ಫ್ಯಾಕ್ಟ್‌ಚೆಕ್: ಸರ್ಕಾರಿ ಶಾಲೆಗಳನ್ನು ಮದರಸಾಗಳನ್ನಾಗಿ ಮಾಡಿದ ಕೇಜ್ರೀವಾಲ್ ಎಂಬುದು ಸುಳ್ಳು ಸುದ್ದಿ

ದೆಹಲಿಯ ಅರವಿಂದ್ ಕೇಜ್ರೀವಾಲ್ ಅವರ ಸರ್ಕಾರವು ಮುಸ್ಲಿಂ ಓಲೈಕೆ ಆಡಳಿತ ನಡೆಸುತ್ತಿದೆ  ಎಂದು ವೀಡಿಯೋವೊಂದನ್ನು ವೈರಲ್ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ ಇರುವ ದೃಶ್ಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಂದ ತುಂಬಿದ್ದ ಶಾಲಾ ಕೊಠಡಿಯೊಳಗೆ ಪೊಲೀಸರ ತಂಡವೊಂದು ನುಗ್ಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವೀಡಿಯೊದಲ್ಲಿ ಇರುವ ಶಾಲೆಯನ್ನು ದೆಹಲಿಯ ವಿಜಯ್ ನಗರದ ಸರ್ಕಾರಿ ಶಾಲೆ ಎಂದು ಹೇಳಲಾಗಿದ್ದು ಈ ಸರ್ಕಾರಿ ಶಾಲೆಯನ್ನು ಮದರಸವನ್ನಾಗಿ ಪರಿವರ್ತಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ದೃಶ್ಯಗಳನ್ನು ಸ್ಕ್ರೀನ್‌ಶಾಟ್ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವೈರಲ್ ದೃಶ್ಯಗಳು ಉತ್ತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ. ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ಒಂದೆರಡು ವಿಡಿಯೋಗಳನ್ನು YouTube ನಲ್ಲಿ (ಇಲ್ಲಿ ಮತ್ತು ಇಲ್ಲಿ) ಅಪ್‌ಲೋಡ್‌ ಮಾಡಲಾಗಿದೆ.

ಈ ವೀಡಿಯೊಗಳನ್ನು 2021 ರಲ್ಲಿ ಮತ್ತೆ ಅಪ್‌ಲೋಡ್ ಮಾಡಲಾಗಿದೆ ಮತ್ತು ವಿವರಣೆಯಲ್ಲಿ ವಿಡಿಯೋವನ್ನು ಗಾಜಿಯಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಸೆರೆಹಿಡಿಯಲಾಗಿದೆ ಎಂದು ಬರೆಯಲಾಗಿದೆ.  ‘ಮಿರ್ಜಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಸ್ಲಾಮಿಕ್ ಚಟುವಟಿಕೆಗಳು, ವಿಜಯನಗರ, ಗಾಜಿಯಾಬಾದ್, ಯು.ಪಿ. ಎಂಬ ಒಕ್ಕಣೆಯನ್ನು ನೀಡಲಾಗಿದೆ.

YouTube ವೀಡಿಯೊಗಳಿಂದ ಕ್ಲೂ ತೆಗೆದುಕೊಂಡು, ಹೆಚ್ಚಿನ ಸರ್ಚ್ ನಡೆಸಿದಾಗ ಸ್ಥಳೀಯ ವರದಿಗಳು ನಮಗೆ ಲಭ್ಯವಾಗಿವೆ. ಈ ವರದಿಯ ಪ್ರಕಾರ ದೃಶ್ಯಗಳು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸರ್ಕಾರಿ ಶಾಲೆಯದ್ದಾಗಿದೆ.

ಆದಾಗ್ಯೂ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ ಶಾಲೆಯನ್ನು ಮದರಸವಾಗಿ ಪರಿವರ್ತಿಸಲಾಗಿಲ್ಲ. ದೈನಿಕ್ ಭಾಸ್ಕರ್, ಘಟನೆಯ ಕುರಿತು ವಿಜಯನಗರ ಪೊಲೀಸರೊಂದಿಗೆ ಮಾತನಾಡಿದಾಗ ಶಾಲೆಯ ಆಡಳಿತ ಮಂಡಳಿಯ ಅನುಮತಿ ಪಡೆದ ಶಾಲೆಯ ಮುಸ್ಲಿಂ ಶಿಕ್ಷಕರೊಬ್ಬರು ತಮ್ಮ ಮಕ್ಕಳಿಗೆ ಅನುಕೂಲವಾಗಲೆಂದು  ಕುರಾನ್ ಪಠಣ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ವೇಳೆ ಕೆಲವರು ನೀಡಿದ ತಪ್ಪು ಮಾಹಿತಿಯಿಂದಾಗಿ ಶಾಲಾ ಆವರಣದಲ್ಲಿ ತಪಾಸಣೆಯನ್ನು ಪೊಲೀಸರು ಮಾಡಿದ್ದಾರೆ. ಹಾಗೆಯೇ ವರದಿಯ ಪ್ರಕಾರ ಪೊಲೀಸರು ನಡೆಸಿದ ತನಿಖೆಯಲ್ಲಿ ಯಾವುದೇ ತಪ್ಪುಗಳು ಕಂಡುಬರದ ಕಾರಣ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ದೃಶ್ಯಗಳು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಸರ್ಕಾರಿ ಶಾಲೆಯದ್ದು ಎಂದು ಗಾಜಿಯಾಬಾದ್‌ನಲ್ಲಿರುವ  ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ವೈರಲ್ ದೃಶ್ಯಗಳು ಶಾಲೆಯ ಮುಸ್ಲಿಂ ಶಿಕ್ಷಕರೊಬ್ಬರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಶಾಲಾ ಆಡಳಿತದ ಅನುಮತಿಯೊಂದಿಗೆ ಆಯೋಜಿಸಿದ ಕುರಾನ್ ಪಠಣ ಕಾರ್ಯಕ್ರಮಕ್ಕೆ ಸಂಬಂಧಿಸಿವೆ. ಆದರೆ ಈ ಹಳೆಯ ದೃಶ್ಯಗಳನ್ನು ತಮಗೆ ಬೇಕಾದ ಹಾಗೆ ತಿರುಚಿ ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಶಾಲೆಗಳನ್ನು ಹೇಗೆ ಮದರಸಾಗಳಂತೆ ಪರಿವರ್ತಿಸುತ್ತಿದ್ದಾರೆ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಕೃಪೆ: ಫ್ಯಾಕ್ಟ್‌ಚೆಕ್


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಜಸ್ಥಾನದ ಕರೌಲಿಯಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂ ಸಮುದಾಯವರಿಗೆ ಬೆದರಿಕೆ ಹಾಕಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights