Fact check: ಮಾನಸಿಕ ಅಸ್ವಸ್ಥ ಮಹಿಳೆಯ ವಿಡಿಯೊವನ್ನು ಮುಸಲ್ಮಾನರ ವಿರುದ್ದದ ಕೋಮು ದ್ವೇಷಕ್ಕೆ ಬಳಕೆ
ಮಹಿಳೆಯೊಬ್ಬರು ಭಾರತ ಮಾತೆಯ ಚಿತ್ರವನ್ನು ಕಸಿದುಕೊಂಡು ಜನರ ನಡುವೆ ಗಲಾಟೆ ಮಾಡುತ್ತಿರುವ ವಿಡಿಯೊವೊಂದು, ‘ಮಹಾರಾಷ್ಟ್ರದ ಮುಸ್ಲಿಂ ಮಹಿಳೆಯೊಬ್ಬರು ಭಾರತ ಮಾತೆಯ ಚಿತ್ರವನ್ನು ಕಸಿಯುತ್ತಿದ್ದಾರೆ’ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊ ಜೊತೆಗೆ ಮತೀಯ ದ್ವೇಷವನ್ನೂ ಕೂಡಾ ಹರಡಲಾಗುತ್ತಿದೆ.
ವಿಡಿಯೊದಲ್ಲಿ, ಮಹಿಳೆಯು ಭಾರತ ಮಾತೆಯ ಚಿತ್ರವನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಾ ಅಲ್ಲಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಹಲ್ಲೆ ಕೂಡಾ ನಡೆಸುತ್ತಾರೆ. ಜೊತೆಗೆ ಘಟನೆಯ ವಿಡಿಯೊ ಮಾಡುತ್ತಿರುವ ವ್ಯಕ್ತಿಯೊಬ್ಬರ ಮೊಬೈಲ್ ಅನ್ನು ಕಸಿದು ಅದನ್ನು ಒಡೆದು ಹಾಕುತ್ತಾರೆ.
ಇದನ್ನೂ ಓದಿ: Fact check: ದೆಹಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಸುಳ್ಳು
ಸಾಮಾಜಿಕ ಮಾಧ್ಯಮದಲ್ಲಿಈ ವಿಡಿಯೊ, ‘‘ಮಹಾರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ವಜಾರೋಹಣವನ್ನು ತಡೆದು ಭಾರತ ಮಾತೆಯ ಫೋಟೋವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರಿಗೆ ನೀಡಿರುವ ಸ್ವಾತಂತ್ರ್ಯವನ್ನು ವಿವರಿಸಲು ಸಾಧ್ಯವಿಲ್ಲ, ಮೂರ್ಖತನದ ಸಹಿಷ್ಣುತೆಯನ್ನು ನೋಡಿ’’ ಎಂದು ಪ್ರತಿಪಾದಿಸಿ ವೈರಲ್ ಆಗುತ್ತಿದೆ.
ವಿಡಿಯೊವನ್ನು ಮತೀಯ ದೃಷ್ಟಿಕೋನದಿಂದ ಹಂಚುತ್ತಿರುವ ಹಲವು ಹ್ಯಾಂಡಲ್ಗಳು ಬಿಜೆಪಿ ಬೆಂಬಲಿಗರದ್ದಾಗಿದೆ. ಫೇಸ್ಬುಕ್ನಲ್ಲಿ ಕೂಡಾ ಇವುಗಳನ್ನು ಇದೇ ಪ್ರತಿಪಾದನೆಯೊಂದಿಗೆ ವೈರಲ್ ಮಾಡಲಾಗುತ್ತಿದೆ.
ಟ್ವಿಟರ್ನಲ್ಲಿ ಕೂಡಾ ಈ ವಿಡಿಯೊ ವೈರಲ್ ಆಗುತ್ತಿದ್ದು, ಇದನ್ನು ಇಲ್ಲಿ ನೀವು ನೋಡಬಹುದಾಗಿದೆ.
A Muslim lady in Maharashtra blocking flag hoisting n trying to snatch bharat Mata photo. Look at the liberty we have given them n unexplainable, stupid tolerance . HOW MUCH MORE TOLERANCE WE SHOULD SUSTAIN? " As recieved on watsap". This is the level of hindu tolerance.#pathetic pic.twitter.com/AUKK87e9Oc
— Universal friend (@KpHaridas) February 1, 2022
ಇಷ್ಟೇ ಅಲ್ಲದೆ, ಈ ವಿಡಿಯೊ ಯೂಟ್ಯೂಬ್ನಲ್ಲಿ ಕೂಡಾ ಅಪ್ಲೋಡ್ ಆಗುತ್ತಿದೆ. ಇದನ್ನು ನೀವು ಇಲ್ಲಿ ನೋಡಬಹುದು.
ಇದನ್ನೂ ಓದಿ: ತನ್ನ ಮಗುವಿನ ಹೃದಯವನ್ನು ಮತ್ತೊಂದು ಮಗುವಿಗೆ ಜೋಡಿಸಿದ ತಾಯಿಯ ಕತೆ
ಫ್ಯಾಕ್ಟ್ಚೆಕ್
ವೈರಲ್ ಆಗುತ್ತಿರುವ ಈ ವಿಡಿಯೊವನ್ನು ಏನ್ ಸುದ್ದಿ.ಕಾಂ ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ ಘಟನೆಯು ಜನವರಿ 26 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ವರದಿಯನ್ನು ‘ಟೈಮ್ಸ್ನೌ ಮರಾಠಿ’ ಜನವರಿ 27 ರಂದು ಮಾಡಿದೆ. ಈ ವರದಿಯ ಪ್ರಕಾರ, ಥಾಣೆಯ ಕೋಲ್ಶೆಟ್ ಪ್ರದೇಶದ ‘ಲೋಧಾ ಅಮರಾ’ ಎಂಬ ಅಪಾರ್ಟ್ಮೆಂಟ್ನ ನಿವಾಸಿಗಳು ಗಣರಾಜ್ಯೋತ್ಸವ ಆಚರಣೆ ಮಾಡಲು ತಯಾರಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಿಳೆ ಅಲ್ಲಿಯದೇ ನಿವಾಸಿಯಾಗಿದ್ದಾರೆ ಎಂದು ಟೈಮ್ಸ್ನೌ ಉಲ್ಲೇಖಿಸಿದ್ದು, ಮಹಿಳೆ ಸ್ಥಳಕ್ಕೆ ಬಂದು ಭಾರತ ಮಾತೆಯ ಚಿತ್ರವನ್ನು ಕಿತ್ತುಕೊಂಡು ಗಲಾಟೆ ಎಬ್ಬಿಸಿದ್ದಾರೆ. ಈ ವೇಳೆ ಅಲ್ಲಿನ ಇತರ ನಿವಾಸಿಗಳು ಭದ್ರತಾ ಸಿಬ್ಬಂದಿಯನ್ನು ಕರೆಸಿದ್ದಾರೆ. ಆದರೆ ಮಹಿಳೆಯು ಅವರಿಗೂ ಥಳಿಸಿ, ಘಟನೆಯ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕೂಡಾ ಒಡೆದು ಹಾಕಿದ್ದಾರೆ.
ಈ ವೇಳೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ನಿವಾಸಿಗಳು ಅಂತಿಮವಾಗಿ ಕಪೂರಬಾವಡಿ ಠಾಣೆಯ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕೂಡಾ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಕೆಲವರು ಹೇಳಿದ್ದಾರೆ ಎಂದು ಟೈಮ್ಸ್ ನೌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದೇ ರೀತಿಯ ಪ್ರತಿಪಾದನೆಯೊಂದಿಗೆ ಎಬಿಪಿ ಲೈವ್, ನವ ಭಾರತ ಟೈಮ್ಸ್ ಕೂಡಾ ಸುದ್ದಿ ಮಾಡಿದೆ.
ಜೊತೆಗೆ ಈ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮೆನ್ಸ್ ಡೆ ಔಟ್ ಎಂಬ ವೆಬ್ಸೈಟ್, ಆರೋಪಿತ ಮಹಿಳೆಯು ಘಟನೆಯ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದಾರೆ ಎಂದು ಬಹಿರಂಗ ಪಡಿಸಿದೆ. ಮಹಿಳೆ ಈ ಟ್ವೀಟ್ ಅನ್ನು ಇದೀಗ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: Fact check : ಬೆಟ್ಟದ ಅಂಚಿನಲ್ಲಿ ಕಾರನ್ನು ಯೂ ಟರ್ನ್ ಮಾಡಿರುವುದು ನಿಜವೇ?
ಮೆನ್ಸ್ ಡೇ ಔಟ್ ಪ್ರಕಾರ, ಮಹಿಳೆಯು ಈ ಘಟನೆಯ ಬಗ್ಗೆ ಟ್ವೀಟ್ ಮಾಡುವ ಹೊತ್ತಿಗೆ ತನ್ನ ಟ್ವಿಟರ್ ಖಾತೆಯ ಹೆಸರನ್ನು ‘ಕನಿಕಾ ಭೂಪಿಂದರ್ ಸೆಕ್ರಿ’ ಎಂದು ಕರೆಸಿಕೊಳ್ಳುತ್ತಿದ್ದರು. ಇದೀಗ ಅವರು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ಕನಿಕಾ ಸೆಕ್ರಿ ಎಂದು ಬದಲಿಸಿದ್ದಾರೆ ಎಂದು ತೋರುತ್ತಿದೆ.
ಈ ಟ್ವಿಟರ್ ಹ್ಯಾಂಡಲ್ನಲ್ಲಿ ಅವರು ಘಟನೆಯ ಬಗ್ಗೆ ವಿವರಿಸುತ್ತಾ, “ಗಣರಾಜ್ಯೋತ್ಸವ ಆಚರಿಸುತ್ತಿದ್ದ ಹಲವರಿಗೆ ಈ ದಿನದ ಬಗ್ಗೆ ಅವರಿಗೆ ಏನೂ ತಿಳಿದಿರಲಿಲ್ಲ. ಅವರು ಕೇವಲ ಧ್ವಜಾರೋಹಣಕ್ಕಾಗಿ ಒಟ್ಟುಗೂಡಿದ್ದರು. ಅವರ ಕೊಳಕು ಕೈಯಲ್ಲಿ ಭಾರತ ಮಾತೆಯ ಚಿತ್ರ ಇತ್ತು, ಅದೂ ಕೂಡಾ ಒಬ್ಬ ಗಂಡಸಿನ ಕೈಯಲ್ಲಿ. ಭಾರತದಲ್ಲಿ ಅತ್ಯಾಚಾರದ ಶೇಕಡಾವಾರು ಪ್ರಮಾಣವು ತುಂಬಾ ಹೆಚ್ಚಿರುವುದರಿಂದ ನಾನು ಆ ಗಂಡಸಿನ ಕೊಳಕು ಕೈಗಳಿಂದ ಚಿತ್ರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದೆ. ಅತ್ಯಾಚಾರಿಗಳು ಭಾರತ ಮಾತೆಯ ಚಿತ್ರವನನ್ನು ಸ್ಪರ್ಶಿಸಬಾರದು. ಈ ಪುರುಷರೇ ಮಹಿಳೆಯರ ವಿರುದ್ಧ ಅಪರಾಧಗಳನ್ನು ಮಾಡುತ್ತಾರೆ, ಆದ್ದರಿಂದ ಅವರು ಅದನ್ನು ಹೇಗೆ ಪೂಜೆ ಮಾಡುತ್ತಾರೆ” ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಏನ್ ಸುದ್ದಿ.ಕಾಂ ಮಹಾರಾಷ್ಟ್ರದ ಥಾಣೆ ಪೊಲೀಸ್ ಸ್ಟೇಷನ್ಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಸಿಬ್ಬಂದಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ನೀಡುವುದಾಗಿ ಹೇಳಿದ್ದಾರೆ. ಅವರು ಮಾಹಿತಿ ನೀಡಿದ ಕೂಡಲೇ ಅದನ್ನು ಇಲ್ಲಿ ಅಪ್ಡೇಟ್ ಮಾಡಲಾಗುವುದು.
ಒಟ್ಟಿನಲ್ಲಿ ಹೇಳಬಹುದಾದರೆ, ಈ ಮಹಿಳೆಯು ಮಾನಸಿಕ ರೋಗಿಯೆಂದು ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಮೆನ್ಸ್ಡೆಔಟ್ ಹೇಳುವಂತೆ ಈ ಮಹಿಳೆಯ ಹೆಸರು ‘ಕನಿಕಾ ಭೂಪಿಂದರ್ ಸೆಕ್ರಿ’ ಎಂದಾಗಿದೆ. ಈ ಹೆಸರು ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರಿಗೆ ಇರುವುದಿಲ್ಲ. ಜೊತೆಗೆ ಮಹಿಳೆಯ ಮುಸ್ಲಿಂ ಎಂದು ಹೇಳಲು ಆಧಾರವಿಲ್ಲ. ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಕೆಲವು ಪೇಜ್ಗಳು ಮತ್ತು ಹ್ಯಾಂಡಲ್ಗಳು ವಿಡಿಯೊವನ್ನು ಮತೀಯ ದ್ವೇಷಕ್ಕೆ ಬಳಸಿಕೊಳ್ಳುತ್ತಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೇ?

