು ಉಳಿಸಿಕೊಂಡು, ಪ್ರಾಂಶುಪಾಲರು ಮತ್ತು ಅವರ ಸಹಚರರು ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸಿಬಿಎಸ್‌ಇ ಪಠ್ಯಕ್ರಮದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇರೊಂದು ಶಾಲೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯುತ್ತದೆ. ಅದಕ್ಕಾಗಿ, ಪರೀಕ್ಷೆಗೆ ತಯಾರಾಗಲು ರಾತ್ರಿಪೂರ್ತಿ ಶಾಲೆಯಲ್ಲೇ ಉಳಿಯಬೇಕು ಎಂದು 17 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಶಾಲೆಯಲ್ಲೇ ಉಳಿಸಿಕೊಂಡಿದ್ದಾರೆ. ಈ ವೇಳೆ, ವಿದ್ಯಾರ್ಥಿನಿಯರಿಗೆ ಮಾದಕವಸ್ತುವನ್ನು ನೀಡಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಅಲ್ಲದೆ, ಮರುದಿನ ವಿದ್ಯಾರ್ಥಿನಿಯರು ತಮ್ಮ ಮನೆಗೆ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ನವೆಂಬರ್ 18 ರಂದು ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಇಬ್ಬರು ಆರೋಪಿಗಳ ವಿರುದ್ದ ಸೆಕ್ಷನ್ 328 (ಮಹಿಳೆಯರ ನಮ್ರತೆಗೆ ಆಕ್ರೋಶ), 358 (ವಿಷದಿಂದ ನೋವುಂಟುಮಾಡುವುದು), 506 (ಕ್ರಿಮಿನಲ್ ಬೆದರಿಕೆ ) ಮತ್ತು POCSO ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಅಮಾನತುಗೊಳಿಸಿದ್ದೇವೆ” ಎಂದು ಮುಜಫರ್‌ನಗರ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಯಾದವ್ ಹೇಳಿದ್ದಾರೆ.

ಸ್ಥಳೀಯ ಶಾಸಕ ಪ್ರಮೋದ್ ಉತ್ವಾಲ್ ಅವರು ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಭೀಕರ ಮರ್ಯಾದಾಗೇಡು ಹತ್ಯೆ: ಗರ್ಭಿಣಿ ಸಹೋದರಿಯ ಶಿರಚ್ಛೆದ ಮಾಡಿ, ಸೆಲ್ಫಿ ತೆಗೆದುಕೊಂಡ ಬಾಲಕ; ಬಂಧನ

“ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ 16-17 ಹುಡುಗಿಯರನ್ನು ಶಾಲೆಯಲ್ಲಿ ರಾತ್ರಿ ಉಳಿದುಕೊಳ್ಳುವಂತೆ ಪ್ರಾಂಶುಪಾಲ ಯೋಗೇಶ್  ಹೇಳಿದ್ದಾರೆ. ಹುಡುಗಿಯರನ್ನು ಕಾಪಿ ಬರೆಯುವಂತೆ ಸೂಚಿಸಿದ್ದಾರೆ. ನಂತರ ಅವರನ್ನು ರಾತ್ರಿ ಶಾಲೆಯಲ್ಲೇ ಉಳಿದುಕೊಳ್ಳಲು ಹೇಳಿದ್ದಾರೆ. ಮರುದಿನವೂ ಹೆಚ್ಚಿನ ಪ್ರಾಕ್ಟಿಕಲ್ಸ್ ಇರುತ್ತದೆ ಎಂದು ತಿಳಿಸಿದ್ದಾರೆ. ನಂತರ, ಬಾಲಕಿಯರಿಗೆ ಖಿಚಡಿ ನೀಡಲಾಗಿದೆ. ಅದನ್ನು, ತಿಂದ ನಂತರ ಪ್ರಜ್ಞೆ ಕಳೆದುಕೊಂಡರು ಮತ್ತು ನಂತರ ಕಿರುಕುಳ ನೀಡಿದ್ದಾರೆ”ಎಂದು ದೂರುದಾರರು ಆರೋಪಿಸಿದ್ದಾರೆ.

“ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುವ 29 ವಿದ್ಯಾರ್ಥಿಗಳಿದ್ದಾರೆ. ಆದರೆ ಹುಡುಗಿಯರನ್ನು ಮಾತ್ರ ರಾತ್ರಿ ಉಳಿದುಕೊಳ್ಳಲು ಹೇಳಲಾಗಿದೆ. ಶಾಲೆಯಲ್ಲಿ ಉಳಿದುಕೊಂಡ ಮಕ್ಕಳಿಗೆ ನಿದ್ರಾಜನಕವನ್ನು ನೀಡಲಾಗಿದೆ” ಎಂದು ಮತ್ತೊಬ್ಬ ದೂರುದಾರರು ಹೇಳಿದ್ದಾರೆ.

ಪರೀಕ್ಷಾ ಮಂಡಳಿಯು ಪ್ರಾಯೋಗಿಕ ಪರೀಕ್ಷೆಗಳಿಗೆ ದಿನಾಂಕಗಳನ್ನು ಘೋಷಿಸಿದೆಯೇ ಎಂದು ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದಾಗ, ಒಬ್ಬ ವಿದ್ಯಾರ್ಥಿನಿ ತಮಗೆ ಪರೀಕ್ಷಾ ದಿನಾಂಕದ ಬಗ್ಗೆ ತಿಳಿದಿರಲಿಲ್ಲ. ಆದರೆ, ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸುವಂತೆ ಹೇಳಲಾಗಿತ್ತು ಎಂದು ಹೇಳಿದ್ದಾರೆ.

ಇದು ಯಾವ ಪ್ರಾಕ್ಟಿಕಲ್ ಎಕ್ಸಾಮ್ ಎಂದು ಕೇಳಿದಾಗ “ಹಿಂದಿ ಪ್ರಾಕ್ಟಿಕಲ್” ಎಂದು ಆಕೆ ಉತ್ತರಿಸಿದ್ದಾರೆ.

“ಪ್ರಾಕ್ಟಿಕಲ್ ಕೆ ಲಿಯೇ ಬುಲಾಯಾ ಥಾ (ನಮ್ಮನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಕರೆಯಲಾಗಿತ್ತು).” ನಂತರ, ಪ್ರಿನ್ಸಿಪಾಲರು ತಯಾರಿಸಿದ ಕಿಚಡಿಯನ್ನು ನಮಗೆ ನೀಡಲಾಗಿಯಿತು. ಅದನ್ನು ತಿಂದ ಬಳಿಕ ಪ್ರಜ್ಞಾಹೀನರಾದೆವು. ನಮಗೆ ಅವರು ಕಿರುಕುಳ ನೀಡಿದ್ದಾರೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದ್ದಾರೆ.

ಘಟನೆಯ ಬಗ್ಗೆ ಮಾತನಾಡದಂತೆ ನಮಗೆ ಒತ್ತಡ ಹೇರಲಾಗುತ್ತಿದೆ ಎಂದು ಬಾಲಕಿಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮತಾಂತರ ಆರೋಪ: ಶಾಲೆಯ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ; ವಿದ್ಯಾರ್ಥಿಗಳಲ್ಲಿ ಆತಂಕ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights