ಕೆಆರ್‌ ಪೇಟೆ: ದಲಿತರ ಮೇಲೆ ಮಾರಣಾಂತಿಕ ಹಲ್ಲೆ; 27 ಮಂದಿ ಸವರ್ಣೀಯರ ವಿರುದ್ದ FIR

ಹನುಮ ಜಯಂತಿ ಆಚರಣೆಯ ಸಂದರ್ಭದಲ್ಲಿ ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ನಡೆದಿದೆ.

ಡಿ.16ರಂದು ಘಟನೆ ನಡೆದಿದ್ದು, ಕೆ.ಆರ್‌.ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ನಿರಂಜನ್‌ ದೂರು ಸ್ವೀಕರಿಸಲು ನಿರಾಕರಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಲ್ಲಿ ದಲಿತರು ನೋವು ತೋಡಿಕೊಂಡಿದ್ದು, 27 ಮಂದಿಯ ಮೇಲೆ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ.

“ನಿಮ್ಮಿಂದ ದೇವಸ್ಥಾನ ಮಲಿನಗೊಂಡಿದೆ. ನಿಮ್ಮಂಥ ಜನರನ್ನು ಭೂಮಿ ಮೇಲೆ ಇರದಂತೆ ಸುಟ್ಟು ಹಾಕುತ್ತೇವೆ ಎಂದು ಡಿ.16ರ ರಾತ್ರಿ 11.30ರ ಸಮಯದಲ್ಲಿ ಸುಮಾರು 50-60 ಜನ ಸವರ್ಣೀಯರು ಮಾರಕಾಸ್ತ್ರಗಳಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಾದ ದೊಣ್ಣೆ, ಕೊಡಲಿ, ಪಂಚ್‌, ಕಲ್ಲು ಮತ್ತು ಇಟ್ಟಿಗೆಗಳೊಂದಿಗೆ ದಲಿತ ಕಾಲೋನಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಅಂಗವಿಕಲ ವ್ಯಕ್ತಿ ನಂಜಯ್ಯ ಎಂಬುವವರ ಮೇಲೆಯೂ ದಾಳಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ” ಎಂದು ದಲಿತರು ದೂರು ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ದಲಿತ ಯುವಕರಾದ ದರ್ಶನ್, ಸುನಿಲ್‌, ಲೋಹಿತ್‌, ಅಭಿಷೇಕ್‌, ವಿನಯ್‌, ಸಂಜಯ್‌, ಚಲವರಾಜು, ಭಾಗ್ಯಮ್ಮ, ಕುಮಾರ, ರಂಜಮ್ಮ, ಶೋಭಾ, ನಂಜಯ್ಯ ಅವರು ನೀಡಿದ ದೂರಿನ ಅನ್ವಯ 27 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಯಾರನ್ನೂ ಈವರೆಗೆ ಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಆರೋಪಿಗಳು: ಮಂಜುನಾಥ್‌ (ತಂದೆ: ತಮ್ಮೇಗೌಡ), ಶ್ರೀಧರ (ನಾಗೇಗೌಡ), ಸಂತೋಷ್ (ಕೃಷ್ಣೇಗೌಡ), ಶ್ರೀನಿವಾಸ ಎಚ್‌.ಟಿ. (ತಿಮ್ಮೇಗೌಡ), ರಂಜಿತ್‌ (ನಾರಾಯಣಗೌಡ), ಸತೀಶ (ರಾಮೇಗೌಡ), ಸ್ವಾಮಿ (ಸಹದೇವ), ಮುತ್ತು (ನಾರಾಯಣ), ರಜಿತ್‌ ಅಲಿಯಾಸ್ ಮಿಲ್ಟ್ರಿ (ನಾರಾಯಣಗೌಡ), ಮಂಜುನಾಥ (ತಮ್ಮೇಗೌಡ), ಮೋಹನ್ (ನಂಜೇಗೌಡ), ಮಂಜ (ಜಿಂಕೆ ಚಲುವಯ್ಯ), ಹರೀಶ ಮಡಗಿನಕುಡಿ, ವೆಂಕಟೇಶ್‌ ಹರಿಹರಪುರ, ರಾಘು (ವೆಂಕಟೇಶ್‌), ರವಿ ಅಲಿಯಾಸ್ ಚಡ್ಡಿ (ಮಂಜೇಗೌಡ), ಮಂಜ (ಜವರೇಗೌಡ), ಸುರೇಶ (ಕರಿಯಪ್ಪ), ಗುಂಡೂ (ವೆಂಕಟಾಚಲ), ಬಾನುಪ್ರಕಾಶ್ (ಗಂಗಾಧರ್‌), ಶಿವಕುಮಾರ (ಶ್ರೀನಿವಾಸ್), ದರ್ಶನ್‌ ಕುರೇನಹಳ್ಳಿ, ದೀಪು (ಶಂಕರ್‌ ಅಲಿಯಾಸ್‌ ರೇಷ್ಮೇ ಇಲಾಖೆ), ಮೋಹನ (ಶ್ರೀನಿವಾಸ್‌), ಪ್ರದೀಪ್ (ವೆಂಕಟೇಶ್), ಜಯಂತ್‌ (ಡಯಟ್ ಜಯರಾಮ್‌), ಗೌತಮ್ಮ ಅಲಿಯಾಸ್ ಕುಳ್ಳಯ್ಯ.

ಕೆ.ಆರ್‌.ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ನಿರ್ಲಕ್ಷ್ಯ

ಮೈಸೂರಿನ ವಕೀಲರಾದ ಎ.ಆರ್‌.ಕಾಂತರಾಜು ಅವರು ಘಟನೆ ಕುರಿತು ಮಾತನಾಡಿದ್ದು, “21ನೇ ಶತಮಾನ ಕಳೆದರೂ ಸಂವಿಧಾನದ ಆಶಯಗಳು ಈಡೇರಲಿಲ್ಲ. ದಲಿತರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಇಂದು ಹಸು ಕೊಲ್ಲಬಾರದೆಂದು, ಮೇಕೆ ಕೊಲ್ಲಬಾರದೆಂದು ಕಾನೂನು ತರುತ್ತಾರೆ. ಆದರೆ ಮನುಷ್ಯರನ್ನು ಹಸು ಮತ್ತು ಮೇಕೆಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಪೊಲೀಸರು ದಲಿತರಿಗೆ ರಕ್ಷಣೆ ನೀಡಬೇಕಾದ ಸ್ಥಳೀಯ ಪೊಲೀಸರೇ ದಬ್ಬಾಳಿಕೆ ನಡೆಸಿದ್ದಾರೆ” ಎಂದು ದೂರಿದ್ದಾರೆ.

“ಹರಿಹರಪುರ ಗ್ರಾಮದಲ್ಲಿ ಹದಿನೇಳು ವರ್ಷಗಳಿಂದ ಹನುಮ ಜಯಂತಿ ನಡೆಯುತ್ತಿದೆ. ಹನುಮ ಜಯಂತಿ ನಡೆಸುವಾಗ ದಲಿತರಿಂದ ಯಾವುದೇ ವಂತಿಕೆಯನ್ನು ಪಡೆಯುವುದಿಲ್ಲ. ದಲಿತರಿಂದ ಹತ್ತು ರೂಪಾಯಿ ವಂತಿಕೆ ಪಡೆದರೂ ನಾಳೆ ದಲಿತರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳಬೇಕಾಗುತ್ತದೆ ಎಂಬುದು ಇದಕ್ಕೆ ಕಾರಣ. ಇದುವರೆಗೂ ದಲಿತರು ಕದ್ದು ಮುಚ್ಚಿ ದೇವರಿಗೆ ನಮಸ್ಕಾರ ಮಾಡುತ್ತಿದ್ದರು. ಸವರ್ಣೀಯರನ್ನು ಎದುರು ಹಾಕಿಕೊಳ್ಳುವ ಶಕ್ತಿ ಇರಲಿಲ್ಲ. ಇದನ್ನು ಪ್ರಶ್ನಿಸಿ ದಲಿತರು ಈ ಬಾರಿ ದೇವಾಲಯ ಪ್ರವೇಶಿಸಿದ್ದರು. ಅದನ್ನು ನೋಡಿದ ಮೇಲ್ವರ್ಗದ ಜನ ದಲಿತರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.

ಕುಮಾರ್‌ ಎಂಬ ಯುವಕ ಈ ಘಟನೆಯನ್ನು ಸೆರೆ ಹಿಡಿಯಲು ಯತ್ನಿಸಿದಾಗ ಆತನ ಮೊಬೈಲ್‌ ಕೂಡ ಕಸಿದುಕೊಂಡು 20-30 ಜನ ಮನಬಂದಂತೆ ಥಳಿಸಿದ್ದಾರೆ. ಇಷ್ಟೆಲ್ಲ ಘಟನೆಯಾದ ಬಳಿಕ ಅಂದು ರಾತ್ರಿ 12.30ಕ್ಕೆ ಕೆ.ಆರ್‌.ಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ನಿರಂಜನ್‌ ಅವರನ್ನು ಭೇಟಿ ಮಾಡಿ ದೂರು ನೀಡಲು ಹೋಗುತ್ತಾರೆ. ಜನರಿಗೆ ರಕ್ಷಣೆ ಕೊಡಬೇಕಾದ ಇನ್‌ಸ್ಪೆಕ್ಟರ್‌ ನಿರಂಜನ್‌, “ದಲಿತರದ್ದು ಅತಿಯಾಯಿತು, ನಿಮ್ಮಂಥವರ ಕಂಪ್ಲೇಟ್‌ ತೆಗೆದುಕೊಳ್ಳಲು ಆಗಲ್ಲ. ನಿಮ್ಮಂಥವರ ಕಂಪ್ಲೇಟ್‌ ತೆಗೆದುಕೊಂಡು ಕೂತರೆ ದಿನವೆಲ್ಲ ತೆಗೆದುಕೊಳ್ಳಬೇಕಾಗುತ್ತದೆ. ನಾಳೆ ಬನ್ನಿ” ಎಂದು ಹೇಳುತ್ತಾರೆ. ಇದಾದ ಮೇಲೆ ಒಂದು ಗಂಟೆಯಲ್ಲೇ ಗ್ರಾಮಕ್ಕೆ ಪೊಲೀಸರನ್ನು ಕಳಿಸಿ, ದಲಿತರಿಗೆಯೇ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ದಲಿತರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ದಲಿತರಿಗೆ ಭಯಭೀತಿ ಹುಟ್ಟಿಸಿದ್ದಾರೆ. ಮಾರನೇ ದಿನ ದೂರು ನೀಡಲು ಹೋದಾಗಲೂ ದೂರು ಸ್ವೀಕರಿಸಲಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲು ಹೋಗಿದ್ದೆವು. ಎಸ್‌ಪಿಯವರು ನಮ್ಮಿಂದ ವಿವರವಾದ ದೂರು ಸ್ವೀಕರಿಸಿದರು. “ಯಾರು ದೂರು ಸ್ವೀಕರಿಸಲ್ಲ ನೋಡ್ತೀನಿ. ಗ್ರಾಮದಲ್ಲಿ ಅಹಿತರಕ ಘಟನೆ ನಡೆಯದಂತೆ ಕ್ರಮ ವಹಿಸುತ್ತೇನೆ” ಎಂದು ತಿಳಿಸಿದರು. ಐಪಿಎಸ್‌‌ ಅಧಿಕಾರಿಗಳು ಸಾಂತ್ವನ ಹೇಳುತ್ತಾರೆ. ಆದರೆ ಸ್ಥಳೀಯವಾಗಿ ಇರುವಂತಹ ಜಾತಿವಾದಿ ಮನಸ್ಥಿತಿಯ ಅಧಿಕಾರಿಗಳೂ ದಲಿತರಿಗೆ ಯಾಕೆ ರಕ್ಷಣೆ ನೀಡುತ್ತಿಲ್ಲ. ಇದೇನಾ ಭಾರತದ ಕಾನೂನು? ಇದೇನಾ ದಲಿತರಿಗೆ ನೀಡುವ ರಕ್ಷಣೆ? ಎಂದು ಪ್ರಶ್ನಿಸಿದ್ದಾರೆ ಕಾಂತರಾಜು.

ಇದನ್ನೂ ಓದಿ: ಅಪ್ತಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: 13 ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights