ಫ್ಯಾಕ್ಟ್‌ಚೆಕ್: ಕೊರೊನಾ ಸಾವುಗಳ ಕುರಿತು ರಾಹುಲ್ ಗಾಂಧಿ ಬಗ್ಗೆ ಸುಳ್ಳು ಹೇಳಿದ ಪೋಸ್ಟ್ ಕಾರ್ಡ್

2020-21  ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿದ್ದು, ಭಾರತದಲ್ಲಿ ಕೊರೊನಾದಿಂದ ಸಾವನಪ್ಪಿದವರ ಸಂಖ್ಯೆ 5 ಲಕ್ಷ ಅಲ್ಲ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ಸುಳ್ಳು ಹೇಳಿ ಭಾರತದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಕುತ್ತಿದ್ದಾರೆ, ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬೇಕು ಎಂದು ಬಯಸುತ್ತಿದ್ದಾರೆ, ಇದರೊಂದಿಗೆ ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ” ಎಂದು ಬಲಪಂಥೀಯ, BJP ಬೆಂಬಲಿತ ವಿಕ್ರಂ ಮಹೇಶ್ ಹೆಗ್ಡೆ ಸಾರಥ್ಯದ ಪೋಸ್ಟ್‌ ಕಾರ್ಡ್ ಕನ್ನಡ ಸೋಶಿಯಲ್ ಮೀಡಿಯಾ ಪ್ರತಿಪಾದಿಸಿದೆ.

ಫ್ಯಾಕ್ಟ್‌ಚೆಕ್:

ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಕೋವಿಡ್ ಸಾವಿನ  ಅಂಕಿ ಅಂಶಗಳು ಅವರ ವಯಕ್ತಿಕ ಅಭಿಪ್ರಾಯವಾಗಲಿ ಅಥವಾ ಕಾಂಗ್ರೆಸ್ ಪಕ್ಷ ನೀಡಿರುವ ವರದಿಯಾಗಲಿ ಅಲ್ಲ. ರಾಹುಲ್‌ ಗಾಂಧಿ ಪ್ರಸ್ತಾಪಿಸಿರುವುದು WHO ನೀಡಿರುವ ಮಾಹಿತಿಯನ್ನ ಆಧರಿಸಿಯೇ ಹೊರತು ಅವರ ವಯಕ್ತಿಕ ಅಭಿಪ್ರಾಯವಲ್ಲ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸತ್ಯವನ್ನು ಮಾತನಾಡುವುದಿಲ್ಲ, ಇತರರಿಗೂ ಮಾತನಾಡಲು ಬಿಡುವುದಿಲ್ಲ. ಕೋವಿಡ್ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಕೇಂದ್ರ  ರಾಜ್ಯ ಸರ್ಕಾರಗಳೆರಡು ತೆಗೆದುಕೊಂಡ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು, ಯಾವುದೇ ಪೂರ್ವಾಪರ ಇಲ್ಲದೆ ಘೋಷಿಸಿದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಅಕ್ಷರಶಃ ಬೀದಿಗೆ ಬಿದ್ದಂತಾಗಿತ್ತು. ಲಕ್ಷಾಂತರ ಕಾರ್ಮಿಕರು ಪರ್ಯಾಯ ವ್ಯವಸ್ಥೆ ಇಲ್ಲದೆ ತಮ್ಮ ರಾಜ್ಯಗಳಿಗೆ ನಡೆದುಕೊಂಡೆ ಹೋಗಬೇಕಾಯಿತು. ನಡೆದು ಹೋಗುವ ದಾರಿಯಲ್ಲಿ ಸಾವಿರಾರು ಜನ ಸಾವನಪ್ಪಿದರು, ಅದು ಸರ್ಕಾರದ ಲೆಕ್ಕಕ್ಕೆ ಸಿಗಲೇ ಇಲ್ಲ.

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರು ಆಕ್ಸಿಜನ್ ಸಿಗದೆ ಸಾವನಪ್ಪಿದ್ದರು. ಈ ಘಟನೆಯಲ್ಲಿ ವಾಸ್ತವವಾಗಿ ಸಾವನ್ನಪ್ಪಿದವರ ಸಂಖ್ಯೆ 72, ಆದರೆ ಸರ್ಕಾರ ಹೇಳಿದ್ದು 37 ಮಾತ್ರ. ಇನ್ನು 35 ಜನರ ಸಾವಿಗೆ ಬೆಲೆಯೂ ಇಲ್ಲ, ಲೆಕ್ಕವೂ ಇಲ್ಲ. ಸತ್ತ 37 ಜನರಲ್ಲಿ ಯಾರು ಕೂಡ ಆಕ್ಸಿಜನ್ ಕೊರತೆಯಿಂದ ಸಾವನಪ್ಪಿಲ್ಲ ಎಂದು ಸಕಾರ ಹೇಳಿ ಕೈತೊಳೆದುಕೊಂಡಿತು. ಆಗಲೂ ರಾಹುಲ್ ಗಾಂಧಿ ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದರು. ಇದೊಂದು ಉದಾಹರಣೆ ಸಾಕು ಸರ್ಕಾರ ಕೊರಾನಾ ಸಾವಿನ ಸಂಖ್ಯೆಯನ್ನು ಘೋಸಿಸುವಲ್ಲಿ ತಪ್ಪು ಮಾಡಿದೆ ಎಂದು ಹೇಳಲು.

ಕೊರೋನಾ ಸಂದರ್ಭದಲ್ಲಿ ಸರ್ಕಾರದ ವೈಫಲ್ಯಗಳನ್ನು ಎಳೆ ಎಳೆಯಾಗಿ ನಾನು ಗೌರಿ.ಕಾಂ ವರದಿ ಮಾಡಿದೆ. ಅದನ್ನು ಇಲ್ಲಿ ನೋಡಬಹುದು.

90 ಲಕ್ಷ ಸಾವುಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿದೆ ಎಂದು WHO ಅಂದಾಜಿಸಿದೆ. ಆದರೆ ಮೋದಿ ನೇತೃತ್ವದ ಸರ್ಕಾರವು ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ ಕೇವಲ 5,20,000(ಐದು ಲಕ್ಷದ ಇಪ್ಪತ್ತು ಸಾವಿರ) ಎಂದು ಹೇಳುತ್ತಿದೆ. ದೇಶದಲ್ಲಿ ಕೊರೊನಾದಿಂದ ಸಾವಿಗೀಡಾದವರ ನಿಜವಾರ ಸಂ‌ಖ್ಯೆ ಕನಿಷ್ಠ 40 ಲಕ್ಷ ಎಂದು WHO ಹೇಳುತ್ತದೆ.

WHO ಲೆಕ್ಕಕ್ಕೆ ಸಿಗದ ಸಾವುಗಳನ್ನು ಕಂಡುಹಿಡಿಯುವುದಕ್ಕಾಗಿ ಕೇಂದ್ರೀಕೃತ ರಾಷ್ಟ್ರೀಯ ಡೇಟಾದ ಜೊತೆಗೆ ಸ್ಥಳೀಯ ಮತ್ತು ಮನೆ-ಮನೆ ಸರ್ವೆಗಳ ಹಾಗೂ ಸಂಖ್ಯಾಶಾಸ್ತ್ರೀಯ ಮಾದರಿಗಳ ಮೂಲಕ ಹೊಸ ಮಾಹಿತಿಯನ್ನು ಪಡೆಯುತ್ತಿದೆ.

ಅಷ್ಟಕ್ಕು ರಾಹುಲ್ ಗಾಂಧಿ ಮಾತನಾಡಿರುವುದು ದೇಶದ ಜನಸಾಮಾನ್ಯರ ಪರವಾಗಿ, ಮತ್ತು WHO  ಹೇಳಿಕೆಯನ್ನು ಉಲ್ಲೇಖಿಸಿ ಟ್ವಿಟ್ ಮಾಡಿದ್ದಾರೆ. ಇದರಲ್ಲಿ ಸುಳ್ಳಾಗಲಿ, ವಯಕ್ತಿಕ ಅಭಿಪ್ರಾಯವಾಗಲಿ ಇಲ್ಲ. ಹಾಗಾಗಿ ಪೋಸ್ಟ್ ಕಾರ್ಡ್ ಕನ್ನಡ ಮಾಡಿರುವ ಪೋಸ್ಟ್‌ರ್ ನಲ್ಲಿ ರಾಹುಲ್‌ ಗಾಂಧಿ ಸುಳ್ಳು ಹೇಳಿದ್ದಾರೆ ಎಂದು ಸುಳ್ಳು ಹೇಳಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಸೀದಿ ಕೆಡವಿದಾಗ ವೀರಭದ್ರೇಶ್ವರ ದೇವಾಲಯ ಪತ್ತೆ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights