ಫ್ಯಾಕ್ಟ್ಚೆಕ್: ತಂಪು ಪಾನೀಯದಲ್ಲಿ ವೈರಸ್ ಮಿಶ್ರಣ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ!
ಇತ್ತೀಚೆಗೆ ಫೇಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ 8 ಫೋಟೋಗಳನ್ನು ಒಳಗೊಂಡು ಸುದ್ದಿಯೊಂದು ಹರಿದಾಡುತ್ತಿದ್ದು ವೈರಸ್ ಮಿಶ್ರಣದ ಕಲುಷಿತ ಕೂಲ್ ಡ್ರಿಂಕ್ಸ್ ಸೇವಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ.
ಸಂದೇಶದಲ್ಲಿ ಏನಿದೆ?
“ದಯವಿಟ್ಟು ಎಲ್ಲಾ ಸ್ನೇಹಿತರಿಗೂ ಪಾರ್ವರ್ಡ್ ಮಾಡಿ. ಭಾರತದಾದ್ಯಂತ ಹೈದರಾಬಾದ್ ಪೊಲೀಸರಿಂದ ಮಾಹಿತಿ ನೀಡಲಾಗಿದೆ. ಮುಂಬರುವ ಕೆಲ;ವು ದಿನಗಳವರಗೆ ದಯವಿಟ್ಟು ಮಾಜಾ, ಫ್ಯಾಂಟಾ, 7UP, ಕೊಕಾಕೋಲಾ, ಮೌಂಟೇನ್ ಡಿಯೋ, ಪೆಪ್ಸಿ, ಮುಂತಾದ ಯಾವುದೇ ತಂಪು ಪಾನೀಯವನ್ನು ಕುಡಿಯಬೇಡಿ ಏಕೆಂದರೆ ಈ ಕಂಪನೆಗಳ್ಲಿ ಒಬ್ಬ ಕೆಲಸಗಾರ ಎಬೊಲಾ ಎಂಬ ಅಪಾಯಕಾರಿ ವೈರಸ್ನ ಕಲುಷಿತ ರಕ್ತವನ್ನು ಅದರಲ್ಲಿ ಬೆರೆಸಿದ್ದಾನೆ. ಈ ಸುದ್ದಿಯನ್ನು ND TV ಚಾನಲ್ ತಿಳಿಸಿದೆ. ದಯವಿಟ್ಟು ಈ ಸಂದೇಶವನ್ನು ಆದಷ್ಟು ಬೇಗ ಫಾರ್ವರ್ಡ್ ಮಾಡುವ ಮೂಲಕ ಸಹಾಯ ಮಾಡಿ. ಈ ಸಂದೇಶವನ್ನು ನಿಮ್ಮ ಕುಟುಂಬಕ್ಕೆ ರವಾನಿಸಿ. ನಿಮಗೆ ಸಾದ್ಯವಾದಷ್ಟು ಇದನ್ನು ಹಂಚಿಕೊಳ್ಳಿ” ಎಂದು ವಾಟ್ಸಾಪ್ ಮತ್ತು ಫೇಸ್ಬುಕ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೋಟೋ ಮತ್ತು ಹೇಳಿಕೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಏನ್ಸುದ್ದಿ.ಕಾಮ್ ನಮ್ಮ ವಾಟ್ಸಾಪ್ ಸಂಖ್ಯೆಗೆ (9108969301) ವಿನಂತಿಗಳು ಬಂದಿವೆ. ವಾಟ್ಸಾಪ್ ನಲ್ಲಿ ಶೇರ್ ಆಗುತ್ತಿರುವ ಫೋಟೊ ಈ ಕೆಳಗಿನಂತಿವೆ.
ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಆಗುತ್ತಿರುವ ಫೋಟೋ ಮತ್ತು ಸಂದೇಶಗಳು
ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಆಗುತ್ತಿರುವ ಫೋಟೋ ಮತ್ತು ಸಂದೇಶಗಳು
ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಆಗುತ್ತಿರುವ ಫೋಟೋ ಮತ್ತು ಸಂದೇಶಗಳು
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಸಂದೇಶ ಮತ್ತು ಪೋಟೊಗಳು ಬಿಡಿ ಬಿಡಿಯಾಗಿದ್ದು ಇದರ ಸತ್ಯಾಸತ್ಯತೆ ಮತ್ತು ಪೋಸ್ಟ್ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್:
ಘಟನೆಗೆ ಸಂಬಂಧಿಸಿದಂತೆ ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ಘಟನೆ ಕುರಿತು ಈಗಾಗಲೆ ಫ್ಯಾಕ್ಟ್ಚೆಕ್ ಮಾಡಲಾದ ವರದಿಗಳು ಲಭ್ಯವಾಗಿವೆ. ಕೆಲವು ವರ್ಷಗಳಿಂದ ಈ ಸುದ್ದಿ ಇದೇ ಹೇಳಿಕೆಯೊಂದಿಗೆ ಹಲವು ಭಾರೀ ಹಂಚಿಕೊಳ್ಳಲಾಗುತ್ತಿದ್ದು ಮಾಧ್ಯಮಗಳು ಈ ಸುದ್ದಿಯನ್ನು ತಳ್ಳಿಹಾಕಿವೆ. ಆದರೂ ಇದನ್ನು ಮತ್ತೆ ಮತ್ತೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ, ವೈರಲ್ ಸಂದೇಶದ ಜೊತೆಯಲ್ಲಿರುವ ಫೋಟೋಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆ. ಈಗ ವಾಟ್ಸಾಪ್ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಚರ್ಚಿಸೋಣ.
ಎಬೋಲದಿಂದ ವೈರಸ್
ಎಬೋಲಾ ವೈರಸ್ ರೋಗವು 1976 ರಲ್ಲಿ ದಕ್ಷಿಣ ಸುಡಾನ್ ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡಿತು. ಎಬೋಲಾ ನದಿಯ ಸಮೀಪವಿರುವ ಹಳ್ಳಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದರಿಂದ ವೈರಾಣುವನ್ನು ಎಬೋಲಾ ಹೆಸರಿನಿಂದ ಗುರುತಿಸಲಾಯಿತು.
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ (CDC) ಪ್ರಕಾರ, ಈ ಮೂರು ವರ್ಷಗಳಲ್ಲಿ ಆಫ್ರಿಕನ್ ದೇಶಗಳಲ್ಲಿ 11,310 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಬೆರಳೆಣಿಕೆಯಷ್ಟು ಎಬೋಲಾ ಪ್ರಕರಣಗಳು ವರದಿಯಾಗಿದ್ದವು. ಆದರೆ ತಂಪು ಪಾನೀಯಗಳಲ್ಲಿ ಎಬೋಲ ವೈರಸ್ ಮಿಶ್ರಣದಿಂದ ಸಾವನ್ನಪ್ಪಿದ ಯಾವದೇ ವರದಿಗಳು ಇಲ್ಲ.
ಜುಲೈ 2019 ರ ಟ್ವೀಟ್ನಲ್ಲಿ, ಹೈದರಾಬಾದ್ ಪೊಲೀಸರು ಕೂಡ ಟ್ವೀಟ್ ಮಾಡಿದ್ದು ಇದು ಸುಳ್ಳು ಸಂದೇಶವಾಗಿದ್ದು ಇಂತಹ ಘಟನೆಗಳು ನಡೆದಿಲ್ಲ ಮತ್ತು ಇಂತಹ ಸಂದೇಶಗಳನ್ನು ನಮ್ಮ ಇಲಾಖೆಯಿಂದ ಸಂದೇಶಗಳನ್ನು ಹಂಚಿಕೊಂಡಿಲ್ಲ. ಪರಿಶೀಲಿಸದೆ ಇಂತಹ ಸುದ್ದಿಗಳನ್ನು ಶೇರ್ ಅಥವಾ ಫಾರ್ವರ್ಡ್ ಮಾಡಬೇಡಿ ಎಂದು ತಿಳಿಸಿದ್ದಾರೆ.
Fake news spreading on social media about cool drinks and a warning from Hyderabad city police is fake one and Hyderabad city police never released any message regarding this. pic.twitter.com/cCy32Vh7fN
— హైదరాబాద్ సిటీ పోలీస్ Hyderabad City Police (@hydcitypolice) July 13, 2019
ಚಿತ್ರ 1 ಮತ್ತು 2
ಈ ಫೋಟೋ ಭಾರತದದ್ದಲ್ಲ. 2015 ರಲ್ಲಿ ಕಲಬೆರಕೆ ತಂಪು ಪಾನೀಯಗಳನ್ನು ತಯಾರಿಸುವ ಕಾರ್ಖಾನೆಯೊಂದರ ಮೇಲೆ ಜಿಲ್ಲಾಡಳಿತವು ದಾಳಿ ನಡೆಸಿದ ಪಾಕಿಸ್ತಾನದ ಗುಜ್ರಾನ್ವಾಲಾದಲ್ಲಿನ ಬೇಗ್ಪುರ ಗ್ರಾಮದ ಫೋಟೋಗಳು. ಪಾಕಿಸ್ತಾನದ ಔಟ್ಲೆಟ್ Pak101 ದಾಳಿಯ ಇತರ ಚಿತ್ರಗಳನ್ನು ಪ್ರಕಟಿಸಿದೆ.
ಫೋಟೋ 3,4,ಮತ್ತು5
ಈ ಮೇಲಿನ ಚಿತ್ರವು 2020 ರ ಮಾರ್ಚ್ನಲ್ಲಿ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ರಪ್ತಿ ನದಿಗೆ ಬಿದ್ದಿತ್ತು. ವರದಿಗಳ ಪ್ರಕಾರ, ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಚಾಲಕ ಬದುಕುಳಿದಿದ್ದಾರೆ. ಅಪ್ರಾಪ್ತ ಬಾಲಕನ ಶವ ಪತ್ತೆಯಾಗಿಲ್ಲ. ವೀಡಿಯೊ ವರದಿಯನ್ನು ಕೆಳಗೆ ನೀಡಲಾಗಿದೆ.
ವೈರಲ್ ದೃಶ್ಯಗಳನ್ನು ಗೋರಖ್ಪುರ ಟೈಮ್ಸ್ ಮತ್ತು ಜಿಟಿವಿ ನ್ಯೂಸ್ ಸೇರಿದಂತೆ ಸ್ಥಳೀಯ ಔಟ್ಲೆಟ್ಗಳ ಮಾಧ್ಯಮ ಪ್ರಸಾರದಲ್ಲಿಯೂ ಕಾಣಬಹುದು.
ಫೋಟೋ 6
ಈ ಫೋಟೋ ಕಾಣುತ್ತಿರುವುದು ಉತ್ತರ ಪ್ರದೇಶದ ಲಖಿಂಪುರದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಶವಗಳ ಫೋಟೋ ಎಂದು ತಿಳಿದು ಬಂದಿದೆ. ಏಪ್ರಿಲ್ 28, 2018 ರಂದು, ಲಖಿಂಪುರದ ಉಚೋಲಿಯಾ ಪ್ರದೇಶದಲ್ಲಿ ಟ್ರಕ್ ಮತ್ತು ಕಾರು ಡಿಕ್ಕಿ ಹೊಡೆದು 13 ಜನರು ಸಾವನ್ನಪ್ಪಿದರು. ಘಟನೆ ಕುರಿತು ಧೌರಾಹರಾ ಸಂಸದೆ ರೇಖಾ ವರ್ಮಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋಟೋ 7
ಈ ಫೋಟೋದಲ್ಲಿರುವ ಮೃತದೇಹಗಳು ತೆಲಂಗಾಣದ ಮಮ್ಮಿಲ್ಲಗಡ್ಡಾದ ಕುಟುಂಬಕ್ಕೆ ಸೇರಿದ್ದು. ಸಾಲವನ್ನು ಮರುಪಾವತಿಸಲಾಗದೆ, ಕುಟುಂಬದ ಆರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಡೆಕ್ಕನ್ ಹೆರಾಲ್ಡ್ ಮತ್ತು ದಿ ಹಿಂದೂ ಕೂಡ ದೃಶ್ಯದಿಂದ ಇದೇ ರೀತಿಯ ಫೋಟೋಗಳನ್ನು ಹೊಂದಿದ್ದವು.
ಫೊಟೋ 8
ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಸುಮಾರು 2015 ರಿಂದಲೂ ಹರಿದಾಡುತ್ತಿದ್ದು ಇದಕ್ಕೆ ಯಾವುದೇ ಹಿನ್ನಲೆಯಾಗಲಿ ಅಥವಾ ಇದರ ಹಿಂದೆ ಯಾವುದೇ ಘಟನೆ ನಡೆದಿರುವ ವರದಿಗಳು ಲಭ್ಯವಿಲ್ಲದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಮೇಲಿನ ಹೇಳಿಕೆಯೊಂದಿಗೆ ಶೇರ್ ಆಗುತ್ತಿರುತ್ತದೆ.
Thumbs up ki bottle mai snake company koi jawab de rhi hai 15.6.2015 ko maine complain ki thi aap sab se guzarish pic.twitter.com/uOT1L7DxiH
— Sajid Ansari (@026c7443703f411) June 18, 2015
ಇಲ್ಲಿ ಹಂಚಿಕೊಳ್ಳಲಾಗಿರುವ ಯಾವ ಫೋಟೋಗಳಿಗೂ ಮತ್ತು ಹೇಳಿಕೆಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂದು ಧೃಡಪಟ್ಟಿದೆ. ಎಬೋಲಾ ವೈರಸ್ ಸೋಂಕಿತ ರಕ್ತವನ್ನು ಪಾನೀಯಗಳಲ್ಲಿ ತುಂಬಿಸಲಾಗಿದೆ ಎಂದು ಹೇಳುವ ಘಟನೆಯನ್ನು ದೃಢೀಕರಿಸುವ ಯಾವ ವರದಿಗಳು ಲಭ್ಯವಿಲ್ಲ. ತಂಪು ಪಾನೀಯ ಕಂಪನಿಯೊಂದರ ಉದ್ಯೋಗಿಯೊಬ್ಬರು ಕೋಕ್ ಬಾಟಲಿಯಲ್ಲಿ ಎಬೋಲಾ ವೈರಸ್ ಸೋಂಕಿತ ರಕ್ತವನ್ನು ಬೆರೆಸಿದ್ದಾರೆ ಎಂಬ ಹೇಳಿಕೆಯು ಸಾಕಷ್ಟು ಸಮಯದಿಂದ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಈ ಕಾರಣಕ್ಕೆ ಇದು ಸಂಪೂರ್ಣ ಸುಳ್ಳು ಎಂದು ಹೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಕಲುಷಿತ ತಂಪು ಪಾನೀಯಗಳ ಸೇವನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಪಾಕಿಸ್ತಾನದ ನಕಲಿ ತಂಪು ಪಾನೀಯ ಕಾರ್ಖಾನೆಯ ಮೇಲೆ ದಾಳಿ ಮಾಡಿದಾಗ ಸೆರೆಹಿಡಿದ ಫೋಟೋಗಳನ್ನು ಸುಳ್ಳು ಹೇಳಿಕೆಯೊಂದಿಗೆ ಪ್ರತಿಪಾದಿಸಿ ಸಂಬಂಧವಿಲ್ಲದ ಫೋಟೋಗಳೊಂದಿಗೆ ಕಳೆದ ಮೂರು ವರ್ಷಗಳಿಂದ ಹಂಚುತ್ತಿದ್ದಾರೆ.
ಇವೆಲ್ಲವೂ ಕಟ್ಟು ಕಥೆಯಾಗಿದ್ದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು. ಇಂತಹ ಸುದ್ದಿಗಳನ್ನು ಪರಿಶೀಲಿಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಜನಸಾಮಾಸ್ಯರನ್ನು ಭಯಭೀತರನ್ನಾಗಿ ಮಾಡಲಾಗುತ್ತಿದೆ. ಇವುಗಳ ಕುರಿತು ಎಚ್ಚರವಿರಲಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಇದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ ಫೋಟೊ ಅಲ್ಲ