Fact Check: ಉಕ್ರೇನ್‌ನಲ್ಲಿ ಇಸ್ಕಾನ್‌ ಸಂಸ್ಥೆಯ 54 ದೇವಸ್ಥಾನಗಳು ಆಹಾರ ವಿತರಣೆ ಮಾಡುತ್ತಿದೆ ಎಂಬುದು ನಿಜವೆ?

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ದ ಯಾವಾಗ ಕೊನೆಯಾಗುವುದೋ ತಿಳಿಯುತ್ತಿಲ್ಲ ಸದ್ಯಕ್ಕೆ ಆ ದೇಶದ ಜನರಿಗೆ ನೆರವು ಅಗತ್ಯವಾಗಿದೆ, ಹಾಗಾಗಿ ಆ ದೇಶದ ಜನರಿಗೆ ಆಹಾರ ಒದಗಿಸುವ ಕೆಲಸವನ್ನು ಮಾಡುತ್ತಿವೆ. “ಉಕ್ರೇನ್‌ನಲ್ಲಿ ಸುಮಾರು 54 ಇಸ್ಕಾನ್ ದೇವಾಲಯಗಳಿಂದ ಹಸಿದವರಿಗೆ ಅನ್ನ ನೀಡಲಾಗುತ್ತಿದ್ದು, ಅಲ್ಲಿ ಅನ್ನ ನೀಡುವ ಮೊದಲು ಅನ್ಯ ಮತಸ್ಥರಿಗೆ ನೀವು ನಮ್ಮ ಮತಕ್ಕೆ ಬನ್ನಿ ಎಂದು ಯಾರೂ ಒತ್ತಾಯ ಮಾಡುತ್ತಿಲ್ಲ ಇದೆ ನನ್ನ ಹೆಮ್ಮೆಯ ಸನಾತನ ಧರ್ಮ”. ಎಂದು ಹೇಳುವ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಡಮರುಗ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್

ಹಾಗಿದ್ದರೆ ಯುದ್ದ ನಡೆಯುತ್ತಿರುವ ಉಕ್ರೇನ್ ಗೆ ತೆರಳಿ ಇಸ್ಕಾನ್ ಸಂಸ್ಥೆಯ 54 ದೇವಾಲಯಗಳು ಅಲ್ಲಿಯ ನಿರಾಶ್ರಿತರಿಗೆ ಆಹಾರ ಸೌಲಭ್ಯ ಒದಗಿಸುವಂತಹ ಸೇವೆಯನ್ನು ನೀಡುತ್ತಿದೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ನೋಡಿದಾಗ ಇಸ್ಕಾನ್ ಸಂಸ್ಥೆಯು ಉಕ್ರೇನ್‌ನಲ್ಲಿ ಆಹಾರ ನೀಡುತ್ತಿದೆ ಎಂದು ವೈರಲ್ ಆದ ಪೋಟೊಗಳನ್ನ ಹೋಲುವ ಹಲವು ಫೋಟೊಗಳು ಲಭ್ಯವಾದವು, ನಂತರ ಮತ್ತಷ್ಟು ಹುಡುಕಾಟ ನಡೆಸಿದಾಗ ಅದು ಇಸ್ಕಾನ್ ಸಂಸ್ಥೆ ತನ್ನ ವೆಬ್ ಸೈಟ್ ಗಾಗಿ ರೂಪಿಸಿರುವ ಹಳೆಯ ಫೋಟೋ ಎಂದು ಖಚಿತವಾಯಿತು.

ಇಸ್ಕಾನ್ ವೆಬ್‌ಸೈಟ್‌ನಲ್ಲಿ ಹಾಕಿರುವ ಫೊಟೋ

ಸೋಶಿಲ್‌ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿರುವ ಫೋಟೊವನ್ನು ಇಸ್ಕಾನ್ ಸಂಸ್ಥೆಯು ತನ್ನ https://iskconprayagraj.com/janmastami.html ವೆಬ್‌ಸೈಟ್‌ನಲ್ಲಿ ಈ ಫೋಟೊವನ್ನು ಬಳಸಿ ಡೊನೇಟ್ ಮಾಡಿ ಎಂದು ಹಣದ ಮೊತ್ತವನ್ನು ನಮೂದಿಸಿದೆ. ಅದನ್ನು ಇಲ್ಲಿ ನೋಡಬಹುದು.

ಇಸ್ಕಾನ್ ಸಂಸ್ಥೆಯು 2015ರಲ್ಲಿ ಅಪ್‌ಲೋಡ್ ಮಾಡಿದ ಫೋಟೋವನ್ನು ಬಲಪಂಥೀಯ ಪ್ರತಿಪಾದಕ ಡಮರುಗ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ದದ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥೆ ಆಹಾರ ವಿತರಣೆ ಮಾಡಲು ಮುಂದಾಗಿದೆ ಎಂಬುದು ಸುಳ್ಳು, ಅದರಲ್ಲು 54 ಇಸ್ಕಾನ್ ದೇವಾಲಯಗಳಿಂದ ಆಹಾರ ವಿತರಣೆ ಮಾಡಿದೆ ಎಂಬುದಕ್ಕೆ ಯಾವ ಆಧಾರಗಳಿಲ್ಲ.

ಇದೆಲ್ಲ ಸುಳ್ಳು ಸುದ್ದಿ ಎಂದು ಸ್ವತಃ ಇಸ್ಕಾನ್‌ನ ಅಧಿಕೃತ ವೆಬ್‌ಸೈಟ್ ಸುದ್ದಿಯನ್ನು ಪ್ರಸಾರ ಮಾಡಿದೆ.

ಉಕ್ರೇನ್‌ನಲ್ಲಿರುವ ಐವತ್ತಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳು ಮತ್ತು ಕೇಂದ್ರಗಳು ಸಾರ್ವಜನಿಕರಿಗೆ ಆಹಾರ ಪರಿಹಾರ ಮತ್ತು ಆಶ್ರಯವನ್ನು ಒದಗಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳಲ್ಲಿ (ಇಸ್ಕಾನ್ ನ್ಯೂಸ್ ಅಲ್ಲ) ತಪ್ಪು ಮಾಹಿತಿ ಹರಡುತ್ತಿದೆ.

ಈ ಮಾಹಿತಿ ಸುಳ್ಳು ಎಂದು ಇಸ್ಕಾನ್ ನ್ಯೂಸ್ ಖಚಿತಪಡಿಸಿದೆ. ಉಕ್ರೇನ್‌ನಲ್ಲಿರುವ ಇಸ್ಕಾನ್ ಅಧಿಕಾರಿಗಳ ಪ್ರಕಾರ, ಪ್ರಸಕ್ತ ಸಂದರ್ಭದಲ್ಲಿ ಕೇವಲ ಒಂದು ಪ್ರಸಾದ ವಿತರಣಾ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಇದು ಉಕ್ರೇನ್‌ನ ಪೂರ್ವ ಭಾಗದಲ್ಲಿ, ಡೊನೆಟ್ಸ್ಕ್‌ನಲ್ಲಿದೆ. ಫೆಬ್ರವರಿ 27 ರ ಭಾನುವಾರದಂದು 6 AM (ಬೆಳಗ್ಗೆ)  ಕ್ಕೆ ಉಕ್ರೇನ್‌ನ ಇಸ್ಕಾನ್ ವಲಯ ಮೇಲ್ವಿಚಾರಕರಾದ ಅಚ್ಯುತ ಪ್ರಿಯಾ ದಾಸ್ ಅವರೊಂದಿಗೆ ಜೂಮ್ ಕರೆಯಲ್ಲಿ ಇಸ್ಕಾನ್ ನ್ಯೂಸ್ ಇದನ್ನು ದೃಢಪಡಿಸಿದೆ. ನಿರಾಶ್ರಿತರಿಗೆ ಆಹಾರ ನೀಡಲು ಹಂಗೇರಿಯಲ್ಲಿ ಹರೇ ಕೃಷ್ಣ ಆಹಾರ ಪರಿಹಾರ ಕಾರ್ಯಕ್ರಮಗಳು ಪ್ರಾರಂಭವಾಗಿವೆ ಎಂದು ಇಸ್ಕಾನ್ ನ್ಯೂಸ್ ವರದಿ ಮಾಡಿದೆ. ಪೋಲೆಂಡ್ ಸೇರಿದಂತೆ ಯುರೋಪ್‌ನಲ್ಲಿರುವ ಇತರ ಇಸ್ಕಾನ್ ದೇವಾಲಯಗಳ ನಾಯಕರು ನಿರಾಶ್ರಿತರಿಗಾಗಿ ಮುಂದಿನ ದಿನಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಆಶಿಸುತ್ತಿದ್ದಾರೆ.

ಪವಿತ್ರ ಸಸ್ಯಾಹಾರಿ ಆಹಾರದ ದೊಡ್ಡ ಪ್ರಮಾಣದ ವಿತರಣೆ, ಪ್ರಸಾದ, ಇಸ್ಕಾನ್ ಒದಗಿಸುವ ಸೇವೆಗಳ ಅವಿಭಾಜ್ಯ ಅಂಗವಾಗಿದೆ. ಆ ಮಹತ್ವದ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಮಾತ್ರ ಒದಗಿಸಲಾಗಿದೆ ಎಂದು ಭರವಸೆ ನೀಡುವುದು ನಮ್ಮ ಉದ್ದೇಶವಾಗಿದೆ.

ಉಕ್ರೇನ್‌ನಲ್ಲಿನ ಈವೆಂಟ್‌ಗಳು ವೇಗವಾಗಿ ಬದಲಾಗುತ್ತಿರುವುದರಿಂದ, ಭಕ್ತರು, ಇತರ ಓದುಗರು ಮತ್ತು ಮಾಧ್ಯಮಗಳು ಅವರು ಸ್ವೀಕರಿಸುವ ಯಾವುದೇ ಮಾಹಿತಿಯನ್ನು ಪರಿಶೀಲಿಸಲು ವಿಶೇಷವಾಗಿ ಜಾಗರೂಕರಾಗಿರಬೇಕು ಮತ್ತು ದೃಢೀಕರಿಸದ ವರದಿಗಳನ್ನು ಮರು ಪೋಸ್ಟ್ ಮಾಡದಂತೆ ನಾವು ವಿನಂತಿಸುತ್ತೇವೆ.

ಈ ಸಮಯದಲ್ಲಿ ಉಕ್ರೇನ್‌ನಲ್ಲಿರುವ ನಮ್ಮ ದೇವಾಲಯಗಳಲ್ಲಿ ಆಶ್ರಯ ಅಥವಾ ಆಹಾರ ವಿತರಣೆಯನ್ನು ಒದಗಿಸಲು ISKCON ಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮತ್ತು ಇಡೀ ಪ್ರದೇಶದ ಎಲ್ಲಾ ಜನರಿಗೆ ಶಾಂತಿಗಾಗಿ ನಾವು ಪ್ರಾರ್ಥಿಸುತ್ತೇವೆ. ಹರೇ ಕೃಷ್ಣ. ಎಂದು ತನ್ನ ವೆಬ್‌ಸೈಟ್‌ನಲ್ಲಿ ದೃಡಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರು ಸುದ್ದಿ ಸುಳ್ಳಾಗಿದ್ದು ಇಸ್ಕಾನ್‌ನಿಂದ ಕೇವಲ ಒಂದು ದೇವಸ್ಥಾನದ ವತಿಯಿಂದ ಮಾತ್ರ ಪ್ರಸಾದ ವಿತರಣೆಯನ್ನು ಹಂಗೇರಿಯ ಏರ್‌ಪೋರ್ಟ್‌ನಲ್ಲಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.


ಇದನ್ನು ಓದಿರಿ: BJP ನಾಯಕರನ್ನು ಟೀಕಿಸುತ್ತಿರುವ ಈ ಯುವಕ ಹರ್ಷ ಅಲ್ಲ, CFI ಮುಖಂಡ ಸರ್ಫರಾಜ್ ಗಂಗಾವತಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights