ಫ್ಯಾಕ್ಟ್‌ಚೆಕ್: ಅಕ್ಟೋಬರ್‌ನಿಂದ ‘ಕೆಜಿಎಫ್ ಚಾಪ್ಟರ್‌ 3’ ಶೂಟಿಂಗ್ ಶುರು ಎಂಬುದು ನಿಜವೇ?

ಕನ್ನಡ ಚಿತ್ರರಂಗದ ಮಟ್ಟಿಗೆ ಸಧ್ಯ ಕೆಜಿಎಫ್ ಚಾಪ್ಟರ್‌ಗಳದ್ದೇ ಹವಾ ಎಂಬಂತಾಗಿದೆ. 2018ರಲ್ಲಿ ಬಿಡುಗಡೆ ಆಗಿದ್ದ ಕೆಜಿಎಫ್ ಚಾಪ್ಟರ್‌1 ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಕೊರೊನಾ ಲಾಕ್‌ಡೌನ್ ಕಾರಣಕ್ಕೆ ವಿಳಂಬವಾಗಿದ್ದ ಚಾಪ್ಟರ್‌2 ನಾಲ್ಕು ವರ್ಷಗಳ ನಂತರ ಕಳೆದ ಏಪ್ರಿಲ್ 14 ರಂದು ಬಿಡುಗಡೆಯಾಗಿದೆ. ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಸಿನಿಮಾ ತೆರೆ ಕಂಡು ಒಂದು ತಿಂಗಳಲ್ಲಿ 1,185 ಕೋಟಿ ರೂಪಾಯಿ ಲಾಭ ಮಾಡಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆ ಕಂಡಿದ್ದರೂ ಕನ್ನಡಕ್ಕಿಂತ ಹೆಚ್ಚಾಗಿ ಬಾಲಿವುಡ್​​​​​ನಲ್ಲೇ ‘ಕೆಜಿಎಫ್​​-2’ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇಡೀ ಭಾರತದ ಸಿನಿಮಾ ರಂಗವೇ ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿ ಬಿದ್ದಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

‘ಕೆಜಿಎಫ್​​-2’ ಚಿತ್ರದ ಯಶಸ್ಸಿನ ಜೊತೆ ಜೊತೆಗೆ ಕೆಜಿಎಫ್​​-3 ಬಗ್ಗೆಯೂ ಅಭಿಮಾನಿ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಕೆಜಿಎಫ್​​-2 ಬಿಡುಗಡೆ ಆಗುವವರೆಗೂ ಚಾಪ್ಟರ್ 3 ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಕೆಜಿಎಫ್​​-2 ಸಿನಿಮಾ ಕೊನೆಯಲ್ಲಿ ಚಿತ್ರತಂಡ, 3ನೇ ಭಾಗದ ಬಗ್ಗೆ ಸುಳಿವು ನೀಡಿತ್ತು. ಇದನ್ನು ನೋಡುತ್ತಿದ್ದಂತೆ, ಚಾಪ್ಟರ್ 3 ಯಾವಾಗ ಆರಂಭವಾಗುತ್ತದೆ.? ಯಾವಾಗ ತೆರೆ ಕಾಣುತ್ತದೆ..? ಎಂಬ ಚರ್ಚೆ ಆರಂಭವಾಗಿತ್ತು. ಅಷ್ಟೇ ಅಲ್ಲ, ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಸುದ್ದಿಯ ಪೋಸ್ಟ್‌ರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅಕ್ಟೋಬರ್‌ನಿಂದ ‘ಕೆಜಿಎಫ್ ಚಾಪ್ಟರ್‌ 3’ ಶೂಟಿಂಗ್ ಶುರು ಆಗಲಿದೆ. 2024ಕ್ಕೆ ಕೆಜಿಎಫ್ ಚಾಪ್ಟರ್‌ 3 ತೆರೆಗೆ ಬರುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ‘ಕೆಜಿಎಫ್‌: ಚಾಪ್ಟರ್ 3’ ಶೂಟಿಂಗ್ ಶೀಘ್ರದಲ್ಲೇ ಶುರುವಾಗುತ್ತಿದ್ದು, ಮಾರ್ವೆಲ್ ಸಿನಿಮಾಗಳ ಮಾದರಿಯಲ್ಲಿ ಸ್ಕ್ರಿಪ್ಟ್‌ ಇರಲಿದೆ ಎಂಬುದಾಗಿ ನಿರ್ಮಾಪಕರು ಹೇಳಿಕೆ ಕೊಟ್ಟಿದ್ದಾರೆ ಎಂಬ ಪೋಸ್ಟರ್‌ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಹೇಳಿರುವಂತೆ KGF ಚಾಪ್ಟರ್‌ 3 ಚಿತ್ರೀಕರಣ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತೆ ಎಂಬ ಸುದ್ದಿಗಳೆಲ್ಲವು ಕೇವಲ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸೃಷ್ಟಿಸಿರುವ ಕತೆಗಳು ಎಂದು ತಿಳಿದುಬಂದಿದೆ. ಆದರೆ ಇದೆಲ್ಲವೂ ನಿಜವಲ್ಲ ಎಂಬ ಅಧಿಕೃತ ಮಾಹಿತಿಯನ್ನು ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ನೀಡಿದ್ದಾರೆ.

ಟ್ವೀಟ್ ಮಾಡಿದ ಕಾರ್ತಿಕ್ ಗೌಡ
ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಈ ಕುರಿತಂತೆ ಟ್ವೀಟ್ ಮಾಡಿದ್ದು, ‘ಸದ್ಯ ಹರಿದಾಡುತ್ತಿರುವ ಸುದ್ದಿಗಳೆಲ್ಲ ಊಹಾಪೋಹ ಆಗಿವೆ. ಸದ್ಯ ನಮ್ಮ ಮುಂದೆ ಸಾಕಷ್ಟು ಎಕ್ಸೈಟಿಂಗ್ ಪ್ರಾಜೆಕ್ಟ್‌ಗಳಿವೆ. ಶೀಘ್ರದಲ್ಲಂತೂ ಹೊಂಬಾಳೆ ಫಿಲ್ಮ್ಸ್‌ ‘ಕೆಜಿಎಫ್ 3′ ಶುರು ಮಾಡುವುದಿಲ್ಲ. ನಾವು ಆ ಸಿನಿಮಾದ ಕೆಲಸವನ್ನು ಪ್ರಾರಂಭಿಸಿದಾಗ ಭರ್ಜರಿಯಾಗಿಯೇ ಅದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ..’ ಎಂದು ಹೇಳಿದ್ದಾರೆ. ಅಲ್ಲಿಗೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗಳು ಸದ್ಯಕ್ಕೆ ಸುಳ್ಳು ಎಂದು ಸ್ವತಃ ಹೊಂಬಾಳೆ ಸಂಸ್ಥೆಯೇ ಹೇಳಿದೆ.

ಕೆಜಿಎಫ್​-2 ಬಿಡುಗಡೆ ನಂತರವೂ ಯಶ್ ತಮ್ಮ ಹೊಸ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸದ್ಯಕ್ಕೆ ಅವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಇರುವ ವಿಡಿಯೋವೊಂದನ್ನು ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದಷ್ಟು ಬೇಗ ನಿಮ್ಮ ಹೊಸ ಸಿನಿಮಾ ಘೋಷಿಸಿ ಎಂದು ರಾಕಿ ಭಾಯ್ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಕೆಜಿಎಫ್ ಚಾಪ್ಟರ್‌ 3 ಸಿನಿಮಾ ಬರುತ್ತದೆ ಎನ್ನು ವಿಚಾರಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳನ್ನು ಹೊಂಬಾಳೆ ಸಂಸ್ಥೆ ಘೋಷಿಸಿಲ್ಲ, ಅಂತಹ ವಿಚಾರಗಳು ಇದ್ದರೆ ಮುಂದಿನ ದಿನಗಳಲ್ಲಿ ಸಂಸ್ಥೆಯೇ ತಿಳಿಸುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಧನುಷ್‌ರವರ ‘ಕೊಲವೆರಿ ಡಿ’ ಹಾಡನ್ನು ಬೇರೆ ಜಾಹಿರಾತಿನಿಂದ ಕದಿಯಲಾಗಿದೆ ಎಂಬುದು ಸತ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.