ಫ್ಯಾಕ್ಟ್‌ಚೆಕ್: ಬಾಂಗ್ಲಾ ನುಸುಳುಕೋರರಿಗೆ ದಹಲಿ ಸರ್ಕಾರ ಆಶ್ರಯ ನೀಡಿದೆ ಎಂದು ಸುಳ್ಳು ಸುದ್ದಿ ಹರಡಿದ ಬಿಜೆಪಿ ಮುಖಂಡರು

ದೆಹಲಿ ಸರ್ಕಾರದ ಕುರಿತು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದ ವರದಿಗಾರರೊಬ್ಬರು ಮಸೀದಿಯಿಂದ ಹೊರಬರುತ್ತಿದ್ದ ಕೆಲವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಕೆಲವರು ತಮಗೆ ಹಿಂದಿ ಬರುವುದಿಲ್ಲ, ತಾವು ಬಾಂಗ್ಲಾದೇಶೀಯರು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ರೋಹಿಂಗ್ಯಾ ಸಮುದಾಯದ ನುಸುಳುಕೋರರು ದೆಹಲಿಯಲ್ಲಿ ನಿರ್ಭೀತಿಯಿಂದ ಓಡಾಡಿಕೊಂಡಿದ್ದಾರೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆ ನೀಡಲಾಗಿದೆ. ದೆಹಲಿಯ ಶಾಹೀನ್‌ಬಾಗ್ ಸುತ್ತ ಬಾಂಗ್ಲಾದೇಶಿ ನುಸುಳುಕೋರರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಶ್ವಿನಿ ಉಪಾಧ್ಯಾಯ ಸೇರಿ ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು “ಬಾಂಗ್ಲಾದೇಶಿ-ರೋಹಿಂಗ್ಯಾ ನುಸುಳುಕೋರರು” ಎಂದು ಉಲ್ಲೇಖಿಸಿ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಅವರನ್ನು 10-20 ವರ್ಷಗಳ ಕಾಲ ಜೈಲಿನಲ್ಲಿ ಇಡಬೇಕು ಎಂದು ಬರೆದಿದ್ದಾರೆ. ಅವರ ಟ್ವಿಟರ್ ಮತ್ತು ಫೇಸ್‌ಬುಕ್ ಎರಡರಲ್ಲೂ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ಶೇರ್ ಮಾಡಿರುವ ವಿಡಿಯೊಗಳು 2.5 ಲಕ್ಷ ವೀವ್ಸ್‌ ಪಡೆದಿದೆ.

ಟ್ವಿಟರ್ ಮತ್ತು ಫೇಸ್‌ಬುಕ್ ನ ಹಲವು ಬಳಕೆದಾರರು ಈ ವಿಡಿಯೋಗಳನ್ನು ಶೇರ್ ಮಾಡಿದ್ದು ದೆಹಲಿಯಲ್ಲಿ ಬಾಂಗ್ಲಾ ನುಸುಳುಕೋರರರಿಗೆ ದೆಹಲಿ ಸರ್ಕಾರ ಆಶ್ರಯ ನೀಡಿದೆ ಎಂದು ಆರೋಪಿಸಿದ್ದಾರೆ. BJP ಮುಖಂಡರು ಮತ್ತು ಬೆಂಬಲಿಗರು ಮಾಡಿರುವ ಆರೋಪದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

‘ವರ್ತಮಾನ್ ಭಾರತ್’ ಸಂದರ್ಶನ ಮಾಡಿದ ಬಾಂಗ್ಲಾದೇಶಿಯರನ್ನು  ವಿಡಿಯೊಗಳ ಮೂಲಕ ಗುರುತಿಸಿ ಅವರನ್ನು  Alt news  ಸಂದರ್ಶಿಸಿ ವಾಸ್ತವದ ವರದಿಯನ್ನು ಮಾಡಿದೆ.  ಆಲ್ಟ್‌ನ್ಯೂಸ್ ವರದಿಯ ಪ್ರಕಾರ, ವೀಡಿಯೊಗಳನ್ನು ಶಾಹೀನ್ ಬಾಗ್‌ನ ಮಸೀದಿ ಅಲ್-ಹಬೀಬ್ ಬಳಿ ಚಿತ್ರೀಕರಿಸಲಾಗಿದೆ. ಹಲವಾರು ಬಾಂಗ್ಲಾದೇಶಿ ಪ್ರವಾಸಿಗರು ಶಾಹೀನ್ ಬಾಗ್ ಬಳಿಯ ಪ್ರದೇಶಗಳಲ್ಲಿ ತಂಗುತ್ತಾರೆ ಎಂಬುದು ತಿಳಿದು ಬಂದಿದೆ.

ಸಂದರ್ಶನದ ವಿಡಿಯೊದಲ್ಲಿ ಕಾಣುವ ಪ್ರವಾಸಿಗರನ್ನು ಗುರುತಿಸಲಾಗಿದ್ದು ಆರಿಫ್ ಹುಸೇನ್, ಫಹಾದ್ ಮಹ್ಫುಜ್ ಚೌಧರಿ, ಸೈಫುಲ್ ಇಸ್ಲಾಂ, ಅಖ್ತರ್ ಹುಸೇನ್ ಮತ್ತು ರಶೀದ್ ಉಲ್ ಹಸನ್. ಅವರು ಮಸ್ಜಿದ್ ಅಲ್-ಹಬೀಬ್‌ನಿಂದ 2 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತಂಗಿದ್ದಾರೆ. ಹೋಟೆಲ್ ಮಾಲೀಕರ ಕೋರಿಕೆಯ ಮೇರೆಗೆ, ಆಲ್ಟ್ ನ್ಯೂಸ್ ವಸತಿ ಸೌಲಭ್ಯಗಳ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ವರದಿಯಲ್ಲಿ ಹೇಳಿದೆ.

ರಶೀದ್ ಉಲ್ ಹಸನ್‌ನೊಂದಿಗೆ ಆಲ್ಟ್‌ನ್ಯೂಸ್‌ ಮಾತನಾಡಿ ಮಾಹಿತಿ ಪಡೆದಿದ್ದು “ನಮಗೆ ಬಾಂಗ್ಲಾದೇಶದಲ್ಲಿ ಮಾಲ್ಟೀಸ್ ರಾಯಭಾರ ಕಚೇರಿ ಇಲ್ಲ. ಹಾಗಾಗಿ ಬಾಂಗ್ಲಾದೇಶ ಸರ್ಕಾರವು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿ,  ಬಾಂಗ್ಲಾದೇಶದ ನಾಗರಿಕರು ಭಾರತಕ್ಕೆ  ಭೇಟಿ ನೀಡಿ, ಮಾಲ್ಟಾ ರಾಯಭಾರ ಕಚೇರಿಯನ್ನು ಸುಲಭವಾಗಿ ಸಂಪರ್ಕಿಸಬಹುದು. ಈಗ ನನ್ನ ಪಾಸ್‌ಪೋರ್ಟ್ ಮಾಲ್ಟೀಸ್ ರಾಯಭಾರ ಕಚೇರಿಯಲ್ಲಿದೆ. ವೀಸಾ ವಿಧಿವಿಧಾನಗಳು ಮುಗಿದ ತಕ್ಷಣ ನಾನು ಬಾಂಗ್ಲಾದೇಶಕ್ಕೆ ಹಿಂತಿರುಗುತ್ತೇನೆ ಎಂದು Alt news ನೊಂದಿಗೆ ಮಾತನಾಡಿದ್ದಾರೆ.

ಅವರ ವಾಸ್ತವ್ಯದ  ಬಗ್ಗೆ ವಿಚಾರಿಸಿದಾಗ, “ಕನಿಷ್ಠ 350 ಬಾಂಗ್ಲಾದೇಶಿಗಳು ವೀಸಾಕ್ಕೆ ಅರ್ಜಿ ಸಲ್ಲಿಸಲು ಇಲ್ಲಿದ್ದಾರೆ. ನಾವು ದೆಹಲಿಯಲ್ಲಿ ಹಲವು ಹೋಟೆಲ್‌ಗಳನ್ನು ಹುಡುಕಿದೆವು ಆದರೆ ಯಾವುದೇ ಕೊಠಡಿಗಳು ಲಭ್ಯವಿರಲಿಲ್ಲ. ಹಾಗಾಗಿ ಪಹರ್‌ಗಂಜ್ ಮತ್ತು ಸರಿತಾ ವಿಹಾರ್‌ನಲ್ಲಿ ಕೊಠಡಿಗಳ ಲಭ್ಯತೆಯ ಬಗ್ಗೆ ಮಾಹಿತಿ ತಿಳಿದು ಇಲ್ಲಿಗೆ ಬಂದೆವು. ಸರಿತಾ ವಿಹಾರ್‌ನಲ್ಲಿ ಉಳಿಯುವ ನಿರ್ಧಾರವು ಪೂರ್ವ ಯೋಜಿತವಲ್ಲ ಎಂದಿದ್ದಾರೆ.

ಮತ್ತೊಬ್ಬ ಬಾಂಗ್ಲಾ ಪ್ರವಾಸಿ ಆರಿಫ್ ಹುಸೇನ್ ಪ್ರತಿಕ್ರಯಿಸಿದ್ದು ಮಾಲ್ಟಾದಲ್ಲಿ ದೀರ್ಘಾವಧಿಯ ವೀಸಾಕ್ಕಾಗಿ ಅರ್ಜಿ ಸಲ್ಲಿಸಿ ಕಳೆದ 40 ದಿನಗಳಿಂದ ಭಾರತದಲ್ಲಿ ತಂಗಿರುವುದಾಗಿ ಹೇಳಿದರು,  ವರ್ತಮಾನ್ ಭಾರತ್ ಪ್ರಸಾರ ಮಾಡಿರುವ ವೀಡಿಯೊ ತಪ್ಪಾಗಿದೆ. ವರದಿಗಾರರು ನನ್ನನ್ನು  ಎಲ್ಲಿಂದ ಬಂದಿದ್ದೇನೆ ಎಂದು ಮಾತ್ರ ಕೇಳಿದರು ಅಷ್ಟೆ. ಮುಂದಿನ ವಿವರಣೆಯನ್ನು ಕೇಳಲಿಲ್ಲ ಹಾಗೂ ಅವರು ವೀಡಿಯೊದ ಉದ್ದೇಶವನ್ನು ಬಹಿರಂಗಪಡಿಸಲಿಲ್ಲ ಎಂದರು. “ಈ ವೀಡಿಯೊ ಬಾಂಗ್ಲಾದೇಶದ ನಾಗರಿಕರ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಡಿಯೊದಲ್ಲಿ ಇರುವವರು ಬಾಂಗ್ಲಾದೇಶಿಯರು ಹೌದು. ಆದರೆ ಅವರು ನುಸುಳುಕೋರರಲ್ಲ ಎಂದು ಆಲ್ಟ್‌ ನ್ಯೂಸ್‌ ವೇದಿಕೆ ವರದಿ ಮಾಡಿದೆ. ವಿಡಿಯೊದಲ್ಲಿ ಇರುವ ಬಾಂಗ್ಲಾದೇಶೀಯರನ್ನು ಖುದ್ದಾಗಿ ಭೇಟಿ ಮಾಡಿ, ಅವರು ದೆಹಲಿಗೆ ಬಂದಿರುವ ಉದ್ದೇಶದ ಕುರಿತು ಮಾಹಿತಿ ಪಡೆದಿರುವುದಾಗಿ ಆಲ್ಟ್‌ನ್ಯೂಸ್‌ ಹೇಳಿದೆ. ಬಾಂಗ್ಲಾದೇಶದಲ್ಲಿ ಮಾಲ್ಟಾ ದೇಶಕ್ಕೆ ವೀಸಾ ನೀಡುವ ವ್ಯವಸ್ಥೆ ಇಲ್ಲ. ಹಾಗಾಗಿ ಕೆಲ ಬಾಂಗ್ಲಾದೇಶೀಯರು ಮಾಲ್ಟಾ ವೀಸಾ ಪಡೆಯಲು ದೆಹಲಿಗೆ ಬಂದಿದ್ದಾರೆ. ಶಾಹೀನ್‌ಬಾಗ್‌ನ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ. ತಾವು ರೋಹಿಂಗ್ಯಾ ಸಮುದಾಯದವರಲ್ಲ ಎಂದು ಖುದ್ದು ಅವರೇ ತಿಳಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ವರದಿಯಲ್ಲಿ ವಿವರಿಸಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೇವಾಲಯದಲ್ಲಿ ಸಮಾಧಿ ನಿರ್ಮಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.