Fact Check: ಅಣ್ಣಾಮಲೈ ಟ್ವೀಟ್‌ನಲ್ಲಿ ಹೇಳಿದಂತೆ ಸಾವಿರಾರು ಕ್ರೈಸ್ತರು ತಮಿಳುನಾಡಿನಲ್ಲಿ ಬಿಜೆಪಿಗೆ ಸೇರಿದ್ದಾರೆಯೇ?

ತಮಿಳುನಾಡಿನಲ್ಲಿ ಬಿಜೆಪಿಯ ಪರ್ವ ಪ್ರಾರಂಭವಾಗಿದೆ ಎಂದು ಅಣ್ಣಾಮಲೈ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.  ಜನವರಿ 1, 2022 ರಂದು ತಮಿಳುನಾಡಿನ ನಾಗರ್ ಕೋಯಿಲ್  ಎಂಬಲ್ಲಿ ಸಾವಿರಾರು ಕ್ರಿಶ್ಚಿಯನ್ ಮೀನುಗಾರರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದಾರೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಅಣ್ಣಾಮಲೈ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಸುದ್ದಿಯ ನೈಜತೆಯನ್ನು ಹುಡುಕಿ ಹೊರಟ ನಮಗೆ ಸಿಕ್ಕಿರುವ ಮಾಹಿತಿ ಬೇರೆಯದ್ದೇ ಆಗಿದ್ದು ನಿಜವಾಗಿಯೂ ತಮಿಳುನಾಡಿನ ನಾಗರಕೋಯಿಲ್ ನಲ್ಲಿ ಸಾವಿರಾರು ಕ್ರೈಸ್ತ ಸಮುದಾದ ಮೀನುಗಾರರು ಬಿಜೆಪಿಗೆ ಸೇರಿದ್ದಾರಾ? ಎಂದು ನೋಡಿದಾಗ ಅಣ್ಣಾಮಲೈ ತಮ್ಮ ಟ್ವಿಟರ್ ನಲ್ಲಿ ಮಾಡಿರುವ ಪೋಸ್ಟ್ ಸುಳ್ಳು ಎಂದು ಸಾಬೀತಾಗಿದೆ.  ಹೇಗೆ ಅಂತೀರಾ ಮುಂದೆ ಓದಿ..

ಫ್ಯಾಕ್ಟ್ ಚೆಕ್

ಅಣ್ಣಾಮಲೈ ಅವರ ಹೇಳಿಕೆ ಸುಳ್ಳು ಎಂದು ಜಿಲ್ಲೆಯ ಪ್ರಮುಖ ಕ್ರಿಶ್ಚಿಯನ್ ಮುಖಂಡರೊಬ್ಬರು ಮಾಹಿತಿ ನೀಡಿದ್ದು, ಯಾರೂ ಕೂಡ ಬಿಜೆಪಿಗೆ ಸೇರಿಲ್ಲ ಮತ್ತು ಅಂತಹ ಯಾವ ಚರ್ಚೆಗಳು ನಡೆದಿರುವ ಮಾಹಿತಿಯೂ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಅಣ್ಣಾಮಲೈ ಟ್ವಿಟ್ ನಲ್ಲಿ  ಜನವರಿ 2ರಂದು ಹಂಚಿಕೊಂಡಿರುವ ಫೋಟೋಗಳು ನಾಗರಕೊಯಿಲ್ ನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯ ಫೋಟೋಗಳಾಗಿವೆ.

ಈ ಬಗ್ಗೆ ಮಾತನಾಡಿರುವ ಅಣ್ಣಾಮಲೈ, “ ಸ್ಥಳೀಯ ಮುಖಂಡರಾದ ಸಗಯಾಂ ರವರ ಸುಮಾರು 1700 ಕ್ರಿಶ್ಚಿಯನ್ ಬಂಧುಗಳನ್ನು ಬಿಜೆಪಿಗೆ ಸೇರಲು ಕರೆತಂದಿದ್ದರು, ನಾವು ಸುಮಾರು 5 ಸಾವಿರ ಜನರನ್ನು ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡುವ ಯೋಜನೆ ಹೊಂದಿದ್ದೆವು.  ಆದರೆ ಕೋವಿಡ್ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಹೋಟೆಲ್ ನ ಒಳ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಕ್ರಿಶ್ಚಿಯನ್ ಸಮುದಾಯದ ಜನಪ್ರಿಯ ಪ್ರಭಾವಿಗಳು ಕೂಡ ಪಕ್ಷಕ್ಕೆ ಸೇರಲು ಮುಂದೆ ಬರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ” ಎಂದಿದ್ದಾರೆ

ಇದೆಲ್ಲದರ ನಡುವೆ ಸಭೆಯಲ್ಲಿ ಭಾಗವಹಿಸಿದ ಯಾವುದೇ ಸದಸ್ಯರಿಗೆ ಯಾವುದೇ ಸದಸ್ಯತ್ವ ಕಾರ್ಡ್‌ಗಳನ್ನು ನೀಡಲಾಗಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಕ್ಕೆ ಇದು ಪಕ್ಷದ ಕಾರ್ಯಕ್ರಮದ ವಿಷಯವಾಗಿರುವುದರಿಂದ ಸೂಕ್ತ ಸಮಯದಲ್ಲಿ ಸದಸ್ಯತ್ವದ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು. ಇನ್ನಷ್ಟು ಮಾಹಿತಿಗಾಗಿ ನಾವು ಅಲ್ಲಿಯ ಸ್ಥಳೀಯ ಮೀನುಗಾರರು ಹಾಗೂ ನಾಡಾರ್ ಸಮುದಾಯದ ಹಲವರೊಂದಿಗೆ ಮಾತನಾಡಿದಾಗ, “ನಮಗೆ ಯಾವುದೇ ಸದಸ್ಯತ್ವದ ಕಾರ್ಡ್ ಗಳನ್ನು ನೀಡಿಲ್ಲ” ಎಂದು ಹೇಳಿದ್ದಾರೆ.

ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಹೆಚ್ಚುತ್ತಿರುವಾಗಲೂ ಬಿಜೆಪಿಗೆ ತಮಿಳುನಾಡಿನಲ್ಲಿ ಕ್ರಿಶ್ಚಿಯನ್ನರ ಬಗ್ಗೆ ಆಸಕ್ತಿ ಏಕೆ?  ಕಾನೂನುಬಾಹಿರ ಧಾರ್ಮಿಕ ಮತಾಂತರಗಳನ್ನು ತಡೆಯಲು ಕರ್ನಾಟಕದಲ್ಲಿ ಬಿಜೆಪಿ ಇತ್ತೀಚೆಗೆ ರಾಜ್ಯದ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ.  ಎಂಬುದನ್ನು ನಾವಿಲ್ಲಿ ಗಮನಿಸಬೇಕಾಗಿದೆ.

ಜನವರಿ 1 ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ (ಅಲ್ಪಸಂಖ್ಯಾತ ಮೋರ್ಚಾ) ಸೈಯದ್ ಇಬ್ರಾಹಿಂ, ಪಕ್ಷದ ಶಾಸಕಾಂಗ ನಾಯಕ ನೈನಾರ್ ನಾಗೇಂದ್ರನ್ ಮತ್ತು ನಾಗರಕೋಯಿಲ್ ಶಾಸಕ ಎಂ.ಆರ್. ಗಾಂಧಿ ವಹಿಸಿದ್ದರು.“ಶ್ರೀ ಸಗಾಯಂ ಅವರ ಪ್ರಯತ್ನದಿಂದ, ಸಾವಿರಕ್ಕೂ ಹೆಚ್ಚು ಕ್ರೈಸ್ತ ಮೀನುಗಾರ ಸಮುದಾಯವು  @BJP4TamilNadu ತೆಕ್ಕೆಗೆ ಆಗಮಿಸಿರುವುದು ಹೊಸ ಪರ್ವಕ್ಕೆ ನಾಂದಿಯಾಗಿದೆ” ಎಂದು ಅಣ್ಣಾಮಲೈ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸಭೆಗೆ ದಕ್ಷಿಣ ಏಷ್ಯಾದ ಮೀನುಗಾರರ ಪ್ರಧಾನ ಕಾರ್ಯದರ್ಶಿ ಫಾದರ್ ಚರ್ಚಿಲ್ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ, ಪೂರ್ವಭಾವಿ ಕೆಲಸದ ಕಾರಣಕ್ಕಾಗಿ ಅವರು ಹಾಜರಾಗಿರಲಿಲ್ಲ. ಒಂದು ಮಾಹಿತಿಯ ಪ್ರಕಾರ, “ ಸಭೆಯಲ್ಲಿ ಭಾಗವಹಿಸಿದ ಕೆಲವರು ಬಿಜೆಪಿಗೆ ಸದಸ್ಯರಾಗಲು ಸಮ್ಮತಿಸಿದರು. ಆದರೆ ಭಾಗವಹಿಸಿದ ಎಲ್ಲರೂ ಬಿಜೆಪಿ ಸದಸ್ಯರಾಗಿದ್ದಾರೆ ಎಂಬುದು ಸುಳ್ಳು. ಅಲ್ಲಿ ಸಾವಿರಾರು ಜನ ಭಾವಹಿಸಿದ್ದರು ಎಂಬುದು ಸತ್ಯಕ್ಕೆ ದೂರವಾದದು” ಎಂಬ ಅಂಶವನ್ನು ಹಲವಾರು ಸ್ಥಳೀಯ ವರದಿಗಾರರು ದೃಢಪಡಿಸಿದ್ದಾರೆ.

ಸಾವಿರಾರು ಜನರು ಸ್ಥಳದಲ್ಲಿ ಇರಲಿಲ್ಲ. “ಯಾರಿಗೂ ಸದಸ್ಯತ್ವ ಕಾರ್ಡ್‌ಗಳನ್ನು ನೀಡಲಾಗಿಲ್ಲ ಮತ್ತು ಈ ಬಗ್ಗೆ ಅವರಿಗೆ ತಿಳಿಸಲಾಗಿಲ್ಲ. ಸಾವಿರಾರು ಕ್ರಿಶ್ಚಿಯನ್ನರು ಸಭೆಗೆ ಹಾಜರಾಗಲು ಯಾವುದೇ ಕಾರಣಗಳೂ ಇಲ್ಲ” ಎಂದು ತಮಿಳುನಾಡು ಮೀನುಗಾರರ ಕಲ್ಯಾಣ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಂಟನಿ ಹೇಳಿದಾರೆ.

ಆಂಟನಿ ಹೇಳಿಕೆ ಕುರಿತು ವಾಗ್ದಾಳಿ  ನಡೆಸಿರುವ ಅಣ್ಣಾಮಲೈ, “ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಯಾವುದೇ ಸಮಯದಲ್ಲಿ ಬಿಜೆಪಿಗೆ ಸೇರಬಹುದು, ಆದರೆ ಕಾಂಗ್ರೆಸ್ ಇದನ್ನು ಸಹಿಸಲು ಆಗದೆ ಸುಳ್ಳ ಆರೋಪಗಳನ್ನು ಮಾಡುತ್ತಾ ಕನ್ಯಾಕುಮಾರಿಯಲ್ಲಿ ಅಶಾಂತಿ ಉಂಟುಮಾಡುತ್ತಿದೆ. ಕಾಂಗ್ರೆಸ್ ನಾಯಕರು ಎಲ್ಲಾ ರೀತಿಯ ಆರೋಪಗಳನ್ನು ಮಾಡಬಹುದು. ಆದರೆ ಕ್ರೈಸ್ತರು ಬಿಜೆಪಿಗೆ ಬರುತ್ತಿರುವುದು ಸತ್ಯ. ಈ ಕಾರ್ಯವು ನಾಂದಿ ಹಾಡಿದೆ” ಎಂದಿದ್ದಾರೆ.


ಇದನ್ನು ಓದಿ: Fact Check : ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಯೋಧರಿಗೆ ಅತ್ಯಾಧುನಿಕ ಸಮವಸ್ತ್ರ ನೀಡಿದ್ದಾರೆ ಎಂಬ ಸುದ್ದಿ ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights