ಫ್ಯಾಕ್ಟ್‌ಚೆಕ್: ಇದು ಮೈಸೂರು ಹುಲಿ ಟಿಪ್ಪು ಸುಲ್ತಾನ್ ರವರ ಫೋಟೊ ಅಲ್ಲ
ಎರಡು ವಿಭಿನ್ನ ಫೋಟೋಗಳನ್ನು ಹಂಚಿಕೊಂಡು ಇದರಲ್ಲಿ ಒಂದು ಟಿಪ್ಪುವಿನ ನಿಜವಾದ ಫೋಟೋ, ಇನ್ನೊಂದು ಫೋಟೋವು ‘ಭಾರತದಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಕಾಂಗ್ರೆಸ್ ಮುದ್ರಿಸುತ್ತಿರುವ ಫೋಟೋ’ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಹೇಳಿರುವಂತೆ ಟಿಪ್ಪು ಸುಲ್ತಾನ್ ಅವರ ನಿಜವಾದ ಫೋಟೋವನ್ನು ಆಗಿನ ಕಾಂಗ್ರೆಸ್ ಸರ್ಕಾರ ತಪ್ಪಾಗಿ ನೀಡಲಾಗಿದೆಯೇ ? ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಗೆಟ್ಟಿ ಫೋಟೋ ವೆಬ್‌ಸೈಟ್‌ನಲ್ಲಿ ಅದೇ ರೀತಿ ಚಿತ್ರಗಳು ಕಂಡುಬಂದಿದೆ. ಫೋಟೋದ ವಿವರಣೆಯ ಪ್ರಕಾರ, ವ್ಯಕ್ತಿ ಟಿಪ್ಪು ಟಿಪ್ (1837-1905) ಎಂದು ಹೇಳಲಾಗಿದೆ. ಅವರು ಆಫ್ರಿಕಾದ ಸ್ವಾಹಿಲಿ-ಜಾಂಜಿಬಾರಿಯ ಗುಲಾಮಿ ವ್ಯಾಪಾರಿ. ಈ ಫೋಟೋವನ್ನೆ ಸಾಮಾಜಿಕ ಮಾಧ್ಯಮದಲ್ಲಿ ಟಿಪ್ಪು ಸುಲ್ತಾನ್‌ನ ನಿಜವಾದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಫೋಟೋದಲ್ಲಿರುವ ವ್ಯಕ್ತಿಯು ಆಫ್ರಿಕನ್ ಗುಲಾಮರ ವ್ಯಾಪಾರಿ ಎಂಬ ಸೂಚನೆಯನ್ನು ತೆಗೆದುಕೊಂಡು ಈ ವ್ಯಕ್ತಿಯ ಬಗ್ಗೆ ಇತರ ಸುದ್ದಿಗಳಿಗಾಗಿ ಗೂಗಲ್ ಸರ್ಚ್ ಮಾಡಿದಾಗ ಬ್ರಿಟಿಷ್ ನ್ಯೂಸ್ ಪೇಪರ್ ಆರ್ಕೈವ್ ವೆಬ್‌ಸೈಟ್‌ನಿಂದ ‘ದಿ ಇಲ್ಲಸ್ಟ್ರೇಟೆಡ್ ಲಂಡನ್ ನ್ಯೂಸ್’ ಮಾಡಿದ ಆರ್ಕೈವ್ ಲಭ್ಯವಾಗಿದೆ. 07 ಡಿಸೆಂಬರ್ 1889 ರ ಸಂಚಿಕೆಯ ಮುಖಪುಟದಲ್ಲಿ ಅದೇ ಚಿತ್ರವಿದೆ. ಮುಖಪುಟದ ಕವರ್‌ನಲ್ಲಿನ ಚಿತ್ರದ ಶೀರ್ಷಿಕೆಯು, ‘ಟಿಪ್ಪೂ ಟಿಪ್, ಮನ್ಯೇವಾ, ಅಪ್ಪರ್ ಕಾಂಗೋದ ಅರಬ್ ಮುಖ್ಯಸ್ಥ’ ಎಂದು ಹೇಳಲಾಗಿದೆ.
ಟಿಪ್ಪು ಸುಲ್ತಾನ್ (1751-1799) 1782-1799 ರವರೆಗೆ ಮೈಸೂರು ಸಾಮ್ರಾಜ್ಯದ ದೊರೆಯಾಗಿದ್ದರು. ಅವರ ತಂದೆ ಹೈದರ್ ಅಲಿ ಅನಾರೋಗ್ಯದಿಂದ ಯುದ್ಧದಲ್ಲಿ ಮರಣಹೊಂದಿದಾಗ ಟಿಪ್ಪು ಎರಡನೇ ಆಂಗ್ಲೋ-ಮೈಸೂರು ಯುದ್ಧವನ್ನು ಮುನ್ನಡೆಸಿ ಬ್ರೀಟಿಷರಿಗೆ ಸೋಲುಣಿಸಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತಾಗ ತನ್ನ ಮಕ್ಕಳನ್ನು ಅಡವಿಟ್ಟಿದ್ದರು. ಧೀರೋಧಾತ್ತವಾಗಿ ಹೋರಾಡಿದ ಟಿಪ್ಪು ಸುಲ್ತಾನ್ 1799 ರಲ್ಲಿ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ನಿಧನರಾದರು. ಅವರ ಕಲಾತ್ಮಕ ಭಾವಚಿತ್ರವನ್ನು ಸರ್ಕಾರ ಸರಿಯಾಗಿಯೇ ಬಳಸುತ್ತಿದೆ.
ವಾಸ್ತವವಾಗಿ, ವಿಶ್ವದ ಮೊದಲ ಛಾಯಾಚಿತ್ರವನ್ನು ತೆಗೆದಿದ್ದು 1826 ರಲ್ಲಿ ಫ್ರೆಂಚ್ ವಿಜ್ಞಾನಿ ಜೋಸೆಫ್ ನೈಸ್ಫೋರ್. ಆದರೆ ಟಿಪ್ಪು ಸುಲ್ತಾನ್ ಆಗಲೇ ನಿಧನ (1799) ಹೊಂದಿದ್ದರು ಎಂಬುದು ಗಮನಾರ್ಹ. ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಪೋಟೊಗೂ ಟಿಪ್ಪು ಸುಲ್ತಾನ್‌ಗೂ ಸಂಬಂಧವಿಲ್ಲ. ಅದು ಆಫ್ರಿಕಾದ ಟಿಪ್ಪೂ ಟಿಪ್ ಎಂಬ ಗುಲಾಮಿ ವ್ಯಾಪಾರಿಯ ಪೋಟೋ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಆಫ್ರಿಕಾದ ಗುಲಾಮಿ ವ್ಯಾಪಾರಿ ಟಿಪ್ಪು ಟಿಪ್ ಅವರ ಫೋಟೋವನ್ನು ಟಿಪ್ಪು ಸುಲ್ತಾನ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಿಂದೂ ಯುವಕನೊಬ್ಬ ಚೂರಿಯಿಂದ ಇರಿದ ವಿಡಿಯೋವನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ